ADVERTISEMENT

ಹರಿದ ಪ್ಯಾಂಟ್ ಧರಿಸಿದ್ದಕ್ಕೆ ವಿದ್ಯಾರ್ಥಿಯನ್ನು ಹೊರ ಹಾಕಿದರು

ಆರೋಪ ಅಲ್ಲಗೆಳೆದ ಶಾಲೆ: ಪೊಲೀಸ್ ಠಾಣೆಯಲ್ಲಿ ಪ್ರಕರಣ ಇತ್ಯರ್ಥ

​ಪ್ರಜಾವಾಣಿ ವಾರ್ತೆ
Published 25 ಜನವರಿ 2020, 15:16 IST
Last Updated 25 ಜನವರಿ 2020, 15:16 IST

ಹುಬ್ಬಳ್ಳಿ: ಶಾಲೆಗೆ ಹರಿದ ಪ್ಯಾಂಟ್ ಧರಿಸಿಕೊಂಡು ಹೋಗಿದ್ದ 6ನೇ ತರಗತಿ ವಿದ್ಯಾರ್ಥಿ ದಿಲಾವರ್ ಸಾಬ್‌ನನ್ನು ಸಿಬ್ಬಂದಿ ಹೊರ ಹಾಕಿದ ಘಟನೆ, ಹಳೇ ಹುಬ್ಬಳ್ಳಿಯ ಆನಂದನಗರದಲ್ಲಿರುವ ಸೇಂಟ್ ಜಾನ್ ಸಮರಿಟನ್ ಶಾಲೆಯಲ್ಲಿ ಶನಿವಾರ ನಡೆದಿದೆ.

‘ಹರಿದ ಪ್ಯಾಂಟ್ ಹಾಕಿಕೊಂಡು ಹೋಗಿದ್ದಕ್ಕೆ ಸಿಬ್ಬಂದಿ ಒಳಕ್ಕೆ ಬಿಡಲಿಲ್ಲ ಎಂದು ಮಗ ಮನೆಗೆ ಬಂದು ತಿಳಿಸಿದ. ಬಳಿಕ, ನಾನು ಕರೆದುಕೊಂಡು ಹೋಗಿ ಮನವಿ ಮಾಡಿದರೂ ಸಿಬ್ಬಂದಿ ಕೇಳಲಿಲ್ಲ. ಕಡೆಗೆ, ಶಾಲೆ ವಿರುದ್ಧ ದೂರು ಕೊಡಲು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಹೋದೆ. ಅಲ್ಲಿ, ಶಾಲೆಯವರೂ ಇದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ, ಇಬ್ಬರಿಗೂ ಬುದ್ಧಿ ಹೇಳಿ ಕಳಿಸಿದರು’ ಎಂದು ವಿದ್ಯಾರ್ಥಿಯ ತಂದೆ ಕುತುಬುದ್ಧೀನ್ ಮುಜಾವರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಆರೋಪ ಸುಳ್ಳು

ADVERTISEMENT

‘ಶಾಲೆ ಸಿಬ್ಬಂದಿ ವಿರುದ್ಧ ವಿದ್ಯಾರ್ಥಿ ಪಾಲಕರು ಮಾಡಿರುವ ಆರೋಪ ಸುಳ್ಳಿನಿಂದ ಕೂಡಿದೆ. ವಿದ್ಯಾರ್ಥಿ ತುಂಬಾ ಉಡಾಳನಾಗಿದ್ದಾನೆ. ಈ ಬಗ್ಗೆ ಆತನ ಪಾಲಕರಿಗೆ ತಿಳಿಸಿದ್ದರೂ ಬುದ್ಧಿ ಹೇಳಿರಲಿಲ್ಲ. ಶಾಲೆಯಲ್ಲೂ ಕೆಟ್ಟದಾಗಿ ಮಾತನಾಡುತ್ತಿದ್ದ. ಆತನ ವರ್ತನೆ ಬಗ್ಗೆ ವಿದ್ಯಾರ್ಥಿಗಳು ಸಹ ದೂರು ನೀಡಿದ್ದರು. ಹಾಗಾಗಿ, ತಂದೆ–ತಾಯಿಯನ್ನು ಶಾಲೆಗೆ ಕರೆದುಕೊಂಡು ಬರುವಂತೆ ತಿಳಿಸಿದ್ದೆವು. ಅದನ್ನೇ ಕೆಲವರು ತಪ್ಪಾಗಿ ಬಿಂಬಿಸಿ, ವಿಷಯ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವಂತೆ ಮಾಡಿದ್ದಾರೆ’ ಎಂದು ಶಾಲೆಯ ಮುಖ್ಯಸ್ಥ ಬಲ್ವಂತ್ ಗುಂಡಮಿ ಹೇಳಿದರು.

‘ಘಟನೆಗೆ ಸಂಬಂಧಿಸಿದಂತೆ, ಬಾಲಕನ ತಂದೆ ದೂರು ನೀಡಲು ಬಂದಿದ್ದರು. ಬಳಿಕ, ಶಾಲೆಯವರನ್ನು ಠಾಣೆಗೆ ಕರೆಸಿದೆವು. ಪ್ರಕರಣ ದಾಖಲಿಸಿಕೊಳ್ಳದೆ, ಇಬ್ಬರಿಗೂ ಬುದ್ಧಿವಾದ ಹೇಳಿ ಕಳಿಸಿದ್ದೇವೆ’ ಎಂದು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.