ADVERTISEMENT

ಸಾಧಕರ ಜೀವನ ವಿದ್ಯಾರ್ಥಿಗಳಿಗೆ ಪ್ರೇರಣೆ: ಮುರುಗೇಶ ನಿರಾಣಿ

ಪ್ರತಿಭಾ ಪುರಸ್ಕಾರ ಸಮಾರಂಭ; ಮುರುಗೇಶ ನಿರಾಣಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2025, 5:31 IST
Last Updated 21 ಸೆಪ್ಟೆಂಬರ್ 2025, 5:31 IST
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಿಂದ ಹುಬ್ಬಳ್ಳಿಯ ಲಿಂಗರಾಜನಗರದ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮುರುಗೇಶ ನಿರಾಣಿ ಮತ್ತು ಸ್ವಾಮೀಜಿಗಳು ಉದ್ಘಾಟಿಸಿದರು
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಿಂದ ಹುಬ್ಬಳ್ಳಿಯ ಲಿಂಗರಾಜನಗರದ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಮುರುಗೇಶ ನಿರಾಣಿ ಮತ್ತು ಸ್ವಾಮೀಜಿಗಳು ಉದ್ಘಾಟಿಸಿದರು   

ಹುಬ್ಬಳ್ಳಿ: ‘ಸಾಧಕರು ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವರಲ್ಲ. ಬಡ ಕುಟುಂಬದಿಂದ ಬಂದವರೂ ಪರಿಶ್ರಮದಿಂದ ಸಾಧನೆ ಮಾಡಿದ್ದಾರೆ. ಅಂತಹವರ ಜೀವನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.

ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಿಂದ ಇಲ್ಲಿನ ಲಿಂಗರಾಜನಗರ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ದೊಡ್ಡ ಗುರಿ ಇಟ್ಟುಕೊಳ್ಳಬೇಕು. ಅದನ್ನು ತಲುಪಲು ಪರಿಶ್ರಮ ಪಡಬೇಕು. ಅಪಹಾಸ್ಯ, ನಿಂದೆಗಳನ್ನು ನಿರ್ಲಕ್ಷಿಸಬೇಕು. ಸವಾಲುಗಳನ್ನು ಮೆಟ್ಟಿ ನಿಂತಾಗ ಮಾತ್ರ ಸಾಧನೆ ಮಾಡಲು ಸಾಧ್ಯ’ ಎಂದರು.

ADVERTISEMENT

‘ರಾಜ್ಯದಲ್ಲಿ 150ಕ್ಕೂ ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳಿವೆ. ಸಾಕಷ್ಟು ಕೈಗಾರಿಕೆಗಳಿವೆ. ರಾಜ್ಯದಲ್ಲಿರುವಷ್ಟು ಅವಕಾಶಗಳು ಬೇರೆ ಕಡೆ ಇಲ್ಲ. ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಾಧಕರ ಸಾಲಿನಲ್ಲಿ ನಿಲ್ಲಬೇಕು’ ಎಂದು ಹೇಳಿದರು.

‘ಪಂಚಮಸಾಲಿ ಸಮಾಜದ ಮಕ್ಕಳು ಆರ್ಥಿಕ ತೊಂದರೆ ಕಾರಣಕ್ಕೆ ವಿದ್ಯಾಭ್ಯಾಸ ನಿಲ್ಲಿಸಬಾರದು. ಅಂತಹ ಮಕ್ಕಳು ನಮ್ಮನ್ನು ಸಂಪರ್ಕಿಸಿದರೆ ನೆರವು ನೀಡಲಾಗುವುದು. ನಿರಾಣಿ ಗ್ರೂಪ್‌ನಿಂದ 100 ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಪಾಟೀಲ ಮಾತನಾಡಿ, ‘ಮೂರು ದಶಕಗಳ ಹಿಂದೆ ಸಂಘ ಸ್ಥಾಪನೆಯಾಗಿದೆ. ಪ್ರತಿ ವರ್ಷ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ನವೆಂಬರ್‌ನಲ್ಲಿ ಕೊಪ್ಪಳದಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದರು.

‘ಸಮಾಜದ ಮಕ್ಕಳು ವೈದ್ಯ, ಎಂಜಿನಿಯರ್‌ ಆಗುವ ಜತೆಗೆ ಐಎಎಸ್‌, ಐಪಿಎಸ್‌ ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಹೀಗಾಗಿ ಪ್ರತಿ ಆರು ತಿಂಗಳಿಗೊಮ್ಮೆ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುವುದು’ ಎಂದು ಹೇಳಿದರು.

