ADVERTISEMENT

ಬೇಡಿಕೆ ಈಡೇರುವವರೆಗೆ ಮುಷ್ಕರ: ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ನೀರಲಕೇರಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2021, 9:21 IST
Last Updated 6 ಏಪ್ರಿಲ್ 2021, 9:21 IST

ಹುಬ್ಬಳ್ಳಿ: ‘ಆರನೇ ವೇತನ ಆಯೋಗ ಜಾರಿ ಸೇರಿದಂತೆ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ, ಏ. 7ರಿಂದ ಮುಷ್ಕರ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಅದಕ್ಕೂ ಬಗ್ಗದಿದ್ದರೆ 13ರಿಂದ ಜೈಲ್ ಭರೋ ಚಳವಳಿ ನಡೆಸಲಾಗುವುದು. ಬೇಡಿಕೆಗೆ ಈಡೇರುವವರೆಗೆ ಮುಷ್ಕರಿಂದ ಹಿಂದೆ ಸರಿಯುವ ಮಾತೇ ಇಲ್ಲ’ ಎಂದು ರಾಜ್ಯ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಪಿ.ಎಚ್. ನೀರಲಕೇರಿ ಹೇಳಿದರು.

‘ಡಿಸೆಂಬರ್‌ನಲ್ಲಿ ಮುಷ್ಕರ ನಡೆಸಿದ್ದಾಗ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಲಿಖಿತ ಭರವಸೆ ನೀಡಿತ್ತು. ಆದರೆ, ಮುಖ್ಯವಾದ ವೇತನ ಆಯೋಗ ಜಾರಿ ಹೊರತುಪಡಿಸಿ, ಉಳಿದ ಬೇಡಿಕೆಗಳಿಗೆ ಸ್ಪಂದಿಸಿರುವುದಾಗಿ ಸಾರಿಗೆ ಸಚಿವರು ಹೇಳುತ್ತಿದ್ದಾರೆ. ವಾಸ್ತವದಲ್ಲಿ ಯಾವ ಬೇಡಿಕೆಗೂ ಸರಿಯಾಗಿ ಸ್ಪಂದಿಸಿಲ್ಲ. ಕಾರ್ಮಿಕ ಸಂಘಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹಾಗಾಗಿ, ಬುಧವಾರದಿಂದ ಮತ್ತೆ ಮುಷ್ಕರಕ್ಕೆ ಕರೆ ನೀಡಲಾಗಿದೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಉತ್ತರ ಕರ್ನಾಟಕದಲ್ಲಿ ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು. ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಚಾಲಕರು, ನಿರ್ವಾಹಕರು ಹಾಗೂ ಕಾರ್ಯಾಗಾರದ ಕಾರ್ಮಿಕರು ಕರ್ತವ್ಯಕ್ಕೆ ಗೈರಾಗಿ ಕುಟುಂಬದೊಂದಿಗೆ ಪಾಲ್ಗೊಳ್ಳಲಿದ್ದಾರೆ. ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ನಿತ್ಯ ಎರಡು ವಿಭಾಗದ ನೌಕರರು ಧರಣಿಯಲ್ಲಿ ಭಾಗವಹಿಸಲಿದ್ದಾರೆ. ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಸೂಕ್ತ ಅಂತರ ಕಾಯ್ದುಕೊಳ್ಳಲಿದ್ದಾರೆ’ ಎಂದರು.

ADVERTISEMENT

‘ನೌಕರರ ಮೇಲೆ ಮೊಕದ್ದಮೆಗಳನ್ನು ಹೂಡುವ ಬೆದರಿಕೆ, ಎಸ್ಮಾ (ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ) ಜಾರಿ ಸೇರಿದಂತೆ ಸರ್ಕಾರ ಯಾವುದೇ ರೀತಿಯ ಕ್ರಮ ಕೈಗೊಂಡರು ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ತಾತ್ಕಾಲಿಕವಾಗಿ ತೊಂದರೆಯಾಗಬಹುದು. ಇದು ಸಾವಿರಾರು ಕಾರ್ಮಿಕರ ಬದುಕಿನ ಪ್ರಶ್ನೆಯಾಗಿರುವುದರಿಂದ ಅವರೂ ನಮ್ಮನ್ನು ಬೆಂಬಲಿಸಬೇಕು. ಹೋರಾಟಕ್ಕೆ ಖಾಸಗಿ ವಾಹನ ಮಾಲೀಕರ ಸಂಘ ಸೇರಿದಂತೆ ಕನ್ನಡಪರ ಸಂಘಟನೆಗಳು ಈಗಾಗಲೇ ಬೆಂಬಲ ವ್ಯಕ್ತಪಡಿಸಿವೆ. ದಾಂಡೇಲಿ, ಹಳಿಯಾಳ ಸೇರಿದಂತೆ ಕೆಲವೆಡೆ ಇಂದಿನಿಂದಲೇ ಮುಷ್ಕರ ಆರಂಭವಾಗಿದೆ’ ಎಂದು ಹೇಳಿದರು.

ಮನಸೂರಿನ ರೇವಣಸಿದ್ಧೇಶ್ವರ ಮಠದ ಬಸವರಾಜ ದೇವರು ಸ್ವಾಮೀಜಿ, ನೌಕರರ ಕೂಟದ ಬಸವರಾಜ ಕಮ್ಮಾರ ಹಾಗೂ ಟಿ.ಎಫ್. ಕಮತರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.