ADVERTISEMENT

ಸಿದ್ಧಾರೂಢ ಸ್ವಾಮಿ ಕ್ಲಬ್‌ ಜಯಭೇರಿ

ಬಿಡಿಕೆ, ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ ತಂಡಗಳಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 7:51 IST
Last Updated 17 ಏಪ್ರಿಲ್ 2021, 7:51 IST

ಹುಬ್ಬಳ್ಳಿ: ರವಿ ಜಿತೂರಿ (66) ಅರ್ಧಶತಕದ ಬಲದಿಂದ ಉತ್ತಮ ಮೊತ್ತ ಕಲೆಹಾಕಿದ ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ಸ್ಪೋರ್ಟ್ಸ್‌ ಕ್ಲಬ್‌, ಕೆಎಸ್‌ಸಿಎ ಧಾರವಾಡ ವಲಯ ಆಯೋಜಿಸಿರುವ ಎರಡನೇ ಡಿವಿಷನ್‌ ಕ್ರಿಕೆಟ್ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ 92 ರನ್‌ಗಳ ಭರ್ಜರಿ ಗೆಲುವು ಪಡೆಯಿತು.

ರೈಲ್ವೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಸಿದ್ಧಾರೂಢ ಸ್ವಾಮಿ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 264 ರನ್‌ ಕಲೆಹಾಕಿತು. ಎದುರಾಳಿ ಗದುಗಿನ ಜನೋಪಂತರ್‌ ಕ್ರಿಕೆಟ್‌ ಅಕಾಡೆಮಿ 30.2 ಓವರ್‌ಗಳಲ್ಲಿ 172 ರನ್‌ ಗಳಿಸಿ ಆಲೌಟ್‌ ಆಯಿತು. ವಿಜಯೀ ತಂಡದ ಅಭಿಷೇಕ ಬಾಳಿಕಾಯಿ ನಾಲ್ಕು, ಸುರೇಶಚಂದ್ರ ಐ. ಎರಡು ಮತ್ತು ಸಂತೋಷಕುಮಾರ ಕೆ. ಮೂರು ವಿಕೆಟ್‌ ಕಬಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿಭಾಯಿಸಿದರು.

ಇಲ್ಲಿನ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚುರುಕಿನ ಬೌಲಿಂಗ್‌ ಪ್ರದರ್ಶಿಸಿದ ಭಟ್ಕಳ ಸ್ಪೋರ್ಟ್ಸ್‌ ಕ್ಲಬ್‌ ‘ಎ’ ತಂಡದವರು 78 ರನ್‌ಗಳ ಗೆಲುವು ಸಾಧಿಸಿದರು.

ADVERTISEMENT

ಮೊದಲು ಬ್ಯಾಟ್‌ ಮಾಡಿದ ಭಟ್ಕಳದ ತಂಡ‌ 45.5 ಓವರ್‌ಗಳಲ್ಲಿ 10 ವಿಕೆಟ್‌ ನಷ್ಟಕ್ಕೆ 240 ರನ್‌ ಗಳಿಸಿ ಆಲೌಟ್‌ ಆಯಿತು. ಎದುರಾಳಿ ಹುಬ್ಬಳ್ಳಿಯ ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್‌ 39.5 ಓವರ್‌ಗಳಲ್ಲಿ 162 ರನ್ ಗಳಿಸಿ ತನ್ನ ಹೋರಾಟ ಮುಗಿಸಿತು. ಭಟ್ಕಳ ತಂಡದ ಮೊಹಮ್ಮದ್‌ ಆರೀಫ್‌ ಮೂರು ವಿಕೆಟ್ ಪಡೆದರೆ, ಸೈಯದ್‌ ಆಸೀಫ್‌, ಮೊಹಮ್ಮದ್‌ ಆರೀಫ್‌, ಮೊಹಮ್ಮದ್‌ ಸವಾಫ್‌ ತಲಾ ಎರಡು ವಿಕೆಟ್‌ ಕಬಳಿಸಿ ಬೌಲಿಂಗ್‌ನಲ್ಲಿ ಮಿಂಚಿದರು.

ಜಿಮ್ಖಾನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ ‘ಬಿ’ ತಂಡ 35.1 ಓವರ್‌ಗಳಲ್ಲಿ 159 ರನ್‌ ಗಳಿಸಿತು. ಸಾಧಾರಣ ಮೊತ್ತದ ಈ ಗುರಿಯನ್ನು ಎದುರಾಳಿ ಗದುಗಿನ ಸ್ಪೋರ್ಟ್ಸ್‌ ಅಕಾಡೆಮಿ 45.4 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಮುಟ್ಟಿತು. ಗದಗ ತಂಡದ ಅಸ್ಲಾಂ ಎಂ. ಐದು ವಿಕೆಟ್‌ ಕಬಳಿಸಿ ಗಮನ ಸೆಳೆದರು.

ಅಗ್ರಸ್ಥಾನದಲ್ಲಿ ಸಿಸಿಕೆ, ನೀನಾ ಸ್ಪೋರ್ಟ್ಸ್‌
ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆದಿರುವ ಧಾರವಾಡದ ಕ್ರಿಕೆಟ್‌ ಕ್ಲಬ್‌ ಆಫ್‌ ಕರ್ನಾಟಕ (ಸಿಸಿಕೆ) ಮತ್ತು ಬೆಳಗಾವಿಯ ನೀನಾ ಸ್ಪೋರ್ಟ್ಸ್‌ ಕ್ಲಬ್‌ ‘ಎ’ ತಂಡಗಳು ಶುಕ್ರವಾರದ ಅಂತ್ಯಕ್ಕೆ ಅಂಕಪಟ್ಟಿಯ ‘ಎ’ ಗುಂಪಿನಲ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿವೆ. ಉಭಯ ತಂಡಗಳ ಖಾತೆಯಲ್ಲಿ ತಲಾ ನಾಲ್ಕು ಅಂಕಗಳಿವೆ. ಬೆಳಗಾವಿಯ ಆನಂದ ಅಕಾಡೆಮಿ, ವಿಜಯ ಕ್ರಿಕೆಟ್‌ ಅಕಾಡೆಮಿ ತಲಾ ನಾಲ್ಕು ಅಂಕಗಳನ್ನು ಹೊಂದಿದ್ದು, ಇಂಡಿಯನ್‌ ಬಾಯ್ಸ್‌ ಹಾಗೂ ಹುಬ್ಬಳ್ಳಿಯ ಟ್ಯಾಲೆಂಟ್‌ ಸ್ಪೋರ್ಟ್ಸ್‌ ಇನ್ನು ಅಂಕಗಳ ಖಾತೆ ತೆರೆದಿಲ್ಲ.

‘ಬಿ’ ಗುಂಪಿನಲ್ಲಿರುವ ಭಟ್ಕಳ ಸ್ಪೋರ್ಟ್ಸ್‌ ಕ್ಲಬ್‌ ಹಾಗೂ ಗದುಗಿನ ಸ್ಪೋರ್ಟ್ಸ್‌ ಕ್ಲಬ್‌ ತಲಾ ನಾಲ್ಕು ಅಂಕಗಳನ್ನು ಹೊಂದಿದ್ದು, ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಸಂಪಾದಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.