ADVERTISEMENT

ಮನೆಮಂದಿಗಷ್ಟೇ ‘ಶೀರ್‌ಕುರ್ಮಾ’ ಖುಷಿ

ಮನೆಯಲ್ಲೇ ಹಬ್ಬದ ಆಚರಣೆಗೆ ಮುಸ್ಲಿಮರ ತಯಾರಿ

​ಪ್ರಜಾವಾಣಿ ವಾರ್ತೆ
Published 24 ಮೇ 2020, 19:30 IST
Last Updated 24 ಮೇ 2020, 19:30 IST
ಶೀರ್‌ ಕುರ್ಮಾ
ಶೀರ್‌ ಕುರ್ಮಾ   

ಹುಬ್ಬಳ್ಳಿ: ಈದ್‌ ಉಲ್‌ ಫಿತ್ರ್‌ ಬಂತೆಂದರೆ ಸಾಕು ಪ್ರತಿ ವರ್ಷ ಎಲ್ಲೆಡೆ ಸಂಭ್ರಮ ಮನೆ ಮಾಡುತ್ತಿತ್ತು. ಈ ಹಬ್ಬಕ್ಕಾಗಿಯೇ ವಿಶೇಷವಾಗಿ ಶೀರ್‌ಕುರ್ಮಾ ತಯಾರಿಸಿ ಮುಸ್ಲಿಮರು ಎಲ್ಲ ಧರ್ಮಗಳ ಸ್ನೇಹಿತರು, ಆತ್ಮೀಯರನ್ನು ಮನೆಗೆ ಊಟಕ್ಕೆ ಆಹ್ವಾನಿಸಿ ಖುಷಿಪಡುತ್ತಿದ್ದರು. ಈಗ ಕೊರೊನಾ ಭೀತಿ ಇರುವ ಕಾರಣ ಈ ಬಾರಿಯ ‘ಶೀರ್‌ಕುರ್ಮಾ’ ಸಂತಸ ಮನೆಗಳಿಗಷ್ಟೇ ಸೀಮಿತವಾಗಿದೆ.

ಒಂದು ತಿಂಗಳು ರಂಜಾನ್‌ ಆಚರಣೆ ಮಾಡಿ ಹಬ್ಬದ ದಿನದಂದು ಎಲ್ಲರ ಜೊತೆ ಖುಷಿಯಿಂದ ನೆನಪುಗಳನ್ನು ಹಂಚಿಕೊಳ್ಳಲಾಗುತ್ತಿತ್ತು. ಈ ಸಲ ಹಿಂದಿನ ಖುಷಿಯ ದಿನಗಳನ್ನೇ ನೆನಪಿಸಿಕೊಂಡು ಈದ್ ಉಲ್‌ ಫಿತ್ರ್‌ ದಿನ ಕಳೆಯುವಂತಾಗಿದೆ ಎನ್ನುತ್ತಾರೆ ಮುಸ್ಲಿಂ ಯುವಕ ಮೊಹಮ್ಮದ್‌ ಹುಸೇನ್‌ ಹಾಜಿ.

‘ಈ ಬಾರಿ ನಮಗೆ ಸಂಭ್ರಮವಿಲ್ಲದಂತಾಗಿದೆ. ಎಲ್ಲರೂ ಒಂದಾಗಿ ಪ್ರಾರ್ಥನೆ ಮಾಡುವುದು, ಹಬ್ಬಕ್ಕೆ ಬಟ್ಟೆ ಹಾಗೂ ದಿನಸಿ ಖರೀದಿ, ಒಂದುಗೂಡಿ ಊಟ ಮಾಡುವುದು ಇದು ಯಾವುದೂ ಇಲ್ಲದಂತಾಗಿದೆ. ಇದರಿಂದ ಏನನ್ನೊ ಕಳೆದುಕೊಂಡಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

ರಂಜಾನ್‌ ಇಫ್ತಿಯಾರ್‌ನ 15 ಮತ್ತು 27ನೇ ದಿನ ವಿಶೇಷವಾಗಿರುತ್ತದೆ. ಆ ದಿನಗಳಲ್ಲಿ ಸರ್ವಧರ್ಮೀಯರೆಲ್ಲ ಸೇರಿ ಇಫ್ತಿಯಾರ್‌ ಮಾಡುತ್ತಿದ್ದೆವು. ಇದಕ್ಕಾಗಿ ಬೇರೆಯವರ ಮನೆಗಳಿಗೂ ಹೋಗುತ್ತಿದ್ದೆವು. ಈ ಸಲ ಯಾರನ್ನೂ ಮನೆಗೆ ಕರೆಯುತ್ತಿಲ್ಲ ಎಂದರು.‌

ನಮ್ಮ ಪಾಲಿಗೆ ರಂಜಾನ್‌ ಮಾಸ ಅತಿ ದೊಡ್ಡ ವ್ರತಾಚರಣೆ. ಸೋಂಕಿನ ಕಾರಣದಿಂದ ಈ ವರ್ಷ ಏನೂ ಇಲ್ಲದಂತಾಗಿದೆ. ಒಟ್ಟಾಗಿ ಪ್ರಾರ್ಥನೆ ಕೂಡ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹುಬ್ಬಳ್ಳಿ ಯೂತ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಶಾಜಮಾನ್‌ ಮುಜಾಹಿದ್‌ ಹೇಳಿದರು.

‘ಸೋಂಕಿನ ಈ ದಿನಗಳಲ್ಲಿ ಹಬ್ಬದ ಸಂಭ್ರಮ ಕಾಣದಾಗಿದೆ. ಇದೆಲ್ಲಾ ಮುಗಿದ ಮೇಲೆ ಮತ್ತೊಮ್ಮೆ ಇಫ್ತಿಯಾರ್‌ ಮಾಡುತ್ತೇವೆ. ಇಂದು ಹಬ್ಬಕ್ಕಿಂತ ಎಲ್ಲರೂ ಸುರಕ್ಷಿತವಾಗಿರುವುದು ಮುಖ್ಯ. ಸಂಕಷ್ಟದ ಕಾಲದಲ್ಲೂ 100 ಕೆ.ಜಿ. ಫಲಾವ್‌ ತಯಾರಿಸಿ ಅಸಹಾಯಕರಿಗೆ ಹಂಚಿದ್ದೇವೆ. ರಂಜಾನ್‌ ಸಮಯದಲ್ಲಿ ದುಡಿಯಲು ಆಗದವರು, ನಿರಾಶ್ರಿತರು, ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್‌ಗಳನ್ನು ಹಂಚಿ ನಮ್ಮ ಆಚರಣೆ ಪಾಲಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.