ಧಾರವಾಡ: ‘ಈಗ ಅಂತಿಮ ಹಂತದಲ್ಲಿರುವ ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಪ್ರಸ್ತಾವವನ್ನು ಅನುಮೋದನೆಗೊಳಿ ಅಸ್ತಿತ್ವಕ್ಕೆ ತರುವ ದಿಸೆಯಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ತೀವ್ರ ಆಸಕ್ತಿ ವಹಿಸಿ ಧಾರವಾಡದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಬೇಕು. ಇಲ್ಲದಿದ್ದಲ್ಲಿ ಧಾರವಾಡ ನಾಗರಿಕರಿಂದ ಇನ್ನೊಂದು ಸುತ್ತಿನ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯವಾಗುತ್ತದೆ’ ಎಂದು ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ಹೋರಾಟ ಮತ್ತು ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ವೆಂಕಟೇಶ ಮಾಚಕನೂರ ಮತ್ತು ಪ್ರಧಾನ ಕಾರ್ಯದರ್ಶಿ ರವಿಕುಮಾರ ಮಾಳಿಗೇರ ಎಚ್ಚರಿಸಿದ್ದಾರೆ.
’ಹು–ಧಾ ಮಹಾನಗರ ಪಾಲಿಕೆ ವಿಭಜನೆ ಆಗದೆ ಒಟ್ಟಾಗಿದ್ದರೆ ಹೆಚ್ಚಿನ ಅನುದಾನ ಸಿಗಲಿದೆ ಎಂಬ ವಿಚಾರವನ್ನು ಈಚೆಗೆ ಹರಿಯಬಿಡಲಾಗಿದೆ. ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚನೆ ಕುರಿತು ವಿಚಾರ ಈಗ ಸರ್ಕಾರದ ಮಟ್ಟದಲ್ಲಿ ಬಾಕಿ ಇದ್ದು, ಅಂತಿಮ ಅಧಿಸೂಚನೆಯನ್ನು ರಾಜ್ಯಪಾಲರ ಹಂತದಲ್ಲಿ ರಾಜಕೀಯ ಕಾರಣಗಳಿಗಾಗಿ ವಿಳಂಬ ಮಾಡಿಸಲಾಗುತ್ತಿದೆ. ಈ ಹಿಂದೆ ಧಾರವಾಡ ನಗರವನ್ನು ಪಕ್ಕದಲ್ಲಿ ಇಟ್ಟುಕೊಂಡು ವಿವಿಧ ಯೋಜನೆಗಳಡಿ ಹುಬ್ಬಳ್ಳಿ ನಗರಕ್ಕೆ ಹೆಚ್ಚು ಅನುದಾನ ಪಡೆಯುತ್ತಾ ಬಂದಂತೆ ಈಗಲೂ ಕೂಡ ಅದೇ ಉದ್ದೇಶದಿಂದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿಭಜನೆ ಬೇಡ ಎಂಬ ವಿಚಾರವನ್ನು ಪ್ರಚುರಪಡಿಸಲಾಗುತ್ತಿದೆ.
ಹುಬ್ಬಳ್ಳಿ ಧಾರವಾಡ ಪ್ರತ್ಯೇಕ ಪಾಲಿಕೆಗಳಾಗಿ ಎರಡು ನಗರಗಳಿಗೆ ವಿವಿಧ ಯೋಜನೆಗಳಲ್ಲಿ ಪ್ರತ್ಯೇಕ ಅನುದಾನ ದೊರೆತಲ್ಲಿ ಎರಡು ನಗರಗಳು ತ್ವರಿತ ಅಭಿವೃದ್ಧಿ ಹೊಂದುತ್ತವೆ ಎಂಬ ದೂರದೃಷ್ಟಿ ನಮ್ಮ ಜನಪ್ರತಿನಿಧಿಗಳಿಗೆ ಇಲ್ಲದಂತಾಗಿದೆ’ ಎಂದು ಅವರು ದೂರಿದ್ದಾರೆ.
‘ಧಾರವಾಡ ನಗರ ಅನುಭವಿಸುತ್ತಿರುವ ತಾರತಮ್ಯ ಧೋರಣೆ ಮತ್ತು ದೈನಂದಿನ ಆಡಳಿತದಲ್ಲಿ ನಗರದ ಜನತೆ ಅನುಭವಿಸುತ್ತಿರುವ ಅನಾನುಕೂಲತೆಗಳನ್ನು ಜನಪ್ರತಿನಿಧಿಗಳು ಗಮನಿಸುತ್ತಿಲ್ಲ. ಎರಡೂ ನಗರಗಳಿಗೆ ಪ್ರತ್ಯೇಕ ಪಾಲಿಕೆಗಳಾಗದೆ ಎರಡೂ ನಗರಗಳು ಅಭಿವೃದ್ಧಿ ವಿಷಯದಲ್ಲಿ ಹಿನ್ನಡೆ ಅನುಭವಿಸುವುದು ಮುಂದುವರಿಯುತ್ತದೆ. ರಾಜಕೀಯ ಮೀರಿದ ದೂರ ದೃಷ್ಟಿಯಿಂದ ಮಾತ್ರ ಎರಡು ನಗರಗಳ ಅಭಿವೃದ್ಧಿ ಸಾಧ್ಯ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.