ADVERTISEMENT

ಬಿಆರ್‌ಟಿಎಸ್‌ಗೆ ಸ್ಮಾರ್ಟ್‌ ಸಿಟಿ ಹಣ ವರ್ಗಾವಣೆಗೆ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2019, 14:34 IST
Last Updated 16 ಸೆಪ್ಟೆಂಬರ್ 2019, 14:34 IST
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿದರು
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿದರು   

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಅನುದಾನದಲ್ಲಿ ತ್ವರಿತ ಸಾರಿಗೆ ಸೇವೆ (ಬಿಆರ್‌ಟಿಎಸ್‌) ವತಿಯಿಂದ ಹಳೇ ಬಸ್‌ ನಿಲ್ದಾಣ ಅಭಿವೃದ್ಧಿ, ವಾಣಿ ವಿಲಾಸ ವೃತ್ತ ವಿಸ್ತರಣೆ, ಬಿಆರ್‌ಟಿಎಸ್‌ ಸಂಚಾರ ಸೇವೆ ವಿಸ್ತರಣೆ ಅಂಗವಾಗಿ ಹೊಸೂರಿನಿಂದ ಗೋಕುಲವರೆಗೆ ಬಸ್‌ ನಿಲ್ದಾಣಗಳ ನಿರ್ಮಾಣಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಲಾಯಿತು.

ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಪರಿಶೀಲನೆ ಕುರಿತು ಸೋಮವಾರ ಐಟಿ ಪಾರ್ಕ್ ಕಟ್ಟಡದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವ ಜೋಶಿ ಅವರು, ನಗರವನ್ನು ಸ್ಮಾರ್ಟ್‌ ಗೊಳಿಸುವ ನಿಟ್ಟಿನಲ್ಲಿ ಯೋಜನೆಗಳಿರುವುದರಿಂದ ಒಪ್ಪಿಗೆ ನೀಡಲಾಗಿದೆ. ಆದರೆ, ಅವುಗಳ ಸಮಗ್ರ ನೀಲನಕ್ಷೆಯನ್ನು ಶನಿವಾರ ನಡೆಯುವ ಸಭೆಯಲ್ಲಿ ಮಂಡಿಸಬೇಕು ಎಂದು ಸೂಚಿಸಿದರು.

ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಮಾತನಾಡಿ, ಹಳೇ ಬಸ್‌ ನಿಲ್ದಾಣವನ್ನು ಅಭಿವೃದ್ಧಿಗೊಳಿಸಿ ಜಿ ಪ್ಲಸ್‌ 3 ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಅದರಲ್ಲಿ ಪಾರ್ಕಿಂಗ್‌, ಆಡಳಿತ ಕಚೇರಿ ಹಾಗೂ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುವುದು. ಜೊತೆಗೆ ಮುಖ್ಯ ರಸ್ತೆಗೆ ಸಂಪರ್ಕಿಸುವ ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದು ಎಂದರು.

ADVERTISEMENT

ಸಚಿವ ಜೋಶಿ ಮಾತನಾಡಿ, ಕೇಂದ್ರದಿಂದ ಚನ್ನಮ್ಮ ವೃತ್ತದ ಸುತ್ತಲೂ ಫ್ಲೈಓವರ್‌ ನಿರ್ಮಾಣ ಮಾಡಲಾಗುತ್ತಿದೆ. ಅದನ್ನು ನೋಡಿಕೊಂಡು ಅದಕ್ಕೆ ಹೊಂದುವಂತೆ ಮೇಲ್ಸೇತುವೆ ನಿರ್ಮಾಣ ಮಾಡಬೇಕು. ಅದಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ಸೂಚಿಸಿದರು.

ಬಿಆರ್‌ಟಿಎಸ್‌ ಯೋಜನೆಯನ್ನು ವಿಸ್ತರಿಸಬೇಕು ಎಂಬ ಜನರ ಬೇಡಿಕೆ ಹಿನ್ನೆಲೆಯಲ್ಲಿ ಹೊಸೂರಿನಿಂದ ಗೋಕುಲವರೆಗೆ 11 ಬಸ್‌ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಒಂದು ನಿಲ್ದಾಣಕ್ಕೆ ₹ 40 ರಿಂದ ₹50 ಲಕ್ಷ ಬೇಕಾಗುತ್ತದೆ. ಒಟ್ಟು ₹ 12 ಕೋಟಿ ಬೇಕು. ಹಾಗೆಯೇ ವಾಣಿ ವಿಲಾಸ ವೃತ್ತದಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಇದೆ. ಅದರ ಅಭಿವೃದ್ಧಿಗೆ ₹ 12 ಕೋಟಿ ನೀಡಬೇಕು ಎಂದು ಚೋಳನ್‌ ಕೋರಿದರು. ಇದಕ್ಕೂ ಸಮ್ಮತಿ ಸೂಚಿಸಲಾಯಿತು

ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಾಜಿ ಮೇಯರ್‌ ಸುಧೀರ ಸರಾಫ್‌, ಜಿಲ್ಲಾಧಿಕಾರಿ ದೀಪಾ ಚೋಳನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.