ಹುಬ್ಬಳ್ಳಿ: ಬೇಸಿಗೆ ರಜೆ ದಿನಗಳು ಆರಂಭವಾಗಿದ್ದು, ಮಕ್ಕಳು ಆಟದತ್ತ ಮುಖ ಮಾಡಿದ್ದಾರೆ. ಪೋಷಕರು ಸಹ ರಜೆ ದಿನಗಳಲ್ಲಿ ಮಕ್ಕಳಿಗೆ ಯಾವುದಾದರೊಂದು ಕ್ರಿಯಾತ್ಮಕ ಚಟುವಟಿಕೆ ಕಲಿಸುವ ತವಕದಲ್ಲಿ ಇದ್ದಾರೆ.
ಕೆಲ ಸಂಘ– ಸಂಸ್ಥೆ ಹಾಗೂ ಸ್ಪೋರ್ಟ್ಸ್ ಅಕಾಡೆಮಿಗಳು ಈಗಾಗಲೇ ಬೇಸಿಗೆ ಶಿಬಿರ ಆಯೋಜಿಸುತ್ತಿವೆ. ಕೆಲ ಸಾಮಾಜಿಕ ಸಂಘ–ಸಂಸ್ಥೆಗಳು ಮಕ್ಕಳ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಗಾಗಿ ಕೌಶಲ ಚಟುವಟಿಕೆಯನ್ನು ಕೈಗೊಂಡಿವೆ.
ಕೆಲವರು ಮಕ್ಕಳಿಗೆ ಸಂಗೀತ, ಹಾಡುಗಾರಿಕೆ, ನೃತ್ಯ, ಚಿತ್ರಕಲೆ, ಯೋಗ ತರಬೇತಿಯಂತಹ ಕ್ರಿಯಾತ್ಮಕ ಚಟುವಟಿಕೆ ಹಮ್ಮಿಕೊಂಡಿದ್ದರೆ, ಕೆಲ ಸ್ಪೋರ್ಟ್ಸ್ ಅಕಾಡೆಮಿಗಳು ಕ್ರಿಕೆಟ್, ವಾಲಿಬಾಲ್, ಬ್ಯಾಡ್ಮಿಂಟನ್, ಈಜು, ಫುಟ್ಬಾಲ್ ಕ್ರಿಡಾ ಚಟುವಟಿಕೆಗಳನ್ನು ಆಯೋಜಿಸಿವೆ.
ಪೋಷಕರು ಮಕ್ಕಳ ಕಲಿಕಾ ಆಸಕ್ತಿಗೆ ತಕ್ಕಂತೆ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುತ್ತಿದ್ದಾರೆ. ಶಿಬಿರಗಳ ಆಯೋಜಕರು ಸಹ ಬೆಳಿಗ್ಗೆ ಮತ್ತು ಸಂಜೆ ಬ್ಯಾಚ್ ಮಾಡಿಕೊಂಡು, ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ.
ನಗರದ ಕಲ್ಲೂರು ಲಕ್ಷ್ಮಿ ಲೇಔಟ್‌ನ ಪ್ರಕೃತಿ ಸ್ಪೋರ್ಟ್ಸ್ ಫೌಂಡೇಷನ್ (ಪಿಎಸ್‌ಎಫ್) ಒಂದು ತಿಂಗಳ ಬೇಸಿಗೆ ಶಿಬಿರ ಆಯೋಜಿಸಿದೆ. ಇಲ್ಲಿ ಬ್ಯಾಡ್ಮಿಂಟನ್, ಜಿಮ್ನಾಸ್ಟಿಕ್, ಫುಟ್ಬಾಲ್, ಕ್ರಿಕೆಟ್ ಇವುಗಳೊಂದಿಗೆ ನೃತ್ಯ, ಗಾಯನ, ಸಂಗೀತ, ಪೇಪರ್ ಕಟಿಂಗ್, ಬೊಂಬೆಗಳ ತಯಾರಿ, ಚಿತ್ರಕಲೆ ಹಾಗೂ ಯೋಗ ಕಲಿತಾ ತರಬೇತಿಯನ್ನು ಆರಂಭಿಸಿದೆ.
