ADVERTISEMENT

ಗ್ರಾಮೀಣ ಭಾಗದ ಮಕ್ಕಳು ಇಂಗ್ಲಿಷ್ ಕಲಿಯಿರಿ: ಹುಡೇದಮನಿ

ದೇಶಪಾಂಡೆ ಫೌಂಡೇಷನ್ ಬೇಸಿಗೆ ಶಿಬಿರ ಸಮಾರೋಪ

​ಪ್ರಜಾವಾಣಿ ವಾರ್ತೆ
Published 11 ಮೇ 2019, 14:10 IST
Last Updated 11 ಮೇ 2019, 14:10 IST
ದೇಶಪಾಂಡೆ ಫೌಂಡೇಷನ್ ಆಯೋಜಿಸಿದ್ದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭವನ್ನು ಗಣ್ಯರು ಹಾಗೂ ಶಿಬಿರಾರ್ಥಿಗಳು ಉದ್ಘಾಟಿಸಿದರು–
ದೇಶಪಾಂಡೆ ಫೌಂಡೇಷನ್ ಆಯೋಜಿಸಿದ್ದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭವನ್ನು ಗಣ್ಯರು ಹಾಗೂ ಶಿಬಿರಾರ್ಥಿಗಳು ಉದ್ಘಾಟಿಸಿದರು–   

ಹುಬ್ಬಳ್ಳಿ: ‘ಗ್ರಾಮೀಣ ಭಾಗದ ಮಕ್ಕಳು ಇಂಗ್ಲಿಷ್ ಭಾಷೆ ಕಲಿತು ಕಲಿತು ತಾವೇ ಕಾರ್ಯಕ್ರಮ ನಿರ್ವಹಣೆ ಮಾಡಿದ್ದು ಹೆಮ್ಮೆಯ ಸಂಗತಿ. ಭಾಷೆಯ ಕಲಿಕೆ ಇಂದಿನ ಅಗತ್ಯ’ ಎಂದು ಹುಬ್ಬಳ್ಳಿ ಗ್ರಾಮಾಂತರ ಭಾಗದ ಶಿಕ್ಷಣಾಧಿಕಾರಿ ಎಸ್‌.ಎಂ. ಹುಡೇದಮನಿ ಹೇಳಿದರು.

ದೇಶಪಾಂಡೆ ಫೌಂಡೇಷನ್ ಆಯೋಜಿಸಿದ್ದ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಬಿರದಲ್ಲಿ ಮಕ್ಕಳಿಗೆ ಇಂಗ್ಲಿಷ್ ಕಲಿಸಿರುವುದು ಶ್ಲಾಘನೀಯ. ದೇಶಪಾಂಡೆ ಫೌಂಡೇಷನ್ ಮಾಡುವ ಇಂತಹ ಕಾರ್ಯಕ್ರಮಗಳಿಗೆ ಶಿಕ್ಷಣ ಇಲಾಖೆ ಸಹ ಕೈಜೋಡಿಸಬೇಕು ಎಂದರು.

‘ಒಂದು ವರ್ಷದಲ್ಲಿ ನಮ್ಮ ಈ ಹಳ್ಳಿಯ ಶಾಲೆಯಲ್ಲಿ ಕಲಿಯಲು ಆಗದ್ದನ್ನು ಒಂದು ತಿಂಗಳ ಬೇಸಿಗೆ ಶಿಬಿರದಲ್ಲಿ ಕಲಿಯಲು ಸಾಧ್ಯವೇ ಎಂದು ನೆನಪಿಸಿಕೊಂಡಾಗ ಆಶ್ಚರ್ಯವಾಯಿತು. ಈ ಬೇಸಿಗೆ ಶಿಬಿರ ನನ್ನ ವ್ಯಕ್ತಿತ್ವ ರೂಪಾಂತರಕ್ಕೆ ಕಾರಣವಾಗಿದೆ. ಮುಂದಿನ ಗುರಿಯ ಬಗ್ಗೆ ಸ್ಪಷ್ಟ ಕಲ್ಪನೆ ಮೂಡಿದೆ’ ಎಂದು ಶಿಬಿರದಲ್ಲಿ ಪಾಲ್ಗೊಂಡಿದ್ದ ಶಿರ್ಕೋಲಿಯ ಶಿಬಿರಾರ್ಥಿ ಅಂಜುಮ ಎಂ. ಬುದ್ದಂಕಾನ್ ಹೇಳಿದರು.

ADVERTISEMENT

ಹತ್ತನೇ ತರಗತಿ ವಿದ್ಯಾರ್ಥಿ ಗದುಗಿನ ಅಜಿತ್ ಪ್ರಕಾಶ್ ದಾದಾಮಣಿ ಮಾತನಾಡಿ, ‘ಬಹಳ ಸೋಮಾರಿಯಾಗಿದ್ದ ನಾನು ಈಗ ಬಹಳ ಕ್ರಿಯಾಶೀಲನಾಗಿದ್ದೇನೆ. ಹಲವು ವಿಷಯಗಳನ್ನು ತಿಳಿದುಕೊಳ್ಳಲು ಸಹ ಈ ಶಿಬಿರದಿಂದ ಸಾಧ್ಯವಾಯಿತು’ ಎಂದರು.

ಹತ್ತನೇ ತರಗತಿ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಶಿಬಿರದಲ್ಲಿ ಹುಬ್ಬಳ್ಳಿ ಸುತ್ತಮುತ್ತಲಿನ ಹೆಬ್ಬಾಳ, ತಡಾಸ, ತಿರ್ಲಾಪುರ, ಅಲ್ಲಾನಗರ, ಕಿರೇಸೂಲ್, ಶಿರ್ಕೋಲ್‌ನ 127 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಿಬಿರದಲ್ಲಿ ಇಂಗ್ಲಿಷ್, ಗಣಿತ, ಕೌಶಲಾಭಿವೃದ್ದಿ, ಸಮಸ್ಯೆ ಪರಿಹರಿಸುವುದು, ಸಂಘಟನೆ, ಪ್ರದರ್ಶನ, ಅವಿಷ್ಕಾರ ವಿಷಯಗಳ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಾಯಿತು.

ದೇಶಪಾಂಡೆ ಫೌಂಡೇಷನ್ ಸಿಇಒ ವಿವೇಕ್ ಪವಾರ್, ಇಸಿಒ ಅಧಿಕಾರಿ ಪಿ.ಎನ್. ನಾಯಕ್, ಎಚ್‌. ಹರೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.