ADVERTISEMENT

ಯೋಧ ಆತ್ಮಹತ್ಯೆ: ತನಿಖೆಗೆ ತಂದೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 15:40 IST
Last Updated 3 ಅಕ್ಟೋಬರ್ 2019, 15:40 IST

ಹುಬ್ಬಳ್ಳಿ: ಜಮ್ಮು ಕಾಶ್ಮೀರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ತಾಲ್ಲೂಕಿನ ಇನಾಂ ವೀರಾಪುರದ ಯೋಧ ಮಂಜಪ್ಪ ಹನುಮಂತಪ್ಪ ಓಲೇಕಾರ ಅವರ ಸಾವಿನ ಬಗ್ಗೆ ತನಿಖೆ ನಡೆಸಬೇಕು ಎಂದು ಅವರ ತಂದೆ ಹನುಮಂತಪ್ಪ ಓಲೇಕಾರ ಒತ್ತಾಯಿಸಿದ್ದಾರೆ.

‘ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ. ಗುಂಡಿನ ಚಕಮಕಿಯಲ್ಲಿ ಮಗ ಮೃತಪಟ್ಟಿದ್ದಾನೆ ಎಂದು ನಮಗೆ ಮಾಹಿತಿ ನೀಡಿದ್ದ ಸೇನೆಯವರು, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುತ್ತಿದ್ದಾರೆ. ಆದರೆ, ಯಾವ ಕಾರಣಕ್ಕಾಗಿ ಮಾಡಿಕೊಂಡ ಎಂಬುದನ್ನು ಹೇಳುತ್ತಿಲ್ಲ. ಹಾಗಾಗಿ, ಮಗನ ಸಾವಿನ ಕುರಿತು ತನಿಖೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ.

ಅಂತ್ಯಕ್ರಿಯೆ:ಮಂಜಪ್ಪ ಅವರ ಅಂತ್ಯಕ್ರಿಯೆ ಯಾವುದೇ ಸರ್ಕಾರಿ ಗೌರವವಿಲ್ಲದೆ ಸ್ವಗ್ರಾಮದಲ್ಲಿ ಗುರುವಾರ ನೆರವೇರಿತು. ಬೆಳಿಗ್ಗೆ 10ಕ್ಕೆ ವಿಮಾನದ ಮೂಲಕ ಹುಬ್ಬಳ್ಳಿಗೆ ಬಂದ ಶವವನ್ನು ಸಾಗಿಸಲು ತಾಲ್ಲೂಕು ಆಡಳಿತ ಆಂಬುಲೆನ್ಸ್ ವ್ಯವಸ್ಥೆ ಮಾಡಿತ್ತು.

ADVERTISEMENT

ಮಂಜಪ್ಪ ಅವರ ಮೃತದೇಹವನ್ನು ಗ್ರಾಮಕ್ಕೆ ತರುತ್ತಿದ್ದಂತೆಯೇ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಸಾವಿಗೆ ನಿಖರ ಕಾರಣ ಗೊತ್ತಾಗುವವರೆಗೆ ಅಂತ್ಯಕ್ರಿಯೆ ನಡೆಸುವುದಿಲ್ಲ ಎಂದು ಪಟ್ಟು ಹಿಡಿದರು. ಆಗ ಶವ ತಂದಿದ್ದ ಯೋಧರು, ‘ಶವವನ್ನು ನಿಮಗೆ ಒಪ್ಪಿಸುವುದಷ್ಟೇ ಕರ್ತವ್ಯ’ ಎಂದು ಹೇಳಿ ಸ್ಥಳದಿಂದ ತೆರಳಿದರು. ಬಳಿಕ, ಸ್ಥಳೀಯ ಮುಖಂಡರು ಕುಟುಂಬದವರನ್ನು ಸಮಾಧಾನಪಡಿಸಿ, ಅಂತ್ಯಕ್ರಿಯೆಗೆ ಮನವೊಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.