ADVERTISEMENT

ಧಾರವಾಡ | ‘ಆ್ಯಪ್‌’, ಒಟಿಪಿ ಸಮಸ್ಯೆ; ಸಮೀಕ್ಷೆಗೆ ತೊಡಕು

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಚಾಲನೆ, ವಿವಿಧ ಪ್ರದೇಶಗಳಿಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 3:05 IST
Last Updated 23 ಸೆಪ್ಟೆಂಬರ್ 2025, 3:05 IST
ಧಾರವಾಡದ ಪೆಂಡಾರಗಲ್ಲಿಯಲ್ಲಿ ಸೋಮವಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ಜಿಲ್ಲಾಧಿಕಾರಿ ದಿವ್ಯಪ್ರಭು ಪರಿಶೀಲಿಸಿದರು
ಧಾರವಾಡದ ಪೆಂಡಾರಗಲ್ಲಿಯಲ್ಲಿ ಸೋಮವಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯವನ್ನು ಜಿಲ್ಲಾಧಿಕಾರಿ ದಿವ್ಯಪ್ರಭು ಪರಿಶೀಲಿಸಿದರು    

ಧಾರವಾಡ: ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸೋಮವಾರ ಚಾಲನೆ ನೀಡಲಾಯಿತು. ‘ಆ್ಯಪ್‌‘ ಓಪನ್‌ ಆಗದಿರುವುದು, ‘ಒಟಿಪಿ’, ‘ನೆಟ್‌ವರ್ಕ್‌ ಸಮಸ್ಯೆಗಳಿಂದಾಗಿ ಮೊದಲ ದಿನ ಸಮೀಕ್ಷೆ ಕಾರ್ಯಕ್ಕೆ ತೊಡಕಾಗಿದೆ.

ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು, ಅವಳಿ ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ, ಸಮೀಕ್ಷಾ ಕಾರ್ಯ ಪರಿಶೀಲಿಸಿದರು. ನಗರದ ಪೆಂಡಾರಗಲ್ಲಿ, ತಡಕೋಡ ಓಣಿ ಪ್ರದೇಶಗಳಲ್ಲಿ ಸಂಚರಿಸಿ, ಸಮೀಕ್ಷೆ ಪ್ರಕ್ರಿಯೆ ಪರಿಶೀಲಿಸಿದರು.

ಪೆಂಡಾರಗಲ್ಲಿಯ ರೇಣುಕಾ ಬೋಮ್ಮಣ್ಣವರ ಮನೆಯಲ್ಲಿ ಕುಟುಂಬದ ಸಮೀಕ್ಷೆ ಪ್ರಕ್ರಿಯೆ ವೀಕ್ಷಿಸಿದರು. ಸಮೀಕ್ಷೆಯ ಉಪಯುಕ್ತತೆ ಕುರಿತು ಕುಟುಂಬದವರಿಗೆ ವಿವರಿಸಿದರು.

ADVERTISEMENT

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಸಮೀಕ್ಷೆ ನಿಯೋಜನೆ ಆಗಿರುವ ಸಿಬ್ಬಂದಿಗಳು ತಮಗೆ ಹಂಚಿಕೆ ಆಗಿರುವ ಮನೆ, ಕುಟುಂಬಗಳ ಮಾಹಿತಿ ನಿಖರವಾಗಿ ಭರ್ತಿ ಮಾಡಬೇಕು. ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ ಜಿಲ್ಲಾ ತಾಂತ್ರಿಕ ಸಮಾಲೋಚಕರಿಗೆ ಅಥವಾ ಸಹಾಯವಾಣಿಗೆ ಕರೆ ಮಾಡಿ, ಪರಿಹರಿಸಿಕೊಳ್ಳಬೇಕು ಎಂದು ತಿಳಿಸಿದರು.

