ಹುಕ್ಕೇರಿ: ಕರ್ನಾಟಕ ಸರ್ಕಾರದ ಸ್ಪೂರ್ತಿ ಯೋಜನೆ ಹಾಗೂ ಕೆಎಚ್‌ಟಿಪಿ ಸಂಸ್ಥೆಯ ಸಹಯೋಗದಲ್ಲಿ ಹದಿಹರೆಯದ ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ನಡೆಸುತ್ತಿರುವ ಎರಡನೇ ಸುತ್ತಿನ ನಾಯಕತ್ವ ಮತ್ತು ಸಂವಹನ ಶಿಬಿರವನ್ನು ಯೋಜನೆಗೆ ಆಯ್ದ ತಾಲ್ಲೂಕಿನ ಹತ್ತರಗಿ, ದಡ್ಡಿ, ಇಸ್ಲಾಂಪುರ್, ಹಿಟ್ನಿ ಹಾಗೂ ಕರಗುಪ್ಪಿ ಗ್ರಾಮ ಪಂಚಾಯ್ತಿಗಳಲ್ಲಿ ಭಾನುವಾರ ಆಯೋಜಿಸಲಾಗಿತ್ತು.
ಶಿಬಿರಕ್ಕೆ ಚಾಲನೆ ನೀಡಿದ ತಾಲ್ಲೂಕು ಯೋಜನಾ ಸಂಯೋಜಕಿ ಸುಮಿತ್ರಾ ಮಿರ್ಜಿ ಮಾತನಾಡಿ, ‘ಮಹಿಳೆಯರು ಬಾಲ್ಯ ವಿವಾಹ ವಿರೋಧಿಸಬೇಕು. ದೌರ್ಜನ್ಯ ತಡೆಯಲು ಗಟ್ಟಿಯಾಗಬೇಕು. ಪೌಷ್ಟಿಕಾಂಶದ ಕೊರತೆ ನೀಗಿಸಿಕೊಳ್ಳಬೇಕು. ತಾರತಮ್ಯ ಮಾಡುವವರ ವಿರುದ್ಧ ಸೆಟೆದು ನಿಲ್ಲಬೇಕು’ ಎಂದು ಹೇಳಿದರು.
ಹೆಣ್ಣುಮಕ್ಕಳಿಗೆ ಬೇಕಾಗಿರುವುದು ಅವಕಾಶವೇ ಹೊರತು ಸಹಾನುಭೂತಿ ಅಲ್ಲ ಎಂದು ತಿಳಿ ಹೇಳಬೇಕು ಎಂದು ಸಲಹೆ ನೀಡಿದರು.
ಹತ್ತರಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಮ್ಮಿರ್ ಎಂ. ಭೇಪಾರಿ ಅವರು ಶಿಬಿರದ ಉದ್ಘಾಟಿಸಿದರು.
ಕ್ಷೇತ್ರ ಸಂಯೋಜಕಿ ಉಮಾ ಕೊಟಬಾಗಿ ಮಾತನಾಡಿ, ‘ಹೆಣ್ಣು ಮಕ್ಕಳು ಶಿಕ್ಷಣ ಪಡೆದರೆ ಬಾಲ್ಯ ವಿವಾಹ ಸೇರಿ ಎಷ್ಟೊ ಅನಿಷ್ಟ ಪದ್ಧತಿ ತಡೆಗಟ್ಟಲು ಸಾಧ್ಯ’ ಎಂದರು. ಹೆಣ್ಣುಮಕ್ಕಳು ಸಂಕುಚಿತ ಮನೋಭಾವ ತೊರೆದು ಸ್ವತಂತ್ರವಾಗಿ ವಿಚಾರ ಮಾಡಿ ಪರಿಸ್ಥಿತಿ ನಿಭಾಯಿಸುವ ಸಾಮರ್ಥ್ಯ ಹೊಂದಲು ಸಲಹೆ ನೀಡಿದರು.
ಶಿಬಿರಕ್ಕೆ ಮುಖ್ಯ ನಿರ್ವಾಹಕರಾಗಿ ವಿನಾಯಕ ಚೌಗಲಾ (ಎಂ ಮತ್ತು ಇ) ಕಾರ್ಯಕ್ರಮ ನಿರ್ವಹಿಸಿದರು.
ಮಕ್ಕಳ ಸಾಮಾಜಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಅಗತ್ಯ ಪಠ್ಯೇತರ ಚಟುವಟಿಕೆ ನಿರ್ವಹಿಸಲು ಸಮುದಾಯ ಸಂಘಟಕರಾದ ಪೂಜಾ, ಅಶ್ವಿನಿ, ಲಕ್ಷ್ಮೀ ಡಿ, ಮೇಘಾ, ಸ್ಮಿತಾ, ಬಸವ್ವ, ಪ್ರಿಯಾ, ಸರಸ್ವತಿ, ಲಕ್ಷ್ಮಿ ಎಚ್, ಸವಿತಾ, ಚೈತ್ರಾ, ಭಾಗ್ಯಶ್ರೀ, ನಿರ್ಮಲಾ, ಶ್ವೇತಾ ಶ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.