ADVERTISEMENT

ಕಲ್ಲು ತೂರಾಟ ಪ್ರಕರಣ: ಇನ್ನಷ್ಟು ಜನರ ಹುಡುಕಾಟ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 9:52 IST
Last Updated 5 ಏಪ್ರಿಲ್ 2020, 9:52 IST
ಹುಬ್ಬಳ್ಳಿಯ ಅರಳಿಕಟ್ಟಿ ಕಾಲೊನಿಯಲ್ಲಿ ಶನಿವಾರ ಪೊಲೀಸರು ಘಟನೆ ನಡೆದ ಸ್ಥಳದಲ್ಲಿ ಮಹಜರು ನಡೆಸಿದರು
ಹುಬ್ಬಳ್ಳಿಯ ಅರಳಿಕಟ್ಟಿ ಕಾಲೊನಿಯಲ್ಲಿ ಶನಿವಾರ ಪೊಲೀಸರು ಘಟನೆ ನಡೆದ ಸ್ಥಳದಲ್ಲಿ ಮಹಜರು ನಡೆಸಿದರು   

ಹುಬ್ಬಳ್ಳಿ: ಮಸೀದಿಯಲ್ಲಿ ಪ್ರಾರ್ಥನೆಗೆ ಮುಂದಾದವರನ್ನು ಚದುರಿಸಲು ಯತ್ನಿಸಿದ ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದ ಮಂಟೂರು ರಸ್ತೆಯ ಅರಳಿಕಟ್ಟಿ ಕಾಲೊನಿಯಲ್ಲಿ ಬಿಗಿಭದ್ರತೆಗಾಗಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ.

ಘಟನೆ ನಡೆದ ಶುಕ್ರವಾರದಂದು ಐವರು ಮಹಿಳೆಯರನ್ನು ಬಂಧಿಸಲಾಗಿತ್ತು. ಶನಿವಾರ ಒಬ್ಬ ಮಹಿಳೆ ಸೇರಿದಂತೆ ಒಟ್ಟು 10 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಷ್ಟು ಜನರ ಹುಡುಕಾಟದಲ್ಲಿದ್ದಾರೆ.

ಗೌಂಡಿ ಕೆಲಸ ಮಾಡುತ್ತಿದ್ದ ಅರಳಿಕಟ್ಟಿ ಕಾಲೊನಿಯ ಖಾಜಾ ಬೇಪಾರಿ, ರಾಜೇಸಾಬ್‌ನದಾಫ್‌, ಅಲ್ಲಾಭಕ್ಷ ನದಾಫ್‌, ಜಾವೀದ್‌ ಬಿಜಾಪುರ, ಅಫ್ಜಲ್ರೋಣ, ಮಹಮ್ಮದ್‌ ಗೌಸ್‌ ಹಾವನೂರ, ಇರ್ಫಾನ್‌ ಬೇಪಾರಿ, ಗೂಡುಸಾಬ್ ಬೆಣ್ಣೆ, ಮಹಮ್ಮದ್‌ ಇಕ್ಬಾಲ್‌ ಬೆಣ್ಣೆ ಮತ್ತು ಫಾತೀಮಾ ನದಾಫ್‌ ಬಂಧಿತರು. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಂದು ಎಸಿಪಿ ಎಂ. ಮಲ್ಲಾಪುರಿ ತಿಳಿಸಿದ್ದಾರೆ.

ADVERTISEMENT

ಶನಿವಾರ ಘಟನೆ ನಡೆದ ಸ್ಥಳದ ಮಹಜರು ನಡೆಸಲಾಯಿತು. ಪೊಲೀಸರ ಮೇಲೆ ಎಸೆದಿದ್ದ ಚಪ್ಪಲಿ ಹಾಗೂ ಕಲ್ಲುಗಳನ್ನು ಸಾಕ್ಷಿಯ ಕಾರಣಕ್ಕೆ ಪೊಲೀಸರು ತೆಗೆದುಕೊಂಡು ಹೋದರು.

ಚೇತರಿಕೆ: ಕಲ್ಲು ತೂರಾಟದ ಸಮಯದಲ್ಲಿ ಗಾಯಗೊಂಡು ಕಿಮ್ಸ್‌ಗೆ ದಾಖಲಾಗಿದ್ದ ಶಹರ ಠಾಣೆ ಎಸ್‌ಐ ಮಲ್ಲಪ್ಪ ಕಾಳೆ, ಸಿಬ್ಬಂದಿ ಯಶವಂತ ಮೊರಬ, ಎಸ್‌.ಎಚ್‌. ಪೊಲೀಸ್‌ಗೌಡರ, ಎಂ.ಬಿ. ಬಸಣ್ಣವರ ಮತ್ತು ಪ್ರವೀಣ ಬಾಚಗೊಂಡಿ ಚೇತರಿಸಿಕೊಂಡಿದ್ದಾರೆ.

