ಹುಬ್ಬಳ್ಳಿ: ಇಂಧನ ಬೇಡಿಕೆ ಹೆಚ್ಚಾದ ಈ ದಿನಗಳಲ್ಲಿ, ಅದಕ್ಕೆ ಪರ್ಯಾಯವಾದ ಸಂಪನ್ಮೂಲಗಳ ಅಭಿವೃದ್ಧಿ ಪ್ರಧಾನ ಆದ್ಯತೆಯಾಗಿದೆ. ಇಂತಹ ಸಂಪನ್ಮೂಲಗಳಲ್ಲಿ ಪ್ರಮುಖವಾದ ಸೌರಶಕ್ತಿಯ ಸಾಮರ್ಥ್ಯವನ್ನು ‘ಸನ್ ರೇ ಸೋಲಾರ್ ಮ್ಯೂಸಿಯಂ’ ಅನಾವರಣಗೊಳಿಸಿದೆ.
ಇಲ್ಲಿನ ವಿಜಯನಗರದಲ್ಲಿ 2006ರಲ್ಲಿ ಸ್ಥಾಪಿತ ಈ ವಸ್ತು ಸಂಗ್ರಹಾಲಯದಲ್ಲಿ ಸೌರಶಕ್ತಿಯ ತರಹೇವಾರಿ ಉಪಕರಣಗಳಿವೆ. ಇದರ ವಿಶೇಷತೆ ಕುರಿತು ಬರಹವೊಂದು ಕೇಂದ್ರ ಸರ್ಕಾರದ ಸಂಸ್ಕೃತಿ ಇಲಾಖೆಯ ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯಗಳ ಮಂಡಳಿಯ ‘ಭಾರತೀಯ ವಿಜ್ಞಾನ ಮ್ಯೂಸಿಯಂ ಹಾಗೂ ವಿಜ್ಞಾನ ಕೇಂದ್ರಗಳ’ ಕೈಪಿಡಿಯಲ್ಲಿ ಪ್ರಕಟವಾಗಿದೆ.
ಇಲ್ಲಿ ಭೇಟಿ ನೀಡುವ ವಿದ್ಯಾರ್ಥಿಗಳು ಸೇರಿ ಹಲವರು ಅಚ್ಚರಿ ವ್ಯಕ್ತಪಡಿಸುತ್ತಾರೆ. ಐಟಿಐ, ಎಂಜಿನಿಯರಿಂಗ್ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿ ಅಗತ್ಯ ತರಬೇತಿ ಪಡೆದಿದ್ದಾರೆ. ಇದು ಆವಿಷ್ಕಾರ, ಪ್ರಯೋಗಗಳ ತಾಣವೂ ಆಗಿದೆ.
‘ಸೌರಶಕ್ತಿ ಎಂಬುದು ಎಂದಿಗೂ ಮುಗಿಯದ ಸಂಪನ್ಮೂಲವಾಗಿದೆ. ಸೌರಶಕ್ತಿಯ ಮಹತ್ವ ತಿಳಿಪಡಿಸಲು ಮತ್ತು ಬೆಳಕಿನ ಸದ್ಬಳಕೆ ಬಗ್ಗೆ ವಿವರಿಸಲು ಈ ಅಪರೂಪದ ವಸ್ತು ಸಂಗ್ರಹಾಲಯ ಸ್ಥಾಪಿಸಲಾಗಿದೆ’ ಎಂದು ವಸ್ತುಸಂಗ್ರಹಾಲಯ ಸ್ಥಾಪಕ ಮಹೇಶ ವಿ. ಶಿವಶಿಂಪಿಗೇರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸೌರ ಉಪಕರಣಗಳ ಮಾರಾಟಗಾರನಾದ ನಾನು, ಸೌರಶಕ್ತಿಯ ಆವಿಷ್ಕಾರದಲ್ಲೂ ತೊಡಗಿರುವೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಕೆಲ ಉಪಕರಣಗಳನ್ನು ಇಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇನ್ನು ಕೆಲವನ್ನು ನನ್ನ ಆಲೋಚನೆಯಂತೆ ಸಿದ್ಧಪಡಿಸಿರುವೆ’ ಎಂದರು.
‘ಸೌರ ಉಪಕರಣಗಳ ಬಗ್ಗೆ ಬಹುತೇಕರಿಗೆ ತಪ್ಪು ಕಲ್ಪನೆ ಇದೆ. ಇವು ದುಬಾರಿ ಅಲ್ಲ, ನಿರ್ವಹಣೆ ಅಸಾಧ್ಯವೂ ಅಲ್ಲ. ಉಪಕರಣ ಅಳವಡಿಸಿದ ನಂತರ ಅವುಗಳ ನಿರ್ವಹಣೆ ದುರ್ಲಭ ಆಗಬಾರದೆಂಬ ಕಾರಣಕ್ಕೆ, ಆಸಕ್ತರಿಗೆ ಇಲ್ಲಿ ತಾಂತ್ರಿಕ ತರಬೇತಿ ನೀಡಲಾಗುತ್ತಿದೆ’ ಎಂದು ಹೇಳಿದರು.
