ADVERTISEMENT

ಶೇ 50ಕ್ಕಿಂತ ಕಡಿಮೆ ಫಲಿತಾಂಶ: 106 ಶಾಲೆಗಳಿಗೆ ಷೋಕಾಸ್‌ ನೋಟಿಸ್ ಜಾರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 23 ಮೇ 2025, 16:24 IST
Last Updated 23 ಮೇ 2025, 16:24 IST
ಭುವನೇಶ ಪಾಟೀಲ
ಭುವನೇಶ ಪಾಟೀಲ   

ಧಾರವಾಡ: ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ಕಳಪೆ ಸಾಧನೆ ಮಾಡಿದ 106 ಶಾಲೆಗಳಿಗೆ ಷೋಕಾಸ್‌ ನೋಟಿಸ್ ಜಾರಿಗಳಿಸಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ ಸೂಚನೆ ನೀಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 50ಕ್ಕಿಂತ ಕಡಿಮ ಫಲಿತಾಂಶ ದಾಖಲಿಸಿದ ಶಾಲೆಗಳ ಮುಖ್ಯಶಿಕ್ಷಕರ ಸಭೆಯಲ್ಲಿಮಾತನಾಡಿದರು.

ಆರು ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿವೆ. ಈ ಶಾಲೆಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲು ಮತ್ತು ಅಲ್ಲಿನ ವಿದ್ಯಾರ್ಥಿಗಳನ್ನು ಹತ್ತಿರದ ಬೇರೆ ಶಾಲೆಗಳಿಗೆ ವರ್ಗಾಯಿಸಲು ಕ್ರಮವಹಿಸಬೇಕು. ಈ ಬಗ್ಗೆ ನಿಷ್ಕಾಳಜಿ ತೋರಿದರೆ ಡಿಡಿಪಿಐ ಮತ್ತು ಸಂಬಂಧಿಸಿದ ಬಿಇಒ ವಿರುದ್ದ ಕ್ರಮಕ್ಕೆ ಇಲಾಖೆಗೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಈ ಪರಿಶೀಲನಾ ಸಭೆಗೆ ಗೈರಾಗಿರುವ ಶೂನ್ಯ ಸಾಧನೆ ಶಾಲೆಗಳ ಅನುಮತಿ ರದ್ದತಿಗೆ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.

ಶೈಕ್ಷಣಿಕ ಸುಧಾರಣೆಗಾಗಿ ‘ಮಿಷನ್ ಮೋಡ್‍’ನಲ್ಲಿ ಕಾರ್ಯನಿರ್ವಹಿಸಿದರೂ ಅಪೇಕ್ಷಿತ ಸಾಧನೆ ಆಗಿಲ್ಲ. ಕಳಪೆ ಸಾಧನೆಗೆ ಹೊಣೆಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು, ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಹೊರಬೇಕು. ಶಾಲೆಗಳಿಗೆ ಅನಧಿಕೃತವಾಗಿ ಗೈರಾಗುವ, ನಿಗದಿತ ಸಮಯಕ್ಕೆ ಶಾಲೆಗೆ ಹಾಜರಾಗದ, ಬೋಧನೆಯಲ್ಲಿ ಪ್ರಗತಿ ಸಾಧಿಸದ ಶಿಕ್ಷಕರನ್ನು ಗುರುತಿಸಿ ಕ್ರಮ ವಹಿಸಲಾಗುವುದು ಎಂದರು.

ಪ್ರತಿ ಶಿಕ್ಷಕನ ಕರ್ತವ್ಯ ಮೌಲ್ಯಮಾಪನ ಮತ್ತು ಗ್ರೇಡಿಂಗ್ ಮಾಡುವ ವ್ಯವಸ್ಥೆ ಜಾರಿಗೊಳಿಸುವ ಚಿಂತನೆ ಇದೆ. ಶಾಲಾ ಮಕ್ಕಳ ಕಲಿಕಾ ಗುಣಮಟ್ಟ ಸುಧಾರಣೆ ನಿಟ್ಟಿನಲ್ಲಿ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ನೀಡುವ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸತತವಾಗಿ ಕಡಿಮೆ ಫಲಿತಾಂಶ ದಾಖಲಿಸಿರುವ ಶಾಲೆಗಳಿಗೆ ‌ದಿಢೀರ್‌ ಭೇಟಿ ನೀಡಿ ವರದಿ ಪಡೆಯಲಾಗುವುದು ಎಂದು ಹೇಳಿದರು.

ಮುಂದಿನ ವರ್ಷದ ಫಲಿತಾಂಶ ಸುಧಾರಣೆ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸಿ ಡಿಡಿಪಿಐ ಕಚೇರಿಗೆ ಸಲ್ಲಿಸಬೇಕು ಎಂದು ಸಹಾಯಕ ಯೋಜನಾ ಸಮನ್ವಯ ಅಧಿಕಾರಿ ರೇಣುಕಾ ಅಮಲಝರಿ ತಿಳಿಸಿದರು.

ಡಿಡಿಪಿಐ ಎಸ್.ಎಸ್.ಕೆಳದಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಯೆಟ್ ಉಪ ಪ್ರಾಚಾರ್ಯ ಜೆ.ಜಿ.ಸೈಯ್ಯದ್‌, ಹಿರಿಯ ಉಪನ್ಯಾಸಕ ಅರ್ಜುನ ಕಾಂಬೋಗಿ, ಉಪನ್ಯಾಸಕ ಎ.ಎ.ಖಾಜಿ, ಡಿವೈಪಿಸಿ ಎಸ್.ಎಂ.ಹುಡೇದಮನಿ, ಕ್ಷೇತ್ರಶಿಕ್ಷಣಾಧಿಕಾರಿಗಳಾದ ಉಮೇಶ ಬೊಮ್ಮಕ್ಕನವರ, ರಾಮಕೃಷ್ಣ ಸದಲಗಿ, ಶಿವಾನಂದ ಮಲ್ಲಾಡ, ಚನ್ನಪ್ಪಗೌಡರ, ಮಹಾದೇವಿ ಮಾಡಲಗೇರಿ, ಉಮಾದೇವಿ ಬಸಾಪುರ ಪಾಲ್ಗೊಂಡಿದ್ದರು.

ಧಾರವಾಡದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಾಲಾ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.