ADVERTISEMENT

ಜ. 8, 9ರಂದು ದೇಶಾದ್ಯಂತ ಸಾರ್ವತ್ರಿಕ ಮುಷ್ಕರ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಕರೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 13:03 IST
Last Updated 2 ಜನವರಿ 2019, 13:03 IST

ಹುಬ್ಬಳ್ಳಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು, ಕಾರ್ಮಿಕರನ್ನು ಬೀದಿಗೆ ತಳ್ಳುವ ಕಾರ್ಮಿಕ ಕಾನೂನುಗಳ ತಿದ್ದುಪಡಿ ಕೈಬಿಡಬೇಕು ಎನ್ನುವ ಬೇಡಿಕೆ ಮುಂದಿಟ್ಟು ಕಾರ್ಮಿಕ ಸಂಘಟನೆಯಗಳ ಜಂಟಿ ಸಮಿತಿ ಜ. 8 ಮತ್ತು 9ರಂದು ದೇಶಾದ್ಯಂತ ಸಾರ್ವತ್ರಿಕ ಮುಷ್ಕರಕ್ಕೆ ಕರೆ ಕೊಟ್ಟಿದೆ.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಮಹೇಶ ಪತ್ತಾರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘1991ರಲ್ಲಿ ಜಾರಿಗೆ ಬಂದ ಹೊಸ ಆರ್ಥಿಕ ನೀತಿಗಳನ್ನು ಕೇಂದ್ರ ಸರ್ಕಾರ ವೇಗವಾಗಿ ಜಾರಿ ಮಾಡುತ್ತಿದೆ. ಇದರಿಂದ ರೈತರು, ಕೃಷಿ ಕೂಲಿಕಾರ್ಮಿಕರು, ಸಣ್ಣ ವ್ಯಾಪಾರಸ್ಥರು ಗಂಭೀರವಾದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಹೋರಾಟ ಹಮ್ಮಿಕೊಂಡಿದ್ದೇವೆ’ ಎಂದರು.

‘ಕೇಂದ್ರ ಸರ್ಕಾರ ಕಾರ್ಪೊರೇಟ್‌ ಪರ ಕಾರ್ಮಿಕ ಕಾನೂನುಗಳ ತಿದ್ದುಪಡಿ ಕೈ ಬಿಡಬೇಕು. ರೈತರ ಎಲ್ಲ ಸಾಲ ಮನ್ನಾ ಮಾಡಬೇಕು. ಸಾರಿಗೆ ಕ್ಷೇತ್ರದ ವಿರೋಧಿಯಾಗಿರುವ 2017ರ ರಸ್ತೆ ಸುರಕ್ಷತಾ ಮಸೂದೆ ಕೈಬಿಡಬೇಕು. ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆಗೆ ಹೆಚ್ಚಿನ ಅನುದಾನ ನೀಡಬೇಕು. ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತರನ್ನು ಕನಿಷ್ಠ ವೇತನದ ಅಡಿ ತರಬೇಕು ಎನ್ನುವ ಬೇಡಿಕೆ ಮುಂದಿಟ್ಟು ಮುಷ್ಕರ ನಡೆಸಲಾಗುವುದು’ ಎಂದು ತಿಳಿಸಿದರು.

ADVERTISEMENT

8ರಂದು ನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದಿಂದ ಚನ್ನಮ್ಮ ವೃತ್ತದ ತನಕ ಮೆರವಣಿಗೆ, ಬಳಿಕ ಬಹಿರಂಗ ಸಭೆ ಜರುಗಲಿದೆ. ಧಾರವಾಡದಲ್ಲಿ ಕಲಾಭವನದ ಬಳಿ ಮೆರವಣಿಗೆ ಹಾಗೂ ಸಭೆ ಜರುಗಲಿದೆ. 9ರಂದು ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲು ಸಿಐಟಿಯು ಮುಂದಾಗಿದೆ. ಅಂದು ಸಾರಿಗೆ, ಬ್ಯಾಂಕ್‌, ಅಂಚೆ ನೌಕರರು, ಎಪಿಎಂಸಿ ಮಾರುಕಟ್ಟೆ, ಗುತ್ತಿಗೆ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಎಐಯುಟಿಯುಸಿ ಪದಾಧಿಕಾರಿ ಗಂಗಾಧರ ಬಡಿಗೇರ ಹೇಳಿದರು.

ಹೋರಾಟಗಾರ ಅಮೃತ ಇಜಾರಿ ‘ಮುಷ್ಕರಕ್ಕೆ ಬೆಂಬಲ ನೀಡುತ್ತೇವೆ. ಮಹದಾಯಿ ನ್ಯಾಯಾಧೀಕರಣದ ತೀರ್ಪಿನಂತೆ ಮಲಪ್ರಭೆಗೆ ನೀರು ಹರಿಸಲು ಬಾಕಿ ಇರುವ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಬೇಕು’ ಎಂದು ಆಗ್ರಹಿಸಿದರು. ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಎನ್‌.ಎ. ಖಾಜಿ, ಸ್ಟೀಫನ್‌ ಜಯಚಂದ್ರ, ಹರೀಶ ದೊಡ್ಡಮನಿ ಮತ್ತು ಎಸ್‌.ಎಲ್‌. ಪೂಜಾರ ಇದ್ದರು.

ಕೇಂದ್ರದ ವಿರುದ್ಧ ಬೇಬಿ ವಾಗ್ದಾಳಿ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸುಳ್ಳು ಆಶ್ವಾಸನೆ ನೀಡಿ ಕಾಲಹರಣ ಮಾಡುತ್ತಿದೆ. ಚುನಾವಣಾ ಪೂರ್ವದಲ್ಲಿ ಕೊಟ್ಟ ಯಾವ ಭರವಸೆಗಳನ್ನೂ ಈಡೇರಿಸಿಲ್ಲ ಎಂದು ಕೇರಳದ ಮಾಜಿ ಸಚಿವ ಹಾಗೂ ಸಿಪಿಐ (ಎಂ) ಮುಖಂಡ ಎಂ.ಎ. ಬೇಬಿ ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮೋದಿ ಅಧಿಕಾರಕ್ಕೆ ಬರುವ ಮೊದಲು ಯುವಕರಿಗೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದಿದ್ದರು. ಪ್ರತಿಯೊಬ್ಬರ ಖಾತೆಗೆ ₹ 15 ಲಕ್ಷ ಹಣ ಜಮೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು. ಇವೆಲ್ಲವೂ ಸುಳ್ಳು ಎಂಬುದು ಈಗ ಸಾಬೀತಾಗಿದೆ. ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ. ಇದೆಲ್ಲದರ ವಿರುದ್ಧ ಮುಷ್ಕರ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.