ADVERTISEMENT

ಮಾನಸಿಕ ಸಮಸ್ಯೆಗೆ ‘ನೆಮ್ಮದಿ’ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 13:19 IST
Last Updated 4 ಜನವರಿ 2020, 13:19 IST
ಹುಬ್ಬಳ್ಳಿಯಲ್ಲಿ ಶನಿವಾರ ಆರಂಭವಾದ ನೆಮ್ಮದಿ ಕೇಂದ್ರವನ್ನು ಧಾರವಾಡದ ಡಿಮ್ಹಾನ್ಸ್‌ ನಿರ್ದೇಶಕ ಡಾ. ಮಹೇಶ ದೇಸಾಯಿ ಉದ್ಘಾಟಿಸಿದರು
ಹುಬ್ಬಳ್ಳಿಯಲ್ಲಿ ಶನಿವಾರ ಆರಂಭವಾದ ನೆಮ್ಮದಿ ಕೇಂದ್ರವನ್ನು ಧಾರವಾಡದ ಡಿಮ್ಹಾನ್ಸ್‌ ನಿರ್ದೇಶಕ ಡಾ. ಮಹೇಶ ದೇಸಾಯಿ ಉದ್ಘಾಟಿಸಿದರು   

ಹುಬ್ಬಳ್ಳಿ: ವ್ಯಕ್ತಿಯ ಮಾನಸಿಕ ಸಮಸ್ಯೆಗಳಿಗೆ ಉಚಿತವಾಗಿ ಪರಿಹಾರ ಒದಗಿಸುವುದು ಮತ್ತು ಆಪ್ತ ಸಮಾಲೋಚನೆ ಮಾಡುವ ಉದ್ದೇಶದಿಂದ ಮಜೇಥಿಯಾ ಫೌಂಡೇಷನ್‌ ನಗರದಲ್ಲಿ ನೆಮ್ಮದಿ ಕೇಂದ್ರ ಆರಂಭಿಸಿದೆ.

ಧಾರವಾಡದ ಡಿಮ್ಹಾನ್ಸ್‌ ನಿರ್ದೇಶಕ ಡಾ. ಮಹೇಶ ದೇಸಾಯಿ ಅವರು ಶನಿವಾರ ಕೇಂದ್ರ ಉದ್ಘಾಟಿಸಿದರು.

ಕೇಂದ್ರದ ವೈದ್ಯಕೀಯ ಮಂಡಳಿ ಸದಸ್ಯ ಡಾ. ಕೆ. ರಮೇಶ ಬಾಬು ಮಾತನಾಡಿ ‘ರೋಗಗಳು ಬಂದರೆ ಚಿಕಿತ್ಸೆ ಪಡೆಯಲುಜನ ಆಯಾ ತಜ್ಞ ವೈದ್ಯರ ಬಳಿ ಹೋಗುತ್ತಾರೆ. ಆದರೆ, ಮಾನಸಿಕ ಸಮಸ್ಯೆ ಎದುರಾದರೆ ವೈದ್ಯರ ಬಳಿ ಹೋಗಲು ಹಿಂದೇಟು ಹಾಕುತ್ತಾರೆ. ಅವರಿಗೆ ನೆರವಾಗುವ ಉದ್ದೇಶದಿಂದ ಕೇಂದ್ರ ಆರಂಭಿಸಲಾಗಿದೆ. ಸಲಹೆ ಪಡೆಯಲು ಬರುವವರ ಮಾಹಿತಿ ಗೌಪ್ಯವಾಗಿ ಇಡಲಾಗುತ್ತದೆ’ ಎಂದರು.

ADVERTISEMENT

‘ಅವಶ್ಯಕತೆ ಉಳ್ಳವರಿಗೆ ಮನೋವೈಜ್ಞಾನಿಕ ಸಮಾಲೋಚನೆ ಮಾಡುವುದು, ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಮಾರ್ಗದರ್ಶನ ನೀಡುವುದು. ಆರೋಗ್ಯಕರ ಜೀವನ ಶೈಲಿ, ಒತ್ತಡ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತದೆ. ವಿದ್ಯಾರ್ಥಿಗಳಿಗೆ ಕಲಿಕಾ ಸಮಸ್ಯೆಗಳು ಮತ್ತು ನಿರಾಶವಾದಿಯನ್ನು ಆಶಾವಾದಿಯನ್ನಾಗಿ ಪರಿವರ್ತಿಸಲು ವೈಜ್ಞಾನಿಕ ಮಾರ್ಗದರ್ಶನ ಮಾಡಲಾಗುವುದು’ ಎಂದರು.

ಫೌಂಡೇಷನ್‌ ಚೇರ್ಮನ್‌ ಜಿತೇಂದ್ರ ಮಜೇಥಿಯಾ ಮಾತನಾಡಿ ‘ಸಮಸ್ಯೆ ಎದುರಿಸುತ್ತಿರುವವರು ನಮ್ಮ ಕೇಂದ್ರಕ್ಕೆ ಬಂದರೆ ವೃತ್ತಿಪರ ಆಪ್ತ ಸಮಾಲೋಚಕಿ ರೇಣುಕಾ ಧಾರವಾಡಕರ ಮೊದಲು ಮಾರ್ಗದರ್ಶನ ಮಾಡುತ್ತಾರೆ. ವೈದ್ಯರ ಚಿಕಿತ್ಸೆ ಅಗತ್ಯವಿದ್ದರೆ ಫೌಂಡೇಷನ್‌ ವತಿಯಿಂದ ಉಚಿತವಾಗಿ ಕೊಡಿಸಲಾಗುವುದು. ಮಾನಸಿಕ ಸಮಸ್ಯೆ ಎದುರಿಸುತ್ತಿರುವವರು ಅದರಿಂದ ಹೊರಬಂದು ಸಂತೋಷದಿಂದ ಬದುಕಬೇಕು ಎನ್ನುವುದು ನಮ್ಮ ಉದ್ದೇಶ’ ಎಂದರು.

ಫೌಂಡೇಷನ್‌ ಅಧ್ಯಕ್ಷೆ ನಂದಿನಿ ಕಶ್ಯಪ್‌, ವೈದ್ಯ ವಿ.ಬಿ. ನಿಟಾಲಿ, ಕೃಷ್ಣನ್‌ ಮಜೇಥಿಯಾ, ಸಂಗೀತಾ ಇಜಾರದ, ರೂಪಾ ಅಂಗಡಿ, ಪೂಜಾ ಗಾವಡೆ, ಸ್ನೇಹಾ ಬಳ್ಳೊಳ್ಳಿ, ಮಹೇಶ ಸಾವಳಗಿಮಠ ಇದ್ದರು. ಆಸಕ್ತರು: 0836–4850901 ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.