ಹುಬ್ಬಳ್ಳಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಗರ ಪ್ರದೇಶದಲ್ಲಿ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿಲ್ಲ. ಈವರೆಗೆ ಶೇ 65ರಷ್ಟು ಮನೆಗಳ ಸಮೀಕ್ಷೆ ಮಾತ್ರ ಪೂರ್ಣಗೊಂಡಿದೆ.
ಸೆ. 22ರಿಂದ ಸಮೀಕ್ಷಾ ಕಾರ್ಯ ಆರಂಭವಾಗಿದ್ದು, ಪ್ರಾರಂಭದಲ್ಲಿ ಆ್ಯಪ್, ನೆಟ್‌ವರ್ಕ್ ಸಮಸ್ಯೆಗಳು ಎದುರಾಗಿದ್ದವು. ನಂತರದ ದಿನಗಳಲ್ಲಿ ಸರ್ವರ್ ಸಮಸ್ಯೆ ಕಾಡಿತು. ಮೊದಲ ನಾಲ್ಕು ದಿನ ಬೆರಳೆಣಿಕೆಯಷ್ಟು ಮನೆಗಳಿಂದ ದತ್ತಾಂಶ ಸಂಗ್ರಹಿಸಲಾಗಿತ್ತು. ಈಗ ತಾಂತ್ರಿಕ ಸಮಸ್ಯೆ ಬಗೆಹರಿದಿದ್ದರೂ, ಮಾಹಿತಿ ನೀಡುವಲ್ಲಿ ಜನರ ಹಿಂದೇಟು ಹಾಕುತ್ತಿದ್ದು, ಸಮೀಕ್ಷೆಗೆ ಹಿನ್ನಡೆಯಾಗಿದೆ.
ಹಿನ್ನಡೆಗೆ ಕಾರಣವೇನು?: ‘ಬಹುತೇಕ ಮನೆಗಳಲ್ಲಿ ಜನರು ಕುಟುಂಬದ ಆದಾಯ, ಉದ್ಯೋಗ, ವೇತನ, ಸಾಲ, ವಾಹನಗಳ ಮಾಹಿತಿ ಸರಿಯಾಗಿ ನೀಡುತ್ತಿಲ್ಲ. ಕೆಲವರು ವೈಯಕ್ತಿಕ ಮಾಹಿತಿ ಏಕೆ ನೀಡಬೇಕು ಎಂದು ಪ್ರಶ್ನಿಸುತ್ತಾರೆ. ಉತ್ತಮ ವೇತನ ಬರುವ ಉದ್ಯೋಗದಲ್ಲಿದ್ದರೂ, ನಿರುದ್ಯೋಗಿ, ಕೂಲಿ ಎಂದು ಬರೆಸಿದ್ದಾರೆ. ಕೆಲವು ಮನೆಗಳ ಸದಸ್ಯರು ಸಮೀಕ್ಷೆಯಿಂದ ದೂರ ಉಳಿದಿದ್ದಾರೆ’ ಎಂದು ಸಮೀಕ್ಷಕರೊಬ್ಬರು ತಿಳಿಸಿದರು.
‘ಹೆಸ್ಕಾಂ ಸಿಬ್ಬಂದಿ ಯುಎಚ್‌ಐಡಿ ಸ್ಟಿಕ್ಕರ್ ಅನ್ನು ಕ್ರಮವಾಗಿ ಮನೆಗಳಿಗೆ ಅಂಟಿಸದ ಕಾರಣ, ಮನೆಗಳನ್ನು ಗುರುತಿಸುವುದು ಕಷ್ಟವಾಗಿದೆ. ಕೆಲವು ಮನೆಗಳ ಬಾಗಿಲಿಗೆ ಬೀಗ ಹಾಕಿದ್ದು, ಎರಡು–ಮೂರು ಬಾರಿ ತೆರಳಿದ್ದರೂ ಯಾರೂ ಸಿಗುತ್ತಿಲ್ಲ. ಹೀಗಾಗಿ ‘ಡೋರ್ ಲಾಕ್’ ಎಂದು ನಮೂದಿಸುತ್ತಿದ್ದೇವೆ. ಕೆಲವರು ವಿಜಯದಶಮಿ ಹಬ್ಬದ ಕಾರಣ, ಸ್ವಲ್ಪದಿನ ಬಿಟ್ಟು ಬರಲು ಹೇಳಿದ್ದಾರೆ. ಇನ್ನು ಕೆಲವರು ಹಬ್ಬದ ರಜೆ ಕಳೆಯಲು ಮನೆಗೆ ಬೀಗ ಹಾಕಿ ಹೋಗಿದ್ದಾರೆ. ಕೆಲವು ಕಡೆ ಸುಶಿಕ್ಷಿತರೇ ಸಮೀಕ್ಷೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಹೀಗಾಗಿ ನಿಗದಿತ ಗುರಿ ಸಾಧನೆ ಸಾಧ್ಯವಾಗಿಲ್ಲ’ ಎಂದು ಮೇಲ್ವಿಚಾರಕರು ಹೇಳಿದರು.