‘ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ, ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಬೇಕು. ಈ ವಿಷಯದಲ್ಲಿ ಸಮಾಜದವರು ಗೊಂದಲಕ್ಕೊಳಗಾಗಬಾರದು’ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಸಂಘದ ಮಹಿಳಾ ಘಟಕದ ಅಧ್ಯಕ್ಷೆ ವಸಂತಾ ಹುಲ್ಲತ್ತಿ ಮಾತನಾಡಿದರು. ಆಲಗೂರ–ಜಮಖಂಡಿ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಿತ್ತೂರ ಪ್ರೌಢಶಾಲೆಯ ಸಹಾಯಕ ಮುಖ್ಯಶಿಕ್ಷಕ ಮಹೇಶ ಚೆನ್ನಂಗಿ ಉಪನ್ಯಾಸ ನೀಡಿದರು.

ಸಂಘದ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ನುಚ್ಚಿ, ಪ್ರಧಾನ ಕಾರ್ಯದರ್ಶಿ ಜಿ.ಜಿ.ದ್ಯಾವನಗೌಡ್ರ, ಲಲಿತಾ ಎಂ.ಪಾಟೀಲ, ಎಂ.ಆರ್.ಪಾಟೀಲ, ಎಚ್‌.ವಿ.ಬೆಳಗಲಿ, ರೇಣುಕಾ ಶಿರಗಂಬಿ, ಶಿವಕುಮಾರ ಬಳಿಗಾರ ಇದ್ದರು.

ಮುಂದಿನ ದಿನಗಳಲ್ಲಿ ಪಂಚಮಸಾಲಿ ಸಮಾಜದ ಇನ್ನೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಬೇಕು. ಅದಕ್ಕೆ ಅಗತ್ಯ ನೆರವು ನೀಡಲಾಗುವುದು
ಮುರುಗೇಶ ನಿರಾಣಿ ಉಪಾಧ್ಯಕ್ಷ ಬಿಜೆಪಿ ರಾಜ್ಯ ಘಟಕ

ಜಾಗೃತಿ ಅಭಿಯಾನಕ್ಕೆ ಚಾಲನೆ ಹುಬ್ಬಳ್ಳಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ಪಂಚಮಸಾಲಿ ಸಮಾಜದವರಲ್ಲಿ ಜಾಗೃತಿ ಮೂಡಿಸಲು ಮನೆಮನೆಗೆ ತೆರಳಿ ಸ್ಟಿಕ್ಕರ್ ಅಂಟಿಸುವ ಅಭಿಯಾನಕ್ಕೆ ವಚನಾನಂದ ಸ್ವಾಮೀಜಿ ಶನಿವಾರ ಚಾಲನೆ ನೀಡಿದರು.

ಇಲ್ಲಿನ ಲಿಂಗರಾಜನಗರದಲ್ಲಿ ಪಂಚಮಸಾಲಿ ಸಮಾಜದವರ ಮನೆಗೆ ಸ್ಟಿಕ್ಕರ್ ಅಂಟಿಸಿ ಮಾತನಾಡಿ ಸಮೀಕ್ಷೆಯಲ್ಲಿ ಪಂಚಮಸಾಲಿ ಸಮುದಾಯದವರು ಧರ್ಮದ ಕಾಲಂನಲ್ಲಿ ಹಿಂದೂ ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಸಬೇಕು. 16 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಮಾಜದವರ ಅಭಿಪ್ರಾಯ ಆಲಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದರು‌. ಆಯಾ ತಾಲ್ಲೂಕು ಜಿಲ್ಲಾ ಕೇಂದ್ರಗಳಲ್ಲಿ ಸಮುದಾಯದ ಪ್ರಮುಖರು ಜಾಗೃತಿ ಮೂಡಿಸಲಿದ್ದಾರೆ. ಮತ್ತೆ 16 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಾಗುವುದು‌. ನಮ್ಮ ಸಮಾಜದ ಮೂರು ಪೀಠಗಳು ಒಮ್ಮತದ ನಿರ್ಣಯ ಕೈಗೊಂಡಿದ್ದೇವೆ. ಎಲ್ಲ ಮುಖಂಡರು ಅದನ್ನು ಒಪ್ಪಿದ್ದಾರೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.