ADVERTISEMENT

ಧಾರವಾಡ | ರಾಷ್ಟ್ರೀಯ ಶಿಕ್ಷಣ ನೀತಿ ವಿರುದ್ಧ ಸಹಿ ಸಂಗ್ರಹ

ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಮೇ 2022, 16:13 IST
Last Updated 3 ಮೇ 2022, 16:13 IST
ಧಾರವಾಡದ ಈದ್ಗಾ ಮೈದಾನದಲ್ಲಿ ಎಐಡಿಎಸ್‌ಒ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಅಭಿಯಾನದಲ್ಲಿ ಹಲವು ಪಾಲಕರು ಪಾಲ್ಗೊಂಡರು
ಧಾರವಾಡದ ಈದ್ಗಾ ಮೈದಾನದಲ್ಲಿ ಎಐಡಿಎಸ್‌ಒ ಹಮ್ಮಿಕೊಂಡಿದ್ದ ಸಹಿ ಸಂಗ್ರಹ ಅಭಿಯಾನದಲ್ಲಿ ಹಲವು ಪಾಲಕರು ಪಾಲ್ಗೊಂಡರು   

ಧಾರವಾಡ: ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ–2020 ವಿರುದ್ಧ ದೇಶದಾದ್ಯಂತ ಒಂದು ಕೋಟಿ ಸಹಿ ಸಂಗ್ರಹ ಅಭಿಯಾನದ ಭಾಗವಾಗಿ ಎಐಡಿಎಸ್‌ಒ ಜಿಲ್ಲಾ ಸಮಿತಿಯ ಕಾರ್ಯಕರ್ತರು ನಗರದ ಈದ್ಗಾ ಮೈದಾನದ ಬಳಿ ಮಂಗಳವಾರ ಸಹಿ ಸಂಗ್ರಹಿಸಿದರು.

‘ಮೇ 1ರಿಂದ ಪ್ರಾರಂಭವಾಗಿರುವ ಸಹಿ ಸಂಗ್ರಹ ಅಭಿಯಾನ ಭಗತ್ ಸಿಂಗ್ ಅವರ ಜನ್ಮದಿನವಾದ ಸೆ. 28ರವರೆಗೂ ನಡೆಯಲಿದೆ. ಎನ್‌ಇಪಿಗೆ ದೇಶದಾದ್ಯಂತ ಪಾಲಕರ ವಿರೋಧವಿದ್ದರೂ, ಹಂತಹಂತವಾಗಿ ಅನುಷ್ಠಾನಗೊಳಿಸುತ್ತಿದೆ. ಸಾರ್ವಜನಿಕ ಶಿಕ್ಷಣವನ್ನು ನಾಶಗೊಳಿಸಿ, ಶಿಕ್ಷಣ ಕ್ಷೇತ್ರದ ಸಂಪೂರ್ಣ ವ್ಯಾಪಾರೀಕರಣಗೊಳಿಸುವ ಉದ್ದೇಶದಿಂದಲೇ ಇದನ್ನು ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಸಂಘಟನೆಯ ಜಿಲ್ಲಾ ಅಧ್ಯಕ್ಷ ಮಹಾಂತೇಶ ಬೀಳೂರು ಆರೋಪಿಸಿದರು.

‘ಎನ್‌ಇಪಿ ಅನುಷ್ಠಾನಗೊಳಿಸುವ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಕರ್ನಾಟಕ ಸರ್ಕಾರ ನಾಲ್ಕು ವರ್ಷದ ಪದವಿ ಕೋರ್ಸ್ ಅನ್ನು ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಜಾರಿ ಮಾಡಲು ಹೊರಟಿದೆ. ಪರೀಕ್ಷೆಗೆ ಇನ್ನೂ ಒಂದು ತಿಂಗಳು ಮಾತ್ರ ಉಳಿದಿದೆ. ಆದರೆ, ಇದಕ್ಕೆ ಪೂರಕವಾದ ಪಠ್ಯವನ್ನು ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಈವರೆಗೂ ಸಿದ್ಧಪಡಿಸಿಲ್ಲ. ಬೋಧಕರ ಕೊರತೆ, ಪಾಠ ಮಾಡಲು ಸಾಮಗ್ರಿ ಕೊರತೆ, ತರಗತಿಗಳ ಕೊರತೆಯಿಂದಾಗಿ ಯಾವುದೇ ಸಮಗ್ರ ರೀತಿಯ ಅಧ್ಯಯಗಳು ನಡೆದಿರಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ’ ಎಂದರು.

ADVERTISEMENT

‘ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪ್ರಸ್ತಾವನೆ ಎನ್‌ಇಪಿಯಲ್ಲಿದೆ. ಶಿಕ್ಷಣದ ಖಾಸಗೀಕರಣ ಕೋಮುವಾದೀಕರಣ, ವಾಣಿಜ್ಯೀಕರಣ ಹಾಗೂ ಕೇಂದ್ರೀಕರಣದ ನೀಲನಕ್ಷೆ ಇದಾಗಿದೆ’ ಎಂದು ಮಹಾಂತೇಶ ಹೇಳಿದರು.

ಈದ್ಗಾ ಮೈದಾನದಲ್ಲಿ ಈದ್ ಉಲ್ ಫಿತ್ರ್‌ ಪ್ರಾರ್ಥನೆಯಲ್ಲಿ ಪಾಲ್ಗೊಂಡವರು ಸಹಿ ಅಭಿಯಾನದಲ್ಲಿ ಪಾಲ್ಗೊಂಡರು. ಸಂಘಟನೆಯ ಉಪಾಧ್ಯಕ್ಷೆ ಶಶಿಕಲಾ ಮೇಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.