ADVERTISEMENT

ಪರಿಶಿಷ್ಟ ಪಂಗಡಕ್ಕೆ ಸಿದ್ದಿ ಸೇರ್ಪಡೆ: ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2019, 13:27 IST
Last Updated 15 ಡಿಸೆಂಬರ್ 2019, 13:27 IST
ಸಿದ್ದಿ ಬುಡಕಟ್ಟು ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಕೇಂದ್ರ ಸರ್ಕಾರ ಮಸೂದೆ ಮಂಡಿಸಿರುವುದನ್ನು ಸ್ವಾಗತಿಸಿ ಸಿದ್ದಿ ಸಮಾಜದ ಮುಖಂಡರು ಭಾನುವಾರ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಅಭಿನಂದಿಸಿದರು –ಪ್ರಜಾವಾಣಿ ಚಿತ್ರ
ಸಿದ್ದಿ ಬುಡಕಟ್ಟು ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಕೇಂದ್ರ ಸರ್ಕಾರ ಮಸೂದೆ ಮಂಡಿಸಿರುವುದನ್ನು ಸ್ವಾಗತಿಸಿ ಸಿದ್ದಿ ಸಮಾಜದ ಮುಖಂಡರು ಭಾನುವಾರ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಅಭಿನಂದಿಸಿದರು –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ ಮತ್ತು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ನೆಲೆಸಿರುವ ಸಿದ್ದಿ ಬುಡಕಟ್ಟು ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೆ ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿರುವುದನ್ನು ಸ್ವಾಗತಿಸಿ ಸಿದ್ದಿ ಸಮಾಜದ ಮುಖಂಡರು ಭಾನುವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಅಭಿನಂದಿಸಿದರು.

‘ಸಿದ್ದಿ, ತಳವಾರ, ಪರಿವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಬೇಕೆಂಬ ಹಲವು ವರ್ಷಗಳ ಬೇಡಿಕೆ ಇತ್ತು. ಈ ಮಸೂದೆಗೆ ಈಗಾಗಲೇ ರಾಜ್ಯಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಫೆಬ್ರುವರಿಯಲ್ಲಿ ನಡೆಯುವ ಬಜೆಟ್‌ ಅಧಿವೇಶನದಲ್ಲಿ ಲೋಕಸಭೆಯಲ್ಲೂ ಒಪ್ಪಿಗೆ ದೊರೆಯಲಿದೆ. ಬಳಿಕ ಸರ್ಕಾರ ಅಧಿಕೃತವಾಗಿ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಲಿದೆ’ ಎಂದು ಜೋಶಿ ಹೇಳಿದರು.

’ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸಿಸುತ್ತಿರುವ ಸಿದ್ದಿಗಳಿಗೆ 2003ರಲ್ಲೇ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲಾಗಿತ್ತು. ಆದರೆ, ಈ ಸಂದರ್ಭದಲ್ಲಿ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಸಿದ್ದಿಗಳನ್ನು ಸೇರ್ಪಡೆ ಮಾಡಿರಲಿಲ್ಲ. ಅಂದಿನಿಂದ ನಡೆಸಿದ ಹೋರಾಟದ ಫಲವಾಗಿ ಇದೀಗ ಕೇಂದ್ರ ಸರ್ಕಾರ ನಮ್ಮನ್ನೂ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಮುಂದಾಗಿರುವುದು ಅಭಿನಂದನೀಯ’ ಎಂದು ಸಿದ್ದಿ ಬುಡಕಟ್ಟು ಭೂ ಹೋರಾಟ ಸಮಿತಿ ಅಧ್ಯಕ್ಷ ಇಮಾಮಸಾಬ ಎ.ಕಕ್ಕೇರಿ ಹೇಳಿದರು.

ADVERTISEMENT

ಜಿಲ್ಲಾಧಿಕಾರಿಗೆ ಸೂಚನೆ:

ಕಲಘಟಗಿ ತಾಲ್ಲೂಕಿನ ಬೈಚವಾಡ ಮತ್ತು ಡುಂಬುವಳ್ಳಿಯಲ್ಲಿ ನೆಲೆಸಿರುವ ಸಿದ್ದಿ ಸಮಾಜದವರು ಸಾಗುವಳಿ ಮಾಡಿರುವ ಅರಣ್ಯ ಭೂಮಿಯಿಂದ ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಮುಂದಾಗಿದ್ದು, ಇದನ್ನು ತಡೆಯುವಂತೆ ಸಚಿವ ಜೋಶಿ ಅವರಿಗೆ ಮನವಿ ಮಾಡಿದರು.

ಸಿದ್ದಿಗಳನ್ನು ಒಕ್ಕಲೆಬ್ಬಿಸದಂತೆ ಹಾಗೂ ಸಾಗುವಳಿಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಸೂಚಿಸುತ್ತೇನೆ ಎಂದು ಸಚಿವ ಪ್ರಹ್ಲಾದ ಜೋಶಿ ಭರವಸೆ ನೀಡಿದರು.

ಸಿದ್ದಿ ಶಾವಲಿ ಬುಡಕಟ್ಟು ಹಿತ ಹೋರಾಟ ಸಮಿತಿ ಅಧ್ಯಕ್ಷ ಇಬ್ರಾಹಿಂಸಾಬ ಗುಂಜಾವತಿ, ಸಿದ್ದಿ ಸಮುದಾಯದ ಪ್ರಮುಖರಾದ ಲಾರೆನ್ಸ್‌ ಕೈತುನ ಸಿದ್ದಿ, ಗೌಂಸುಸಾಬ ಕರೀಮಸಾಬ ಗುಂಜಾವತಿ, ಮೌಲಾಸಾಬ ಮಮ್ಮುಸಾಬ ಗುಂಜಾವತಿ, ಕಾತುನಬಿ ಕಾಸೀಮಸಾಬ ಕಕ್ಕೇರಿ, ಹಸನಸಾಬ ದಾವಲಸಾಬ ಗುಂಜಾವತಿ, ನೂರಜಾನ ಮೌಲಾಸಾಬಿ ಬೀರ್ಜಿ, ರುಸ್ತುಂ ಮೌಲಾಸಾಬಾ ಗುಂಜಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.