ಎಲ್ಲ ಮನೆ ಹಾಗೂ ಕುಟುಂಬಗಳ ಸಮೀಕ್ಷೆಯನ್ನು ಅಕ್ಟೋಬರ್ 7 ರೊಳಗೆ ಪೂರ್ಣಗೊಳಿಸಬೇಕು. ಪ್ರತಿದಿನ ಸಂಜೆ ಅಂದಿನ ಸಮೀಕ್ಷೆ ಕಾರ್ಯದ ಪ್ರಗತಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಲ್ಲಿಸಬೇಕು. 16 ದಿನ ಸಮೀಕ್ಷೆ ನಡೆಯಲಿದೆ ಎಂದರು.

ಜಿಲ್ಲೆಯಲ್ಲಿ ಸುಮಾರು 5.46 ಲಕ್ಷ ಕುಟುಂಬಗಳನ್ನು ಗುರುತಿಸಲಾಗಿದೆ. 150 ರಿಂದ 200 ಮನೆಗಳನ್ನು ಒಂದು ಗುಂಪಾಗಿ ವಿಂಗಡಿಸಲಾಗಿದೆ. ಜಿಲ್ಲೆಯಲ್ಲಿ ಸಮೀಕ್ಷೆಗೆ 4,880 ಸಮೀಕ್ಷಕರನ್ನು ನೇಮಿಸಲಾಗಿದೆ. ಮೇಲ್ವಿಚಾರಣೆಗೆ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಎಲ್ಲ ಸಾರ್ವಜನಿಕರು ಕೈಜೋಡಿಸಿ ಸಮೀಕ್ಷೆಯನ್ನು ಯಶಸ್ವಿ ಮಾಡಬೇಕು ಎಂದು ಕೋರಿದರು.

ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಭಾನುಮತಿ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ತಾಲ್ಲೂಕು ವಿಸ್ತರಣಾ ಅಧಿಕಾರಿ ಸಂಜೀವ ಕೆಸರಿ ಇದ್ದರು.

ಧಾರವಾಡದ ಪೆಂಡಾರಗಲ್ಲಿಯ ಮನೆಯೊಂದರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ಕುಟುಂಬದವರಿಗೆ ಮಾಹಿತಿ ನಿಡಿದರು

ಕೆಲವಡೆ ತಡವಾಗಿ ಆರಂಭ

ಹುಬ್ಬಳ್ಳಿ ಕುಂದುಗೋಳ ನವಲಗುಂದ ಕಲಘಟಗಿ ನವಲಗುಂದ ಅಣ್ಣಿಗೇರಿ ತಾಲ್ಲೂಕುಗಳಲ್ಲಿ ‘ಆ್ಯಪ್‌’ ‘ಒಟಿಪಿ’ ಸಮಸ್ಯೆಗಳು ಕಂಡುಬಂದಿವೆ. ಕೆಲವೆಡೆ ಮಧ್ಯಾಹ್ನದ ನಂತರ ಸಮೀಕ್ಷೆ ಅರಂಭವಾಗಿದೆ. ಸರ್ವರ್ ಸಮಸ್ಯೆಯಾಗಿತ್ತು. ಬೆಳಿಗ್ಗೆ ಸರ್ವರ್ ಓಪನ್ ಆಗಿಲ್ಲ ಎಂದು ಅಣ್ಣಿಗೇರಿಯ ಶಿಕ್ಷಕರೊಬ್ಬರು ತಿಳಿಸಿದರು. ಆ್ಯಪ್ ಓಪನ್‌ ಆಗದೆ ಕುಂದಗೋಳ ತಾಲ್ಲೂಕಿನಲ್ಲಿ ಸಮೀಕ್ಷೆ ತಡವಾಗಿ ಆರಂಭವಾಗಿದೆ. ‘ಹಲವು ಸಮೀಕ್ಕ್ಷಕರ ಮೊಬೈಲ್‌ ಫೋನ್‌ನಲ್ಲಿ ಆ್ಯಪ್‌ ಓನ್‌ ಆಗಿಲ್ಲ. ಹೀಗಾಗಿ ಸೋಮವಾರ ಕೆಲವು ಸಮೀಕ್ಷಕರು ಮಾತ್ರ ಸಮೀಕ್ಷೆ ಆರಂಭಿಸಿದ್ದಾರೆ’ ಎಂದು ಕುಂದಗೋಳ ತಹಶೀಲ್ದಾರ್‌ ರಾಜು ಮಾವರಕರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.