
ಧಾರವಾಡ: ‘ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳಲು ಮುಂದಿನ ಮುಖ್ಯಮಂತ್ರಿ ಎಂದು ಸತೀಶ ಜಾರಕಿಹೊಳಿ ಹೆಸರನ್ನು ತೇಲಿಬಿಟ್ಟು ಗೊಂದಲ ಸೃಷ್ಟಿಸಿದ್ದಾರೆ. ಮುಖ್ಯಮಂತ್ರಿಯಾಗಲು ಬೇಕಾದಷ್ಟು ಶಾಸಕರ ಬೆಂಬಲ ಜಾರಕಿಹೊಳಿ ಅವರಿಗಿಲ್ಲ ಹೀಗಾಗಿ, ಅವರ ಹೆಸರು ತೇಲಿಬಿಟ್ಟಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಟೀಕಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸ್ವಲ್ಪದಿನ ಬಿಟ್ಟು ಜಿ.ಪರಮೇಶ್ವರ, ನಂತರ ಡಾ.ಎಚ್.ಸಿ.ಮಹದೇವಪ್ಪ ಅವರ ಹೆಸರು ತೇಲಿಬಿಡುತ್ತಾರೆ. ಆನಂತರ ಖರ್ಗೆ ಬರುತ್ತಾರೆ ಎಂದು ಸುದ್ದಿ ಹಬ್ಬಿಸುತ್ತಾರೆ. ಸಿದ್ದರಾಮಯ್ಯ ಅವರು ಜಾಣ ರಾಜಕಾರಣಿ’ ಎಂದು ಕುಟುಕಿದರು.
‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಯನ್ನು ಸರಳವಾಗಿ ಬಿಟ್ಟುಕೊಡುವವರಲ್ಲ. ಅವರು ಸುಗಮವಾಗಿ ಇರಲು ಡಿ.ಕೆ.ಶಿವಕುಮಾರ್ ಬಿಡುವವರಲ್ಲ. ಇವರಿಬ್ಬರು ರಾಜ್ಯದ ಅಭಿವೃದ್ಧಿ ಬಿಟ್ಟು ಜಾತಿ ಗಣತಿ, ಆರ್‌ಎಸ್‌ಎಸ್, ಮುಂದಿನ ಮುಖ್ಯಮಂತ್ರಿ ‘ಹವಾ’ ಎಬ್ಬಿಸಿ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದ್ಧಾರೆ. ಇದು ಕಾಂಗ್ರೆಸ್‌ನವರ ನಾಟಕ’ ಎಂದು ವ್ಯಂಗ್ಯವಾಡಿದರು.
‘ಬಿ.ಕೆ.ಹರಿಪ್ರಸಾದ್ ಅವರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಮಾತನಾಡುವಂಥ ವ್ಯಕ್ತಿತ್ವ ಇಲ್ಲ. ಆರ್‌ಎಸ್‌ಎಸ್‌ಥೆಗೆ ಹರಿಪ್ರಸಾದ್ ಅಂಥವರ ‘ಸರ್ಟಿಫಿಕೇಟ್’ ಬೇಕಾಗಿಲ್ಲ. ತಮ್ಮ ವ್ಯಾಪ್ತಿಯಲ್ಲಿ ರಾಜಕಾರಣ ಮಾಡಿ ಎಂದು ಅವರನ್ನು ವಿನಂತಿಸುತ್ತೇನೆ’ ಎಂದು ಪ್ರತಿಕ್ರಿಯಿಸಿದರು.
‘ನವೆಂಬರ್ ಮೊದಲ ವಾರದಲ್ಲಿ ಧಾರವಾಡ ನಗರಸಾರಿಗೆ ಬಸ್ ನಿಲ್ದಾಣ (ಸಿಬಿಟಿ) ಉದ್ಗಾಟನೆ ಮಾಡಲಾಗುವುದು. ಸಾರಿಗೆ ಸಚಿವ ಉದ್ಘಾಟನೆಗೆ ಆಗಮಿಸುತ್ತಾರೆ’ ಎಂದು ಉತ್ತರಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.