ADVERTISEMENT

ಹುಬ್ಬಳ್ಳಿ: ಫೆ. 5ರಂದು ಮನದುಂಬಿ ನಗಿಸುವ ‘ಸೂಪರ್ ಸಂಸಾರ’ ನಾಟಕ

ಆದಿ ರಂಗ ಥಿಯೇಟರ್ಸ್‌ನಲ್ಲಿ ನಾಳೆ ಪ್ರಥಮ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 6:20 IST
Last Updated 4 ಫೆಬ್ರುವರಿ 2023, 6:20 IST
‘ಸೂಪರ್ ಸಂಸಾರ’ದ ನಾಟಕದ ದೃಶ್ಯವೊಂದರಲ್ಲಿ ಪಾತ್ರಧಾರಿಗಳಾದ ಯಶವಂತ ಸರದೇಶಪಾಂಡೆ, ಶಿಲ್ಪಾ ಪಾಂಡೆ, ಕಿಟ್ಟಿ ಗಾಂವ್ಕರ್, ಶೋಭಾ ಜೋಶಿ, ರವಿ ಕುಲಕರ್ಣಿ, (ಕುಳಿತವರು) ಪ್ರದೀಪ ಮುಧೋಳ ಹಾಗೂ ಪೂಜಾಮಣಿ ಜಹಗೀರದಾರ
‘ಸೂಪರ್ ಸಂಸಾರ’ದ ನಾಟಕದ ದೃಶ್ಯವೊಂದರಲ್ಲಿ ಪಾತ್ರಧಾರಿಗಳಾದ ಯಶವಂತ ಸರದೇಶಪಾಂಡೆ, ಶಿಲ್ಪಾ ಪಾಂಡೆ, ಕಿಟ್ಟಿ ಗಾಂವ್ಕರ್, ಶೋಭಾ ಜೋಶಿ, ರವಿ ಕುಲಕರ್ಣಿ, (ಕುಳಿತವರು) ಪ್ರದೀಪ ಮುಧೋಳ ಹಾಗೂ ಪೂಜಾಮಣಿ ಜಹಗೀರದಾರ   

ಹುಬ್ಬಳ್ಳಿ: ನಗೆಯೋಕುಳಿ ಜೊತೆಗೆ ಸಮಾಜಮುಖಿ ಸಂದೇಶದ ನಾಟಕಗಳಿಗೆ ಹೆಸರಾಗಿರುವ ಗುರು ಇನ್‌ಸ್ಟಿಟ್ಯೂಟ್ ತಂಡ ಇದೀಗ ಹೊಸ ಪ್ರಯೋಗದೊಂದಿಗೆ ಮತ್ತೆ ಸದ್ದು ಮಾಡುತ್ತಿದೆ. ‘ಸೂಪರ್ ಸಂಸಾರ’ ಎಂಬ ಭರಪೂರ ಮನರಂಜನೆಯ ನಾಟಕದ ಪ್ರಥಮ ಪ್ರಯೋಗದೊಂದಿಗೆ, ಫೆ. 5ರಂದು ಸಂಜೆ 6.30ಕ್ಕೆ ಪ್ರೇಕ್ಷಕರೆದುರು ಬರಲು ಸಜ್ಜಾಗಿದೆ.

ಸಂತೋಷ್ ಪವಾರ್ ಅವರು ರಚಿಸಿರುವ ಮರಾಠಿ ಮೂಲದ ಈ ನಾಟಕವನ್ನು ರಂಗಕರ್ಮಿ ಡಾ. ಯಶವಂತ ಸರದೇಶಪಾಂಡೆ ಅವರು, ಕನ್ನಡಕ್ಕೆ ಅನುವಾದಿಸಿ ಆ್ಯಕ್ಷನ್ ಕಟ್ ಹೇಳಿ ರಂಗದ ಮೇಲೆ ತಂದಿದ್ದಾರೆ. ಗೋಕುಲ ರಸ್ತೆಯ ಲೋಹಿಯಾ ನಗರದ ರಾಯನಾಳ ಕೆರೆ ದಂಡೆ ಮೇಲಿರುವ ಆದಿ ರಂಗ ಥಿಯೇಟರ್ಸ್‌ನ ವಿಜಯರಂಗ ಸಭಾಂಗಣದಲ್ಲಿ ನಾಟಕ ಪ್ರದರ್ಶನ ಕಾಣಲಿದೆ.