ನಗರದ ಹೊಸಕೋರ್ಟ್ ಬಳಿಯ ಕಲ್ಲೂರ ಲೇಔಟ್‌ನಲ್ಲಿರುವ ಶ್ರೀದುರ್ಗಾ ಸ್ಪೋರ್ಟ್ಸ್ ಅಕಾಡೆಮಿಯು ಈಗಾಗಲೇ ಕ್ರಿಕೆಟ್ ಬೇಸಿಗೆ ಶಿಬಿರವನ್ನು ಆಯೋಜಿಸಿ ಬೆಳಿಗ್ಗೆ ಹಾಗೂ ಸಂಜೆ ವೇಳೆಯಲ್ಲಿ ಒಟ್ಟು ನಾಲ್ಕು ಬ್ಯಾಚ್‌ಗಳಲ್ಲಿ ಪರಿಣತ ಹಾಗೂ ಅನುಭವಿ ತರಬೇತುದಾರರ ಮೂಲಕ ಕ್ರೀಡಾಪಟುಗಳಿಗೆ ಕ್ರಿಕೆಟ್ ತರಬೇತಿ ನೀಡುತ್ತಿದೆ. ಬೇಸಿಗೆ ಶಿಬಿರಕ್ಕಾಗಿಯೇ ವಿಶೇಷ ಕ್ರಿಕೆಟ್ ಪಠ್ಯಕ್ರಮ ರಚಿಸಿ, ಬ್ಯಾಟಿಂಗ್, ಫೀಲ್ಡಿಂಗ್, ವಿಕೇಟ್ ಕೀಪಿಂಗ್ ಸೇರಿದಂತೆ ಕ್ರಿಕೆಟ್‌ನ ಪ್ರತಿಯೊಂದು ವಿಭಾಗದಲ್ಲಿ ಸೂಕ್ಷ್ಮ ತರಬೇತಿ ನೀಡಲಾಗುತ್ತಿದೆ. ಶಾಂತಿನಗರದ ಎಲೈಟ್ ಸ್ಟೋರ್ಟ್ಸ್ ಅಕಾಡೆಮಿಯು ಕ್ರಿಕೆಟ್ ಹಾಗೂ ಫುಟ್ಬಾಲ್ ತರಬೇತಿಯನ್ನು ಆಯೋಜಿಸಿದೆ.
ಉತ್ತರ ಕರ್ನಾಟಕ ಸ್ಪೋರ್ಟ್ಸ್ ಕ್ಲಬ್ (ಎನ್‌ಕೆಎಸ್‌ಸಿ) ಹಾಗೂ ಸೆಂಟ್ ಆಂತೋನಿ ಪಬ್ಲಿಕ್ ಸ್ಕೂಲ್ ವತಿಯಿಂದ ಆಸಕ್ತರಿಗೆ ಕ್ರಿಕೆಟ್ ತರಬೇತಿ ಆಯೋಜಿಸಲಾಗಿದೆ. ಮಂಜುನಾಥ ನಗರದ ಭೈರವಿ ವಿದ್ಯಾ ಕೋಚಿಂಗ್ ಸೆಂಟರ್ ವತಿಯಿಂದ ಹೊಸೂರಿನ ವಿದ್ಯಾಪೀಠದ ಕಾಲೇಜಿನಲ್ಲಿ ‘ಕಿಡ್ಸೋತ್ಸವ (ಮಕ್ಕಳ ಉತ್ಸವ) ಮತ್ತು ಗಣಿತ ಕಲಿಯುವ ‘ಮಂಜುಸ್ ಮ್ಯಾಥ್ಸ್ ಶಿಬಿರ’ ಆಯೋಜಿಸಿದೆ.
