ADVERTISEMENT

ತಾಲ್ಲೂಕುಮಟ್ಟದಲ್ಲಿ ಲೀಗ್ ಪಂದ್ಯಗಳು: ಸಚಿವ ಪ್ರಲ್ಹಾದ ಜೋಶಿ

ಧಾರವಾಡ ಲೋಕಸಭಾ ಕ್ಷೇತ್ರದ ಸಂಸದರ ಕ್ರೀಡಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 4:16 IST
Last Updated 16 ಸೆಪ್ಟೆಂಬರ್ 2025, 4:16 IST
ಹುಬ್ಬಳ್ಳಿಯಲ್ಲಿ ಶನಿವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ‘ಸಂಸದರ ಕ್ರೀಡಾ ಮಹೋತ್ಸವ’ದ ಲೋಗೊ ಇರುವ ಟಿ–ಶರ್ಟ್‌ ಬಿಡುಗಡೆ ಮಾಡಿದರು. ಮೇಯರ್‌ ಜ್ಯೋತಿ ಪಾಟೀಲ, ಶಾಸಕ ಮಹೇಶ ಟೆಂಗಿನಕಾಯಿ ಹಾಜರಿದ್ದರು
ಹುಬ್ಬಳ್ಳಿಯಲ್ಲಿ ಶನಿವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ‘ಸಂಸದರ ಕ್ರೀಡಾ ಮಹೋತ್ಸವ’ದ ಲೋಗೊ ಇರುವ ಟಿ–ಶರ್ಟ್‌ ಬಿಡುಗಡೆ ಮಾಡಿದರು. ಮೇಯರ್‌ ಜ್ಯೋತಿ ಪಾಟೀಲ, ಶಾಸಕ ಮಹೇಶ ಟೆಂಗಿನಕಾಯಿ ಹಾಜರಿದ್ದರು   

ಹುಬ್ಬಳ್ಳಿ: ‘ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸಂಸದರ ಕ್ರೀಡಾ ಮಹೋತ್ಸವದ ಲೀಗ್‌ ಹಂತದ ಪಂದ್ಯಗಳು ಗ್ರಾಮ ಮತ್ತು ತಾಲ್ಲೂಕು ಮಟ್ಟದಲ್ಲಿ, ಅಂತಿಮ ಪಂದ್ಯಗಳು ಜಿಲ್ಲಾಮಟ್ಟದಲ್ಲಿ ನಡೆಯಲಿವೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದಲ್ಲಿ ಶನಿವಾರ ಕ್ರೀಡಾ ಮಹೋತ್ಸವದ ಟೀಸರ್‌, ಲೋಗೊ ಇರುವ ಟೀ–ಶರ್ಟ್‌ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಫಿಟ್‌ ಇಂಡಿಯಾ ಸಹಯೋಗದಲ್ಲಿ ನವೆಂಬರ್‌, ಡಿಸೆಂಬರ್‌ ತಿಂಗಳಲ್ಲಿ ಕ್ರೀಡಾ ಮಹೋತ್ಸವದ ಪಂದ್ಯಗಳು ನಡೆಯಲಿವೆ. ಜನವರಿಯಲ್ಲಿ ನಡೆಯಲಿರುವ ಗಾಳಿಪಟ ಉತ್ಸವ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಗುವುದು’ ಎಂದರು.

‘ವಯಸ್ಸಿನ ಮಿತಿಯಿಲ್ಲದೆ ಯಾರು ಬೇಕಾದರೂ ದೇಸಿ ಕ್ರೀಡೆಗಳಿಗೆ ಹಾಗೂ ಅಥ್ಲೆಟಿಕ್ಸ್‌ಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಕ್ರೀಡಾ ಪ್ರಾಧಿಕಾರ, ಕ್ರೀಡಾ ತರಬೇತುದಾರರು, ದೈಹಿಕ ಶಿಕ್ಷಣ ಶಿಕ್ಷಕರು ಪಂದ್ಯಗಳಿಗೆ ಸಹಕಾರ ನಿಡಲಿದ್ದಾರೆ. ಗ್ರಾಮೀಣ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಬೇಕು ಎನ್ನುವುದು ಮಹೋತ್ಸವದ ಉದ್ದೇಶ. ಸೆ.20ರ ಒಳಗೆ ಆನ್‌ಲೈನ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು’ ಎಂದರು.

‘ನಗರದ ನೆಹರೂ ಮೈದಾನ ನಿರ್ಮಾಣವಾಗಿರುವುದು ಗುಳ್ಳವನ ಕೆರೆ ಇದ್ದ ಪ್ರದೇಶದಲ್ಲಿ. ಅಲ್ಲಿ ಎಷ್ಟೇ ಅಭಿವೃದ್ಧಿ ಮಾಡಿದರೂ ವ್ಯರ್ಥ. ಮಳೆಗಾಲದಲ್ಲಿ ನೀರು ನಿಲ್ಲುವುದು ಮಾತ್ರ ಕಡಿಮೆಯಾಗುವುದಿಲ್ಲ. ಸಮರ್ಪಕವಾಗಿ ನಿರ್ವಹಣೆ ಮಾಡಿ, ಬೇಸಿಗೆಯಲ್ಲಷ್ಟೇ ಮೈದಾನವನ್ನು ಸರಿಯಾಗಿ ಬಳಸಿಕೊಳ್ಳಬೇಕು’ ಎಂದು ಹೇಳಿದರು.

ಮೇಯರ್ ಜ್ಯೋತಿ ಪಾಟೀಲ, ಶಾಸಕ ಮಹೇಶ ಟೆಂಗಿನಕಾಯಿ, ಉಪ ಮೇಯರ್ ಸಂತೋಷ ಚವ್ಹಾಣ್, ಪಾಲಿಕೆ ಸದಸ್ಯ ವೀರಣ್ಣ ಸವಡಿ ಇದ್ದರು.

‘ಕ್ರಮ ಇಲ್ಲ ಏಕೆ?’

‘ಧಾರವಾಡದ ನರೇಂದ್ರ ಗ್ರಾಮದಲ್ಲಿ ಎರಡು ಕಡೆ ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ಶಾಂತವಾಗಿ ತೆರಳುತ್ತಿದ್ದಾಗ ಪೊಲೀಸ್‌ ಅಧಿಕಾರಿ ಶಿವಾನಂದ ಕಮತಿ ಏಕಾಏಕಿ ಲಾಠಿ ಬೀಸಿ ಜನರನ್ನು ಚದುರಿಸಿದ್ದಾರೆ. ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಗಣೇಶೋತ್ಸವ ಮೆರವಣಿಗೆಗೆ ₹1500 ಶುಲ್ಕ ವಿಧಿಸಿದ್ದರು. ಗಣೇಶಮೂರ್ತಿ ಪ್ರತಿಷ್ಠಾಪಿಸುವ ಸಮಿತಿ ಸದಸ್ಯರ ಆಧಾರ್‌ ಕಾರ್ಡ್‌ ನೀಡಬೇಕು ಎಂದು ಷರತ್ತು ಸಹ ವಿಧಿಸಿದ್ದರು. ಹಿಂದೂಗಳು ಹಿಂದೂಗಳ ಹಬ್ಬ ಎಂದರೆ ಸರ್ಕಾರ ಯಾಕೆ ಹೀಗೆ ಮಾಡುತ್ತಿದೆ’ ಎಂದು ಜೋಶಿ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.