‘ಎರಡೂವರೆ ತಾಸಿನ ನಾಟಕದ ಪ್ರತಿ ದೃಶ್ಯವೂ ಹಾಸ್ಯದ ತರಂಗಗಳನ್ನೆಬ್ಬಿಸುತ್ತಾ ಸಂಸಾರದಲ್ಲಿ ಹೊಂದಿಕೊಂಡು ಬಾಳುವ ಗುಟ್ಟನ್ನು ಬಿಚ್ಚಿಡುತ್ತಾ ಹೋಗುತ್ತದೆ. ಪ್ರೇಕ್ಷಕರು ಕುರ್ಚಿಯಂಚಿಗೆ ಬಂದು ನಾಟಕವನ್ನು ಆನಂದಿಸುತ್ತಾ, ನಗೆಗಡಲಲ್ಲಿ ತೇಲುವಂತೆ ಮಾಡುತ್ತದೆ’ ಎಂದು ನಿರ್ದೇಶಕ ಸರದೇಶಪಾಂಡೆ ನಾಟಕದ ಎಳೆಯನ್ನು ಬಿಚ್ಚಿಟ್ಟರು.

ADVERTISEMENT

ಧಾರವಾಡದ ರಂಗ ಆಯೋಜಕ ಹಾಗೂ ಕಲಾವಿದ ರವಿ ಕುಲಕರ್ಣಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದರೆ, ಅವರ ಸಂಗಾತಿಯಾಗಿ ನೀನಾಸಂ ಪ್ರತಿಭೆ ಶೋಭಾ ಜೋಶಿ ಮತ್ತು ಮಗಳಾಗಿ ವಿಜಯಪುರದ ಪೂಜಾಮಣಿ ಜಹಗೀರದಾರ ನಟಿಸಿದ್ದಾರೆ. ನಾಟಕದಲ್ಲಿ ಎದುರು ಮನೆಯ ಕುಟುಂಬದವರಾಗಿ ಧಾರವಾಡದ ಶಿಲ್ಪಾ ಪಾಂಡೆ, ಶಿರಸಿಯ ಕಿಟ್ಟಿ ಗಾಂವ್ಕರ್, ಹುಬ್ಬಳ್ಳಿಯ ಪ್ರದೀಪ ಮುಧೋಳ ಜೊತೆಗೆ, ಯಶವಂತ ಸರದೇಶಪಾಂಡೆ ಕೂಡ ಕಾಣಿಸಿಕೊಂಡಿದ್ದಾರೆ. ನಾಟಕದ ಮೇಲ್ವಿಚಾರಣೆಯನ್ನು ಜೀವನ ಫರ್ನಾಂಡಿಸ್ ಮತ್ತು ಧ್ವನಿ– ಬೆಳಕಿನ ಹೊಣೆಯನ್ನು ನಾಗರಾಜ ಪಾಟೀಲ ನಿರ್ವಹಿಸಿದ್ದಾರೆ.

ಹುಬ್ಬಳ್ಳಿಯ ಕ್ಷಮತಾ ಸಂಸ್ಥೆಯ ಅಧ್ಯಕ್ಷ ಹುಬ್ಬಳ್ಳಿಯ ಗೋವಿಂದ ಜೋಶಿ ಮತ್ತು ಮೈಸೂರಿನ ಹಿರಿಯ ಪತ್ರಕರ್ತ ರವೀಂದ್ರ ಜೋಶಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.