‘5 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಆವಿಷ್ಕರಿಸಿದ ನೂತನ ಕಲಿಕೆ ’ಮಂಜೂಸ್ ಮ್ಯಾಥ್ಸ್’ ಗಣಿತ ಸುಲಭ ರೀತಿಯಲ್ಲಿ ಹೇಳಿಕೊಡಲಾಗುತ್ತದೆ. ಶಿಬಿರದಲ್ಲಿ ಮಕ್ಕಳಿಗೆ ಓದು, ಬರಹ, ಅಕ್ಷರ ಜ್ಞಾನ, ಯೋಗ, ಸಂಗೀತ, ನೃತ್ಯ, ಕರಾಟೆ, ನಾಟಕ, ಸಾಂಸ್ಕೃತಿಕ ವೇಷಭೂಷಣ, ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನ ವಿತರಿಸಲಾಗುತ್ತದೆ’ ಎಂದು ಕೋಚಿಂಗ್ ಸೆಂಟರ್ ನಿರ್ದೇಶಕ ಮಂಜುನಾಥ ಅಣ್ಣಿಗೇರಿ ತಿಳಿಸಿದರು.
ವಿದ್ಯಾನಗರದ ಉಣಕಲ್ ಕ್ರಾಸ್ ರಸ್ತೆಯ ಗಿರಿ ಡ್ಯಾನ್ಸ್ ಸ್ಟೂಡಿಯೊ ಮಕ್ಕಳಿಗಾಗಿ ನೃತ್ಯ, ಚಿತ್ರಕಲೆ, ಸುಂದರ ಬರಹ, ಕಥೆ ಹೇಳುವಿಕೆ ಹಾಗೂ ಯೋಗ ತರಬೇತಿ ಶಿಬಿರ ಆಯೋಜಿಸಿದೆ. ನೃತ್ಯ ಹಾಗೂ ಬೇಸಿಗೆ ಶಿಬಿರದ ಚಟುವಟಿಕೆಗಳನ್ನು ಪ್ರತ್ಯೇಕವಾಗಿ ನಡೆಸಲಾಗುತ್ತಿದೆ ಎನ್ನುತ್ತಾರೆ ಗಿರಿ ಡ್ಯಾನ್ಸ್ ಸ್ಟೂಡಿಯೊದ ಮಾಲೀಕ ಗಿರಿ.
‘ಎಸ್‌ಪಿವೈಎಸ್‌ಎಸ್ ಮಕ್ಕಳ ವಸಂತ ಶಿಬಿರ’ ಆರಂಭಿಸಿದ್ದು ಪ್ರಮುಖ ಉದ್ಯಾನಗಳಲ್ಲಿ ಬೆಳಿಗ್ಗೆ ಮಕ್ಕಳಿಗೆ ಉಚಿತವಾಗಿ ಯೋಗ ಪ್ರಾಣಯಾಮ ಹಾಗೂ ಧ್ಯಾನ ಹೇಳಿಕೊಡಲಾಗುತ್ತಿದೆ.ಕೈಲಾಸ ಹಿರೇಮಠ ಯೋಗ ಶಿಕ್ಷಕ ಪತಾಂಜಲಿ ಯೋಗ ಶಿಕ್ಷಣ ಸಮಿತಿ. ಯೋಗ ಸ್ಪರ್ಶ ಪ್ರತಿಷ್ಠಾನ
ತೋಳನಕೆರೆ ಉದ್ಯಾನದಲ್ಲಿ ಮಕ್ಕಳಿಗೆ ಉಚಿತವಾಗಿ ಯೋಗ ಧ್ಯಾನ ಪ್ರಾಣಯಾಮ ತರಬೇತಿ ನೀಡಲಾಗುತ್ತಿದೆ. ಕಥೆ ಕವನ ಹಾಗೂ ಚಿತ್ರಕಲೆಯೂ ಕಲಿಸಲಾಗುತ್ತಿದೆ.–ಚೇತನಾ ಆರ್. ಯೋಗ ಶಿಕ್ಷಕಿ