ಹಾವೇರಿ ಜಿಲ್ಲೆಯ ಹೊನ್ನಾಪುರದ ಒಂದೂವರೆ ಎಕರೆಯಲ್ಲಿ ಹೊಸ ಮ್ಯೂಸಿಯಂ ನಿರ್ಮಿಸಲಾಗುತ್ತದೆ. ಭವಿಷ್ಯದಲ್ಲಿ ಡೀಮ್ಡ್ ವಿಶ್ವವಿದ್ಯಾಲಯ ಸ್ಥಾಪಿಸುವ ಗುರಿಯೂ ಇದೆಮಹೇಶ ವಿ. ಶಿವಶಿಂಪಿಗೇರ ಮ್ಯೂಸಿಯಂ ಸ್ಥಾಪಕ
ಸನ್ ರೇ ಸೋಲಾರ್ ಮ್ಯೂಸಿಯಂಗೆ ನಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಪ್ರತಿವರ್ಷ ಕರೆದೊಯ್ಯುತ್ತೇವೆ. ಅಲ್ಲಿ ದೊರೆಯುವ ಮಾಹಿತಿ ಮಕ್ಕಳಿಗೆ ಅನುಕೂಲಕಾರಿಯಾಗಿದೆಪದ್ಮಜ ಮಹಾಜನ್ ಶಿಕ್ಷಕಿ ಜೆಎಸ್‌ಎಸ್ ಶಾಲೆ ಧಾರವಾಡ
ಐಟಿಐ ವಿದ್ಯಾರ್ಥಿಗಳಿಗೆ ಮ್ಯೂಸಿಯಂನಲ್ಲಿ ಪ್ರಾಯೋಗಿಕ ಜ್ಞಾನ ದೊರೆಯುತ್ತದೆ. ರಥಸಪ್ತಮಿಯಂದು ವಿವಿಧ ಸ್ಪರ್ಧೆಗಳ ಮೂಲಕ ಅಲ್ಲಿ ಅರಿವನ್ನೂ ಮೂಡಿಸಲಾಗುತ್ತದೆವಿಜಯಲಕ್ಷ್ಮಿ ಮಂಡವಾಡಿ ಕಿರಿಯ ತರಬೇತಿ ಅಧಿಕಾರಿ ಶಾ.ಡಿ.ಜೆ. ಛೇಡಾ ಕೈಗಾರಿಕಾ ತರಬೇತಿ ಸಂಸ್ಥೆ
ಮ್ಯೂಸಿಯಂನಲ್ಲಿ ಏನೇನೂ ಇದೆ ?
ಮೊಬೈಲ್ ಪೋನ್ ಸಹಿತ ಸೌರ ಎಲ್‌ಇಡಿ ಲಾಂದ್ರ ಬ್ಯಾಟರಿ ಅಗತ್ಯವಿಲ್ಲದ ಸೌರ ರೇಡಿಯೊ ಸೂರ್ಯನ ಬೆಳಕಿನ ಪ್ರತಿಫಲನದಿಂದ ಹೆಚ್ಚು ಬೆಳಕು ನೀಡುವ ಬೆಳಕಿಂಡಿ ಬಿಸಿಲಲ್ಲೂ ತಣ್ಣನೆ ಗಾಳಿ ನೀಡುವ ಸೌರ ಟೋಪಿ ಸೌರ ಶ್ರವಣ ಯಂತ್ರ ಚಾರ್ಜರ್ ಕೃಷಿ ಉತ್ಪನ್ನ ಒಣಗಿಸುವ ಸೌರ ಯಂತ್ರ ಸೌರ ಬೀದಿ ದೀಪ ಜಲಮೂಲಗಳಿಗೆ ಆಮ್ಲಜನಕ ಒದಗಿಸುವ ಸೌರ ಏರಿಯೇಟರ್ ಸೌರ ಕೈಚೀಲ ಸೌರ ಪೌಲ್ಟ್ರಿ ಇನ್‌ಕ್ಯುಬೇಟರ್ ಆನ್ ಗ್ರಿಡ್ ಸೋಲಾರ್ ಇನ್ವರ್ಟರ್ ಸೌರ ಗೋಮೂತ್ರ ಶುದ್ಧೀಕರಣ ಯಂತ್ರ ಸೌರ ಕುಕ್ಕರ್ ಗೋಬರ್ ಗ್ಯಾಸ್ ಸ್ಟವ್ ಗೋಬರ್ ಗ್ಯಾಸ್ ದೀಪ ವರ್ಟಿಕಲ್ ವಿಂಡ್ ಟರ್ಬೈನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.