
ಕಲಘಟಗಿ: ತಾಲ್ಲೂಕಿನ ಬೇಗೂರ ಗ್ರಾಮದ ಹೊಂಡದಲ್ಲಿ ನೂತನವಾಗಿ ನಿರ್ಮಿಸಿದ ಸಿದ್ಧಾರೂಢರ ತೆಪ್ಪೋತ್ಸವದ ತೇರು ಭಾನುವಾರ ಸಂಭ್ರಮದಿಂದ ಜರುಗಿತು.
ಬೆಳಿಗ್ಗೆಯಿಂದ ಮಹಿಳೆಯರು ಆರತಿ ಹಿಡಿದು, ಕುಂಭಮೇಳ ಹೊತ್ತು ಸಾಗಿದರು. ವಿವಿಧ ವಾದ್ಯ ವೈಭವದೊಂದಿಗೆ ಸಿದ್ಧಾರೂಢರ ಮೂರ್ತಿ ಮೆರವಣಿಗೆ ನಡೆಯಿತು. ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಹೂಮಾಲೆ, ಹಣ್ಣು ಅರ್ಪಿಸಿ ಭಕ್ತಿ ಮೆರೆದರು.
ಕಲಘಟಗಿಯ ಹನ್ನೆರಡು ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ತೆಪ್ಪದ ತೆರಿನ ಕಳಸಾರೋಹಣ ನೆರೆವೇರಿಸಿದರು. ಸಂಜೆ ಹೊಂಡದಲ್ಲಿ ತೆಪ್ಪದ ತೆರಿಗೆ ಗ್ರಾಮದ ಗುರು ಹಿರಿಯರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ತೆರಿಗೆ ಭಕ್ತರು ಉತ್ತತ್ತಿ, ಬಾಳೆಹಣ್ಣು ಎಸೆದರು. ಅನ್ನಪ್ರಸಾದ ಏರ್ಪಡಿಸಲಾಗಿತ್ತು. ಒಂದು ತಿಂಗಳು ಕಾಲ ಗ್ರಾಮದ ಗುರುಚನ್ನಯ್ಯ ಹಿರೇಮಠ ಅವರಿಂದ ಸಿದ್ದಾರೂಢರ ಪುರಾಣ ಪ್ರವಚನ ನಡೆದು ಬಂದಿದೆ. 9 ದಿನಗಳ ಕಾಲ ಬೆಳಿಗ್ಗೆ ಸಂಜೆ ಅಖಂಡ ಶಿವನಾಮ ಸ್ಮರಣೆ ಹಾಗೂ ಸ್ವಾಮೀಜಿಗಳಿಂದ ಪ್ರವಚನ ಜರುಗಿದವು.
ಸಚಿವ ಸಂತೋಷ್ ಲಾಡ್ ಅವರ ಆಪ್ತ ಕಾರ್ಯದರ್ಶಿ ಸೋಮಶೇಖರ ಬೆನ್ನೂರ ಹಾಗೂ ಹುಲ್ಲಂಬಿಯ ಗುರು ರಾಜೇಶ್ವರ ಹಾಗೂ ಸಂಗಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗ್ರಾಮದ ಗುರು ಹಿರಿಯರು ಇದ್ದರು.
ಸೋಮವಾರ ಬೆಳಿಗ್ಗೆ ಮಹಾಮಂಗಲ ಜರುಗಲಿದೆ. ಫೆ.17 ಮಂಗಳವಾರ ಪುರಾಣದ ಉತ್ತರ ಪೂಜೆ, ಅಜ್ಜನ ತೊಟ್ಟಿಲೋತ್ಸವ, ಕೌದಿ ಪೂಜೆಯೊಂದಿಗೆ ಜಾತ್ರೆ ಸಂಪನ್ನಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.