ಧಾರವಾಡ ಸಮೀಪದ ಲಕಮಾಪೂರ ಗ್ರಾಮದ ರೈತ ಮಹಿಳೆಯರು ಭೂಮಿಗೆ ಪೂಜೆ ಸಲ್ಲಿಸುತ್ತಿರುವುದು
(ಸಂಗ್ರಹ ಚಿತ್ರ)
ಹುಬ್ಬಳ್ಳಿ: ರೈತರು ನಂಬಿದ ಭೂತಾಯಿಗೆ ಉಡಿ ತುಂಬುವ ಸಂಭ್ರಮವೇ ಶೀಗಿ ಹುಣ್ಣಿಮೆ. ಈ ಹಬ್ಬವನ್ನು ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಸೀಮಂತ ಹುಣ್ಣಿಮೆ, ಶೀಗಿ ಹುಣ್ಣಿಮೆ, ಭೂಮಿ ಹುಣ್ಣಿಮೆ ಎಂದು ಕರೆಯಲ್ಪಡುವ ರೈತರ ಆಚರಣೆಯು ವಿವಿಧತೆಯಿಂದ ಕೂಡಿದ ಸಂಭ್ರಮವಾಗಿದೆ.
ಶೀಗಿ ಹುಣ್ಣಿಮೆ ಆರಂಭವಾಗುವ ಒಂದು ವಾರಕ್ಕೂ ಮುನ್ನವೇ ರೈತರ ಮನೆಯಲ್ಲಿ ಸಂಭ್ರಮ ಆವರಿಸಿಕೊಳ್ಳುತ್ತದೆ. ಹುಣ್ಣಿಮೆ ಆಚರಣೆಗೆ ತಯಾರಿಸಲಾಗುವ ಚಕ್ಕಲಿ, ಕೋಡುಬಳೆ, ಹೋಳಿಗೆ ಮತ್ತು ಜೋಳದ ಕಡಬು ಸೇರಿ ತರಹೇವಾರಿ ಖಾದ್ಯಗಳನ್ನು ಭೂತಾಯಿಗೆ ನೈವೇದ್ಯವಾಗಿ ಅರ್ಪಿಸಲಾಗುತ್ತದೆ.
ಚರಗ ಚೆಲ್ಲುವುದು ವಿಶೇಷ: ರೈತರು ತಾವು ತಯಾರಿಸಿದ ಖಾದ್ಯಗಳ ಮಿಶ್ರಣವನ್ನು ಭೂತಾಯಿಗೆ ಚರಗ ಚೆಲ್ಲುತ್ತಾರೆ. ಹುಲಿಗೋ- ಹುಲೆಪ್ಪ- ಹುಲಿಗೋ ಎಂಬ ಘೋಷಗಳೊಂದಿಗೆ ಚರಗ ಚೆಲ್ಲುವ ಮೂಲಕ ರೈತರು ಸಂಭ್ರಮಿಸುತ್ತಾರೆ.
ಪಾಂಡವರಿಗೆ ವಿಶೇಷ ಪೂಜೆ: ಉತ್ತರ ಕರ್ನಾಟಕದ ಭಾಗದ ರೈತರು ಭೂತಾಯಿ ಜೊತೆಗೆ ಪಾಂಡವರಿಗೂ ಸಹ ಪೂಜೆ ಸಲ್ಲಿಸುತ್ತಾರೆ. ಕೆಲ ಕಡೆ ಹಸುವಿನ ಸಗಣಿಯಿಂದ ಪಾಂಡವರನ್ನು ತಯಾರಿಸುತ್ತಾರೆ. ಕೆಲ ಕಡೆ ತಮ್ಮ ಹೊಲದಲ್ಲಿನ ಕಲ್ಲುಗಳನ್ನು ತೆಗೆದುಕೊಂಡು ಸುಣ್ಣ ಮತ್ತು ಕೆಂಪು ಮಣ್ಣಿನಿಂದ ಸಿಂಗರಿಸಿ ಪೂಜೆ ಸಲ್ಲಿಸುತ್ತಾರೆ.
