ADVERTISEMENT

ಅಂಗಡಿಯಲ್ಲಿ ₹6 ಲಕ್ಷ ನಗದು ಕಳವು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2022, 6:32 IST
Last Updated 28 ಅಕ್ಟೋಬರ್ 2022, 6:32 IST
   

ಹುಬ್ಬಳ್ಳಿ: ನಗರದ ಸುಳ್ಳ ರಸ್ತೆಯ ಮನೋಜ ಪಾರ್ಕ್‌ನಲ್ಲಿರುವ ಕೆ.ಕೆ. ಬಿಸಿನೆಸ್ ಸಲ್ಯೂಷನ್ ಜಿಯೋ ಮಾರ್ಟ್‌ ನಲ್ಲಿ ₹6 ಲಕ್ಷ ನಗದು ಕಳ್ಳತನವಾಗಿದೆ. ಮಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ಪ್ರದೀಪ ಎಂಬಾತ,ಕ್ಯಾಶ್‌ ಬಾಕ್ಸ್‌ನ ಪಾಸ್‌ವರ್ಡ್‌ ತಿಳಿದುಕೊಂಡು ಯಾರೂ ಇಲ್ಲದಿದ್ದಾಗ ಕೃತ್ಯ ಎಸಗಿದ್ದಾನೆ. ನಂತರ ಕೆಲಸಕ್ಕೆ ಬಂದಿಲ್ಲ ಎಂದು ಆರೋಪಿಸಿ ಮಾರ್ಟ್ ಮಾಲೀಕರು ದೂರು ಕೊಟ್ಟಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರ ಕಳ್ಳತನ: ಮನೆಯಲ್ಲಿ ದೀಪಾವಳಿ ಹಬ್ಬದ ಲಕ್ಷ್ಮಿ ಪೂಜೆಗಾಗಿ ಇಟ್ಟಿದ್ದ ₹1.5 ಲಕ್ಷ ಮೌಲ್ಯದ ಲಕ್ಷ್ಮಿ ಮೂರ್ತಿ ಹಾಗೂ ಮಾಂಗಲ್ಯ ಸರವನ್ನು ಕಳ್ಳರು ಕದ್ದಿರುವ ಘಟನೆ ಹಳೇ ಹುಬ್ಬಳ್ಳಿಯ ಸನ್ಮಾನ ಕಾಲೊನಿಯ ಎಲ್. ಹೋಳಿ ಎಂಬುವರ ಮನೆಯಲ್ಲಿ ನಡೆದಿದೆ. ಪೂಜೆ ನಡೆದ ಕೊಠಡಿಯ ತೆರೆದ ಕಿಟಕಿಯಿಂದ ಕಳ್ಳರು ಕೃತ್ಯ ಎಸಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಗೋದಾಮಿಗೆ ಬೆಂಕಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ನಗರದ ಗೊಲ್ಲರ ಕಾಲೊನಿಯಲ್ಲಿರುವ ರಾಜಾಖಾನ ಜಕಾತಿ ಎಂಬುವರಿಗೆ ಸೇರಿದ ಪೇಟಿಂಗ್ ಸೇರಿದ ವಿವಿಧ ಕಚ್ಚಾವಸ್ತುಗಳ ಗೋದಾಮಿಗೆ ಬುಧವಾರ ಬೆಂಕಿ ತಗುಲಿದ್ದು, ಅಪಾರ ಪ್ರಮಾಣದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ವಿಷಯ ತಿಳಿಯುತ್ತಿದ್ದಂತೆ, ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

ADVERTISEMENT

ಅನಿಲ ಸೋರಿಕೆ: ಅಡುಗೆ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿರುವ ಘಟನೆ ನಗರದ ವೀರಾಪುರ ಓಣಿಯ ಮಹಾಂತೇಶ ಶಿಂತ್ರಿ ಎಂಬುವರ ಮನೆಯಲ್ಲಿ ಗುರುವಾರ ಸಂಜೆ ನಡೆದಿದೆ.

ಮನೆಯವರು ಕಾರ್ಯನಿಮಿತ್ತ ಹೊರಕ್ಕೆ ಹೋಗಿದ್ದಾಗ, ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಮನೆಯೊಳಗಿಂದ ಹೊಗೆ ಬರುವುದನ್ನು ಗಮನಿಸಿದ ಅಕ್ಕಪಕ್ಕದವರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಕರೆಯಿಸಿ ಬೆಂಕಿ ನಂದಿಸಲಾಯಿತು. ಘಟನೆಯಲ್ಲಿ ಯಾರಿಗೂ ತೊಂದರೆಯಾಗಿಲ್ಲ ಎಂದು ಬೆಂಡಿಗೇರಿ ಠಾಣೆ ಪೊಲೀಸರು ತಿಳಿಸಿದರು.

ಜೂಜಾಟ: ಬಂಧನ: ಅಳ್ನಾವರ: ದೀಪಾವಳಿ ಹಬ್ಬದಂದು ಜುಗಾರಿ ಆಡುತ್ತಿದ್ದ ತಾಲ್ಲೂಕಿನ ವಿವಿಧ ಜೂಜು ಅಡ್ಡೆಗಳ ಮೇಲೆ ಇಲ್ಲಿನ ಪೊಲೀಸರ ತಂಡ ದಾಳಿ ನಡೆಸಿದ್ದು, ಸುಮಾರು 50 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಅಳ್ನಾವರ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳಲ್ಲಿ ಜೂಜಾಟದಲ್ಲಿ ತೊಡಗಿದ್ದ ಗುಂಪುಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ ಪೊಲೀಸರು ₹55,230 ಹಾಗೂ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.