ADVERTISEMENT

ಮನೆ ಬಾಗಿಲಿಗೆ ಬಂದ ಬೀದಿ ವ್ಯಾಪಾರಿಗಳು

ಅವಳಿನಗರದ ನಾಗರಿಕರಿಗೆ ಅಗತ್ಯ ವಸ್ತು ಪೂರೈಕೆಗೆ ಜಿಲ್ಲಾಡಳಿತ ಕ್ರಮ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 11:04 IST
Last Updated 28 ಮಾರ್ಚ್ 2020, 11:04 IST
ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಮನೆ ಬಾಗಿಲಿಗೆ ಬಂದ ವ್ಯಾಪಾರಿಗಳಿಂದ ತರಕಾರಿ ಖರೀದಿಸಿದ ಜನ
ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಮನೆ ಬಾಗಿಲಿಗೆ ಬಂದ ವ್ಯಾಪಾರಿಗಳಿಂದ ತರಕಾರಿ ಖರೀದಿಸಿದ ಜನ   

ಹುಬ್ಬಳ್ಳಿ: ಕೊರೊನಾ ಹಿನ್ನೆಲೆಯಲ್ಲಿ ಜನ ಗುಂಪು ಸೇರದಂತೆ ತಡೆಯುವುದಕ್ಕಾಗಿ ಬೀದಿ ವ್ಯಾಪಾರಿಗಳ ಮೂಲಕ ಜನರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಮಹಾನಗರ ಪಾಲಿಕೆ ಮುಂದಾಗಿದೆ. ಇದಕ್ಕಾಗಿ ಧಾರವಾಡದಲ್ಲಿ ಪ್ರತಿ ವಾರ್ಡ್‌ಗೆ 10 ಹಾಗೂ ಹುಬ್ಬಳ್ಳಿಯಲ್ಲಿ ಪ್ರತಿ ವಾರ್ಡ್‌ಗೆ 15 ಬೀದಿ ವ್ಯಾಪಾರಿಗಳನ್ನು ನಿಯೋಜಿಸಿದೆ.

ಅಮರಗೋಳದ ಎಪಿಎಂಸಿ ಮತ್ತು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ತರಕಾರಿ ಸೇರಿದಂತೆ, ಅಗತ್ಯ ವಸ್ತು ಖರೀದಿಗೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮುಗಿಬಿದ್ದಿದ್ದರು. ಮಾರುಕಟ್ಟೆ ಪ್ರದೇಶಗಳಲ್ಲೂ ಜನ ಗುಂಪುಗೂಡುತ್ತಿದ್ದರು. ಪೊಲೀಸರ ಲಾಠಿ ಏಟನ್ನೂ ಲೆಕ್ಕಿಸುತ್ತಿರಲಿಲ್ಲ. ಈ ನಿಟ್ಟಿನಲ್ಲಿ, ವ್ಯಾಪಾರಿಗಳೇ ಜನರ ಮನೆ ಬಾಗಿಲಿಗೆ ಬರುವಂತೆ ಪಾಲಿಕೆ ಕ್ರಮ ಕೈಗೊಂಡಿದೆ.

‘ನಾವು ಎಷ್ಟೇ ಕಠಿಣ ಕ್ರಮಗಳನ್ನು ಕೈಗೊಂಡರೂ, ಜನರು ಹೊರಗಡೆ ಬಂದು ಗುಂಪು ಸೇರುವುದು ತಪ್ಪುತ್ತಿಲ್ಲ. ಅದಕ್ಕಾಗಿ, ಪಾಲಿಕೆಯೇ ಬೀದಿ ವ್ಯಾಪಾರಿಗಳಿಗೆ ಪ್ರತಿ ಬೀದಿಗಳಿಗೆ ತೆರಳಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿದೆ. ಆಟೊ, ಟಂಟಂನಂತಹ ವಾಹನ ಹಾಗೂ ತಳ್ಳುಗಾಡಿಗಳಲ್ಲಿ ವ್ಯಾಪಾರಿಗಳು ಅಗತ್ಯ ವಸ್ತುಗಳನ್ನು ತಂದು ಮಾರಾಟ ಮಾಡಲಿದ್ದಾರೆ. ಏಪ್ರಿಲ್ 14ರವರೆಗೆ ಇದು ಮುಂದುವರಿಯಲಿದೆ’ ಎಂದು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಪಾಲಿಕೆಯಿಂದ ಅನುಮತಿ ಪಡೆದಿರುವ ಹಾಗೂ ಸಂತೆ ವ್ಯಾಪಾರಿಗಳನ್ನು ಗುರುತಿಸಿ, ಅವರೆಲ್ಲರಿಗೂ ಪಾಸ್ ವಿತರಣೆ ಮಾಡಲಾಗಿದೆ. ಧಾರವಾಡದಲ್ಲಿ ಜನಸಂದಣಿ ಕಡಿಮೆ ಇರುವುದರಿಂದ ಪ್ರತಿ ವಾರ್ಡ್‌ಗೆ 10 ಹಾಗೂ ಜನಸಂದಣಿ ಹೆಚ್ಚಾಗಿರುವ ಹುಬ್ಬಳ್ಳಿಯ ಪ್ರತಿ ವಾರ್ಡ್‌ಗೆ 15 ಪಾಸ್ ನೀಡಿದ್ದೇವೆ. ಒಟ್ಟು 67 ವಾರ್ಡ್‌ಗಳಿಗೂ ವ್ಯಾಪಾರಿಗಳನ್ನು ನಿಯೋಜಿಸಲಾಗಿದೆ. ಇವರನ್ನು ಹೊರತುಪಡಿಸಿ, ಬೇರೆ ಯಾರೂ ಮಾರಾಟ ಮಾಡುವಂತಿಲ್ಲ’ ಎಂದರು.

‘ಬೆಳಿಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಮನಬಂದಂತೆ ದರ ಹೆಚ್ಚಿಸಿ ಮಾರಾಟ ಮಾಡದಂತೆ ಎಚ್ಚರಿಕೆಯನ್ನೂ ನೀಡಿದ್ದೇವೆ. ಒಟ್ಟಿನಲ್ಲಿ ಜನರು ಹೊರಗೆ ಗುಂಪು ಸೇರದೆ, ಸಾಮಾಜಿಕ ಅಂತರ ಕಾಯ್ದುಕೊಂಡೇ, ತಮ್ಮ ಮನೆ ಬಳಿ ತರಕಾರಿ ಹಾಗೂ ಇತರ ಅಗತ್ಯ ವಸ್ತು ಖರೀದಿಸುವ ಮೂಲಕ, ಕೊರೊನಾ ಸೋಂಕು ಹರಡದಂತೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.