ಪುಟ್ಟ ಮಕ್ಕಳ ಸಂಭ್ರಮ: ದಸರಾ ಹಬ್ಬದ ರಜೆ ದಿನ ಇರುವುದರಿಂದ ಚಿಕ್ಕ ಮಕ್ಕಳು ಕೂಡಾ ತಮ್ಮ ಕುಟುಂಬಸ್ಥರ ಜೊತೆಗೆ ಶೀಗಿ ಹುಣ್ಣಿಮೆ ಆಚರಿಸುತ್ತಾರೆ. ತಮ್ಮ ಹೊಲಗಳಿಗೆ ಹೋಗಿ ಪೂಜೆ ಸಲ್ಲಿಸಿದ ಬಳಿಕ ಗಾಳಿಪಟ ಹಾರಿಸುವುದು ಸೇರಿದಂತೆ ವಿವಿಧ ಆಟಗಳನ್ನು ಆಡುವ ಮೂಲಕ ಸಂಭ್ರಮಿಸುತ್ತಾರೆ.
ಕಳೆದ ವರ್ಷ ಹುಣ್ಣಿಮೆಯ ಸಮಯದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡು ಬೆಳೆಗಳೆಲ್ಲ ಎಡೆಕುಂಟೆ ಹೊಡೆಯಲು ಬಂದಿದ್ದವು. ಆದರೆ ಈ ಬಾರಿ ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆಗೆ ಸ್ವಲ್ಪ ಹಿನ್ನಡೆಯಾಗಿದ್ದು, ರೈತರು ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ರೈತ ಚನ್ನಬಸಪ್ಪ ತಿಳಿಸಿದರು.
ಹಿರಿಯರ ಕಾಲದಿಂದಲೂ ನಡೆದ ಪದ್ಧತಿಯನ್ನು ನಾವು ಆಚರಿಸಿಸುತ್ತಿದ್ದೇವೆ. ಈ ಸಲವೂ ಕುಟುಂಬಸ್ಥರೊಂದಿಗೆ ಹೊಲಗಳಿಗೆ ಹೋಗಿ ಭೂಮಿ ಪೂಜೆ ಸಲ್ಲಿಸಿ ಚರಗ ಚೆಲ್ಲುತ್ತೇವೆಶೇಖಪ್ಪ ಯುವರೈತ ಲಕಮಾಪೂರ
ಬೆತ್ತದ ಬುಟ್ಟಿಯ ಮೇಲೆ ಕಲಾಕೃತಿ ಸೊಬಗು
ಶೀಗಿ ಹುಣ್ಣಿಮೆಯ ಮತ್ತೊಂದು ವಿಶೇಷವೆಂದರೆ ಬೆತ್ತದ ಬುಟ್ಟಿ ಕಲಾಕೃತಿ. ಬೆತ್ತದ ಬುಟ್ಟಿಗೆ ಸಗಣಿಯಿಂದ ಸಾರಿಸಿ ಸುಣ್ಣ ಕೆಂಪು ಮಣ್ಣು ಬಳಸಿ ತಾವು ಪೂಜಿಸುವ ಸೂರ್ಯ ಚಂದ್ರ ಎತ್ತುಗಳು ಹಾಗೂ ಫಸಲಿನ ಚಿತ್ರಗಳನ್ನು ಪುಂಡಿ ನಾರಿನ ಕುಂಚದ ಸಹಾಯದಿಂದ ಚಿತ್ರಿಸುತ್ತಾರೆ. ದಕ್ಷಿಣ ಕರ್ಣಾಟಕ ಭಾಗದಲ್ಲಿ ಭುಮಣ್ಣಿ ಬುಟ್ಟಿ ಎಂದು ಕರೆಯಲಾಗುವ ಇದನ್ನು ಮಹಾನವಮಿ ಆರಂಭದಿಂದಲೂ ತಯಾರಿಸಲು ಪ್ರಾರಂಭಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.