ADVERTISEMENT

ಸ್ಮಾರ್ಟ್‌ ಕಾರ್ಡ್ ಇದ್ದರಷ್ಟೇ ಸೌಲಭ್ಯ

ಹಮಾಲಿ ಕಾರ್ಮಿಕರಿಗೆ ಕಾರ್ಡ್‌ ವಿತರಣೆ: ಮೀನಾ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 12:38 IST
Last Updated 24 ಸೆಪ್ಟೆಂಬರ್ 2019, 12:38 IST
ಹುಬ್ಬಳ್ಳಿಯಲ್ಲಿ ಮಂಗಳವಾರ ಕಾರ್ಮಿಕ ಕಲ್ಯಾಣ ಇಲಾಖೆಯ ಧಾರವಾಡ ವಿಭಾಗದ ಸಹಾಯಕ ಆಯುಕ್ತೆ ಮೀನಾ ಪಾಟೀಲ ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ವಿತರಿಸಿದರು
ಹುಬ್ಬಳ್ಳಿಯಲ್ಲಿ ಮಂಗಳವಾರ ಕಾರ್ಮಿಕ ಕಲ್ಯಾಣ ಇಲಾಖೆಯ ಧಾರವಾಡ ವಿಭಾಗದ ಸಹಾಯಕ ಆಯುಕ್ತೆ ಮೀನಾ ಪಾಟೀಲ ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ವಿತರಿಸಿದರು   

ಹುಬ್ಬಳ್ಳಿ: ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ಲಭಿಸಬೇಕಾದರೆ ಸ್ಮಾರ್ಟ್‌ ಕಾರ್ಡ್‌ ಅಗತ್ಯವಿದ್ದು, ಪ್ರತಿಯೊಬ್ಬರೂ ಕಾರ್ಡ್‌ಗಳನ್ನು ಪಡೆದುಕೊಳ್ಳಬೇಕು ಎಂದು ಕಾರ್ಮಿಕ ಕಲ್ಯಾಣ ಇಲಾಖೆಯ ಧಾರವಾಡ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ಮೀನಾ ಪಾಟೀಲ ಹೇಳಿದರು.

ಎಪಿಎಂಸಿಯಲ್ಲಿ ಮಂಗಳವಾರ ಅವರು ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ ‘ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಸೆಸ್‌ನಿಂದ ₹8 ಸಾವಿರ ಕೋಟಿ ಸಂಗ್ರಹವಾಗಿದೆ. ಈ ಹಣಕ್ಕೆ ಬರುವ ಬಡ್ಡಿಯಿಂದಲೇ ಸೌಲಭ್ಯ ಕಲ್ಪಿಸಲಾಗುತ್ತಿದೆ. ದುರ್ದೈವವೆಂದರೆ ಸಾಕಷ್ಟು ಕಾರ್ಮಿಕರು ಇದರ ಅನುಕೂಲ ಪಡೆದುಕೊಳ್ಳುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಾರ್ಮಿಕರು ತಮ್ಮ ಆರೋಗ್ಯ ಹಾಗೂ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಬೇಕು’ ಎಂದು ಸಲಹೆ ನೀಡಿದರು.

ADVERTISEMENT

ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿ ‘ಕಾರ್ಮಿಕರ ಹಿತಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಅನೇಕ ಕಾನೂನುಗಳು ಇದ್ದರೂ, ಅವುಗಳ ಲಾಭ ಸಿಗುತ್ತಿಲ್ಲ. ಹಮಾಲಿ ಕಾರ್ಮಿಕರಿಗೆ ವಸತಿ, ಭವಿಷ್ಯ ನಿಧಿ, ಅವರ ಮಕ್ಕಳ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ಸೇರಿದಂತೆ ಅನೇಕ ಸೌಲಭ್ಯಗಳು ಇವೆ’ ಎಂದರು.

ಪಾಲಿಕೆ ಮಾಜಿ ಸದಸ್ಯ ರಾಜಣ್ಣ ಕೊರವಿ ‘ಕಾರ್ಮಿಕರಿಗೆ ಸೌಲಭ್ಯಗಳನ್ನು ಕೊಡಿಸಲು ಅನೇಕ ಸಂಘಟನೆಗಳು ಮುಖಂಡರು ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಕಾರ್ಮಿಕರು ಸಹಕಾರ ಕೊಡಬೇಕು’ ಎಂದರು.

ಎಪಿಎಂಸಿ ಹಮಾಲಿ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಬಸವಣ್ಣೆಪ್ಪ ನೀರಲಗಿ, ಪ್ರಧಾನ ಕಾರ್ಯದರ್ಶಿ ಗುರುಸಿದ್ದಪ್ಪ ಅಂಬಿಗೇರ, ಸದಸ್ಯರಾದ ದುರುಗಪ್ಪ ರಾಯಚೂರ, ಲಕ್ಷ್ಮವ್ವ ಹೊಸೂರಿ, ನಾಗಮ್ಮ, ಜಗದೀಶ ಹಿರೇಮಠ, ಹುಸೇನಸಾಬ ನದಾಫ್‌, ಕರಿಯಪ್ಪ ದಳವಾಯಿ, ಪ್ರೇಮವ್ವ ಅಣ್ಣಿಗೇರಿ, ಮಹಮ್ಮದ್‌ ರಫೀಕ್‌ ಮುಳಗುಂದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.