ಬೇಸಿಗೆ ಶಿಬಿರಕ್ಕೆ ಸೇರಿಸುವಲ್ಲಿ ಮಕ್ಕಳ ಅಭಿರುಚಿಗಿಂತ ಪೋಷಕರ ತವಕವೇ ಹೆಚ್ಚಾಗಿದೆ. ಇದು ಮಕ್ಕಳ ಮನಸ್ಸಿನ ಮೇಲೆ ಪರೋಕ್ಷವಾಗಿ ಒತ್ತಡ ಬೀರುತ್ತಿದೆ. ಮಕ್ಕಳಿಗೆ ತೊಂದರೆ ಆಗಬಾರದು.– ಎನ್.ಭಾಸ್ಕರ್ ಯರಗುಂಟೆ ಉಪನ್ಯಾಸಕ
ಶಿಬಿರಗಳಿಗೆ ಮಕ್ಕಳನ್ನು ಸೇರಿಸುವ ಮುನ್ನ ಶಿಬಿರದ ಚಟುವಟಿಕೆ ತರಬೇತಿ ಸಮಯ ಸೌಲಭ್ಯ ಎಲ್ಲವನ್ನೂ ತಿಳಿದುಕೊಳ್ಳಬೇಕು. ಸೂಕ್ತ ಅನ್ನಿಸಿದ್ದಲ್ಲಿ ಮಕ್ಕಳನ್ನು ಶಿಬಿರಕ್ಕೆ ಸೇರಿಸಬೇಕು.ರಂಗನಗೌಡ ಕೆ.ಚಿಕ್ಕನಗೌಡ್ರು ಎಸ್‌ಡಿಎಂಸಿ ಅಧ್ಯಕ್ಷ ಚಿಕ್ಕಮಠ ಸರ್ಕಾರಿ ಶಾಲೆ ಉಣಕಲ್
‘ನಿತ್ಯ ಶಾಲೆ ಓದು ಬರಹ ಹೋಮ್‌ವರ್ಕ್ ಒತ್ತಡದಿಂದ ಬಳಲುವ ಮಕ್ಕಳು ಬೇಸಿಗೆಯ ದಿನಗಳಲ್ಲಿ ಅಜ್ಜಿ– ಅಜ್ಜನ ಮನೆಯಲ್ಲಿ ಆಡುತ್ತಾ ಪೋಷಕರೊಂದಿಗೆ ಪ್ರವಾಸ ಮಾಡುತ್ತಾ ದೈಹಿಕ ಹಾಗೂ ಮಾನಸಿಕವಾಗಿ ಬೆಳೆಯಬೇಕು ಎಂಬ ಉದ್ದೇಶದಿಂದ ಬೇಸಿಗೆ ರಜೆ ನೀಡಲಾಗುತ್ತಿದೆ. ಆದರೆ ಪೋಷಕರು ಮಕ್ಕಳು ಸರ್ವತೋಮುಖವಾಗಿ ಬೆಳೆಯಬೇಕು ಎಂಬ ಚಿಂತನೆಯಿಂದ ಅವರನ್ನು ಬೇಸಿಗೆ ಶಿಬಿರಗಳಿಗೆ ಸೇರಿಸುತ್ತಿದ್ದಾರೆ’ ಎಂದು ಶಿಕ್ಷಕಿ ವೀಣಾ ಯರಗುಂಟೆ ತಿಳಿಸಿದರು. ‘ಇತ್ತೀಚಿನ ದಿನಗಳಲ್ಲಿ ವಿಭಕ್ತ ಕುಟುಂಬಗಳಿಂದಾಗಿ ಮಕ್ಕಳು ಅಜ್ಜ– ಅಜ್ಜಿ ಸಂಬಂಧಿಕರೊಂದಿಗೆ ಬೆಳೆಯುವಂತಹ ವಾತಾವರಣ ಕ್ರಮೇಣ ಕಡಿಮೆಯಾಗುತ್ತಿದೆ. ಮಕ್ಕಳು ಹಿರಿಯರ ಸಂಬಂಧದಿಂದ ದೂರ ಉಳಿಯದಂತೆ ನೋಡಿಕೊಳ್ಳಬೇಕು’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.