ADVERTISEMENT

ಶೀಘ್ರ 55 ಸ್ಮಾರ್ಟ್‌ ಕಾಮಗಾರಿ ಉದ್ಘಾಟನೆ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಶಂಕರಪಾಟೀಲ ಮುನೇನಕೊಪ್ಪ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 15:17 IST
Last Updated 10 ಜನವರಿ 2022, 15:17 IST
ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಹುಬ್ಬಳ್ಳಿಯ ಹಳೇ ಬಸ್‌ನಿಲ್ದಾಣ ಕಾಮಗಾರಿಯನ್ನು ಸೋಮವಾರ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಶಾಸಕ ಜಗದೀಶ ಶೆಟ್ಟರ್‌ ಕಟ್ಟಡದ ನೀಲನಕ್ಷೆ ವೀಕ್ಷಿಸಿದರು
ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಹುಬ್ಬಳ್ಳಿಯ ಹಳೇ ಬಸ್‌ನಿಲ್ದಾಣ ಕಾಮಗಾರಿಯನ್ನು ಸೋಮವಾರ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಶಾಸಕ ಜಗದೀಶ ಶೆಟ್ಟರ್‌ ಕಟ್ಟಡದ ನೀಲನಕ್ಷೆ ವೀಕ್ಷಿಸಿದರು   

ಹುಬ್ಬಳ್ಳಿ: ‘ಅವಳಿ ನಗರದಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಮೊದಲ ಮತ್ತು ಎರಡನೇ ಹಂತದಲ್ಲಿ ಕೈಗೆತ್ತಿಕೊಂಡಿದ್ದ 59 ಕಾಮಗಾರಿಗಳಲ್ಲಿ 55 ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದಿದ್ದು, ಶೀಘ್ರದಲ್ಲಿ ಲೋಕಾರ್ಪಣೆ ಮಾಡಲಾಗುವುದು’ ಎಂದು ಸಚಿವ ಶಂಕರಪಾಟೀಲ ಮುನೇನಕೊಪ್ಪ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಪ್ಪಿಕಎದ ರಸ್ತೆ, ದಾಜಿಬಾನ್‌ ಪೇಟೆ, ಮೂರುಸಾವಿರ ಮಠ ರಸ್ತೆ ಸೇರಿದಂತೆ ಬಹುತೇಕ ರಸ್ತೆ ಕಾಮಗಾರಿಗಳು ಮುಕ್ತಾಯದ ಹಂತಕ್ಕೆ ಬಂದಿವೆ. ತಾಂತ್ರಿಕ ತೊಂದರೆಯಿಂದಾಗಿ ಕೆಲವೆಡೆ ಕಾಮಗಾರಿ ವಿಳಂಬವಾಗುತ್ತಿದೆ. ಮಹಾನಗರ ಪಾಲಿಕೆ, ಜಲಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

‘ಸ್ಮಾರ್ಟ್‌ ಸಿಟಿ ಕಾಮಗಾರಿಗೆ ಹಣಕಾಸಿನ ತೊಂದರೆಯಿಲ್ಲ. ಗುತ್ತಿಗೆದಾರರಿಂದ ಸರಿಯಾಗಿ ಕೆಲಸ ತೆಗೆದುಕೊಳ್ಳಲು ಮುಂದಾಗಬೇಕು. ಕಾಮಗಾರಿ ನಡೆಯುತ್ತಿರುವಲ್ಲಿ ನಿರ್ಬಂಧಿತ ಪ್ರದೇಶ ಎಂದು ನಾಮಫಲಕ ಅಳವಡಿಸಿ ಕೆಲಸ ಮಾಡಬೇಕು. ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ ಉದ್ಘಾಟನೆಗೆ ಸಿದ್ಧಪಡಿಸಬೇಕು’ ಎಂದು ಹೇಳಿದರು.

ಶಾಸಕ ಜಗದೀಶ ಶೆಟ್ಟರ್ ಮಾತನಾಡಿ, ‘ಸ್ಮಾರ್ಟ್‌ಸಿಟಿ ಅಡಿಯಲ್ಲಿ ಎಲ್ಲೆಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿವೆಯೋ ಅವೆಲ್ಲವನ್ನೂ ಶೀಘ್ರ ಮುಗಿಸಲು ಗುತ್ತಿಗೆದಾರರಿಗೆ ಸೂಚಿಸಬೇಕು. ವಾಹನಗಳ ಸಂಚಾರದಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂದಾದರೆ, ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಮಾಡಿ ರಸ್ತೆ ಬಂದ್‌ ಮಾಡಬೇಕು. ಆಗ ಹಗಲು–ರಾತ್ರಿ ಕಾಮಗಾರಿ ಮಾಡಬಹುದಾಗಿದೆ’ ಎಂದರು.

‘ಕೆಲವೆಡೆ ರಸ್ತೆ ಕಾಮಗಾರಿ ಮುಕ್ತಾಯವಾಗಿದೆ. ಆದರೆ, ಅದಕ್ಕೆ ಬಳಸಲು ತಂದ ಕಚ್ಚಾ ಸಾಮಗ್ರಿಗಳೆಲ್ಲ ಅಲ್ಲಿಯೇ ಬಿದ್ದಿವೆ. ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಅವುಗಳನ್ನು ತಕ್ಷಣ ತೆರವುಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಬೇಕು. ಕೇಂದ್ರ ರಸ್ತೆ ನಿಧಿಯಲ್ಲಿಯೂ ಕೆಲವೆಡೆ ರಸ್ತೆ ಕಾಮಗಾರಿ ಆರಂಭವಾಗಿದೆ. ಆದರೆ, ಜಲಮಂಡಳಿ, ಯುಜಿಡಿ, ಹೆಸ್ಕಾಂ ನಡುವೆ ಪರಸ್ಪರ ಸಹಕಾರ ಇಲ್ಲದ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಮಗಾರಿ ವೀಕ್ಷಣೆ: ಸಭೆಗೂ ಮುನ್ನ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಶಾಸಕ ಜಗದೀಶ ಶೆಟ್ಟರ್‌ ಅವರು ಹಳೇ ಬಸ್‌ನಿಲ್ದಾಣದ ಕಟ್ಟಡ, ಬೆಳಗಾಂವ್‌ ಗಲ್ಲಿ ರಸ್ತೆ ಹಾಗೂ ತೋಳನಕೆರೆ ಉದ್ಯಾನ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿದರು. ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ವಾಕರಸಾಸಂ ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ಭಟ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.