ಅರವಿಂದ ಬೆಲ್ಲದ
– ಪ್ರಜಾವಾಣಿ ಚಿತ್ರ
ಧಾರವಾಡ: ‘ಬಸನಗೌಡ ಪಾಟೀಲ ಯತ್ನಾಳ್, ರಮೇಶ ಜಾರಕಿಹೊಳಿ ಹಾಗೂ ಜಿ.ಎಂ.ಸಿದ್ದೇಶ್ವರ ಅವರು ಹೇಳಿರುವ ಕೆಲವು ವಿಚಾರಗಳು ಸರಿ ಇವೆ. ಅವರ ನಡೆಗೆ ಸಂಬಂಧಿಸಿದಂತೆ ಪಕ್ಷದ ಆಂತರಿಕ ವೇದಿಕೆಯಲ್ಲಿ ಚರ್ಚಿಸಲಾಗುವುದು’ ಎಂದು ವಿಧಾನಸಭೆ ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ ಪ್ರತಿಕ್ರಿಯಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷದ ಆಂತರಿಕ ವೇದಿಕೆಯಲ್ಲಿ ಚರ್ಚಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸಲಾಗುವುದು. ಎಲ್ಲ ಪಕ್ಷದೊಳಗೂ ಆಂತರಿಕ ಸಮಸ್ಯೆಗಳು ಇರುತ್ತವೆ’ ಎಂದರು.
‘ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಒಂದು ಹಂತದ ಹೋರಾಟ ಮುಗಿದಿದೆ. ಎರಡನೇ ಹಂತದ ಹೋರಾಟ ರಾಜ್ಯಪಾಲರ ಅಂಗಳದಲ್ಲಿದೆ. ರಾಜ್ಯಪಾಲರು ಕ್ರಮವಹಿಸಬೇಕು’ ಎಂದು ಒತ್ತಾಯಿಸಿದರು.
‘ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ವಿವರಣೆ ಕೇಳಿದ್ದಾರೆ. ಸಿದ್ದರಾಮಯ್ಯ ಅವರು ವಿವರಣೆ ನೀಡಿದ್ದಾರೆ. ವಿವರಣೆ ಸಮಂಜಸವಾಗಿರದಿದ್ದರೆ ರಾಜ್ಯಪಾಲರು ಪಾಸಿಕ್ಯೂಷನ್ ಅಥವಾ ಇತರ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ’ ಎಂದು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.