ಜನರ ಮೇಲೆ ಉಗುಳಿದ ವ್ಯಕ್ತಿ ಬಂಧನ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುವ ಆತಂಕವಿದ್ದರೂ ಇಲ್ಲಿನ ಗದಗ ರಸ್ತೆಯಲ್ಲಿರುವ ಇಸಿಎಚ್ಎಸ್ ಆಸ್ಪತ್ರೆಯ ಆವರಣದಲ್ಲಿ ಅನಧಿಕೃತವಾಗಿ ಪ್ರವೇಶ ಮಾಡಿ ಅಲ್ಲಿನ ಜನರ ಮೇಲೆ ಉಗುಳಿದ ಆರೋಪದ ಮೇಲೆ ಇನಾಯತ್ ಉಲ್ಲಾ ಖಾನ್ ಎಂಬಾತನನ್ನು ಬಂಧಿಸಲಾಗಿದೆ.

ಬಂಧಿತ ನಗರದ ಅಜಾದ್ ಪಾರ್ಕ್ ನಿವಾಸಿ. ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನನ್ನು ಕಿಮ್ಸ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ನಿಯಮ ಪಾಲಿಸಿ: ಲಾಕ್‌ಡೌನ್‌ ಸಂದರ್ಭದಲ್ಲಿ ನಿಯಮ ಪಾಲಿಸುವಂತೆ ಜನರಿಗೆ ತಿಳಿಹೇಳಬೇಕು ಎಂದು ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಅವರು ಮೌಲ್ವಿಗಳು ಹಾಗೂ ಮುಸ್ಲಿಂ ಸಮಾಜದ ಮುಖಂಡರಿಗೆ ಹೇಳಿದ್ದಾರೆ.

ಸಾಮಾಜಿಕ ತಾಣದ ಮೂಲಕ ಸಂದೇಶ ನೀಡಿರುವ ಸ್ವಾಮೀಜಿ ‘ದೇಶದ ಕಾನೂನುಗಳು ನಮ್ಮನ್ನು ರಕ್ಷಣೆ ಮಾಡಲು ಇವೆ. ಅವುಗಳ ಪಾಲನೆ ನಮ್ಮೆಲ್ಲರ ಕರ್ತವ್ಯ. ಸಂವಿಧಾನ ಜಾತ್ಯತೀತ ಹಾಗೂ ಧರ್ಮಾತೀತವಾಗಿದ್ದು, ಇದು ರಾಷ್ಟ್ರ ರಕ್ಷಣೆಗೆ ಇರುವ ನಿಜವಾದ ಸಿದ್ಧಾಂತವಾಗಿದೆ. ಅದನ್ನು ಪಾಲಿಸಬೇಕು’ ಎಂದಿದ್ದಾರೆ.

‘ಕೊರೊನೊ ಸೋಂಕು ಹರಡುವ ಭೀತಿ ಇರುವ ಕಾರಣ ಲೌಕ್‌ಡೌನ್‌ ಘೋಷಿಸಲಾಗಿದೆ. ಆದ್ದರಿಂದ ನೂರಾರು ವರ್ಷಗಳ ಇತಿಹಾಸ ಇರುವ ಎಲ್ಲ ಧಾರ್ಮಿಕ ಕೇಂದ್ರಗಳನ್ನು ಬಂದ್‌ ಮಾಡಲಾಗಿದೆ. ಇನ್ನೊಬ್ಬರಿಗೆ ತೊಂದರೆಯಾಗದಂತೆ ನಮಾಜ್‌ ಮಾಡಬೇಕು ಎಂದು ಪೈಗಂಬರ್ ಅವರೇ ಹೇಳಿದ್ದಾರೆ. ಖ್ವಾಜಾ ಬಂದೇ ನವಾಜ್‌ ಸೇರಿದಂತೆ ಅನೇಕ ಸೂಫಿಸಂತರು ಭಾವೈಕ್ಯ ಮೆರೆದ ನಾಡು ಇದು. ಆದ್ದರಿಂದ ಮೌಲ್ವಿಗಳು ಹಾಗೂ ಮುಸ್ಲಿಂ ಸಮಾಜದ ಮುಖಂಡರು ನಿಮ್ಮ ಸಮಾಜದ ಜನರಿಗೆ ತಿಳಿ ಹೇಳಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.