ನಗರ ಪ್ರದೇಶದಲ್ಲಿ 2 ಲಕ್ಷ ಮನೆಗಳಿವೆ. ಆರಂಭದಲ್ಲಿ650 ಶಿಕ್ಷಕರಿಗೆ ತರಬೇತಿ ನೀಡಿ, ಒಬ್ಬರಿಗೆ 150 ರಿಂದ 200 ಮನೆಗಳನ್ನು ಹಂಚಿಕೆ ಮಾಡಲಾಗಿತ್ತು. ದತ್ತಾಂಶ ಸಂಗ್ರಹ ನಿಧಾನವಾಗುತ್ತಿದೆ ಎಂದು, ತರಬೇತಿಯಿಲ್ಲದ ಮಹಾನಗರ ಪಾಲಿಕೆ, ಹುಡಾ, ತಹಶೀಲ್ದಾರ್ ಕಚೇರಿಯ ಒಟ್ಟು 2,500 ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಆದರೂ ನಿರೀಕ್ಷಿತ ಗುರಿ ಸಾಧನೆ ಸಾಧ್ಯವಾಗದ ಕಾರಣ ಇದೀಗ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರು ಹಾಗೂ ಪ್ರೌಢಶಾಲೆ ಶಿಕ್ಷಕರನ್ನು ಸಹ ಹೆಚ್ಚುವರಿಯಾಗಿ ನಿಯೋಜಿಸಿಕೊಳ್ಳಲು ಚಿಂತನೆ ನಡೆದಿದೆ.
‘ಸೋಮವಾರದವರೆಗೆ ಶೇ 65ರಷ್ಟು ಮಾತ್ರ ಸಮೀಕ್ಷೆ ಮುಗಿದಿದೆ. ಪ್ರತಿ ದಿನ ಸರಾಸರಿ 17 ಸಾವಿರದಿಂದ 20 ಸಾವಿರ ಮನೆಗಳಿಂದ ದತ್ತಾಂಶ ಸಂಗ್ರಹಿಸಲಾಗುತ್ತಿದೆ. ತ್ವರಿತವಾಗಿ ಪೂರ್ಣಗೊಳಿಸಲು ಸಮೀಕ್ಷಕರಿಗೆ ಸೂಚಿಸಲಾಗಿದೆ. ಕೆಲವರು ಆನ್‌ಲೈನ್‌ನಲ್ಲಿಯೇ ಮಾಹಿತಿ ಭರ್ತಿ ಮಾಡುತ್ತಿದ್ದಾರೆ’ ಎಂದು ಸಮೀಕ್ಷೆಯ ಉಸ್ತುವಾರಿ, ಹು–ಧಾ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ ತಿಳಿಸಿದರು.
ಶೇ 90ರಷ್ಟು ಮನೆಗಳಿಗೆ ಭೇಟಿ ನೀಡಿದ್ದರೂ ಶೇ 65ರಷ್ಟು ಮಾತ್ರ ಸಮೀಕ್ಷೆ ನಡೆದಿದೆ. ನಿರಾಕರಣೆ ಡೋರ್ ಲಾಕ್ ಬಾಡಿಗೆ ಮನೆ ವಾಸದ ಕಾರಣ ಫಲಿತಾಂಶ ಕಡಿಮೆಯಾಗಿದೆರುದ್ರೇಶ ಘಾಳಿ ಆಯುಕ್ತ ಹು–ಧಾ ಮಹಾನಗರ ಪಾಲಿಕೆ
ಸಮೀಕ್ಷೆ ವಿಸ್ತರಿಸಿದರೆ ಮಕ್ಕಳಿಗೆ ತೊಂದರೆ
ದಸರಾ ರಜೆ ಅ. 7ರಂದು ಮುಕ್ತಾಯವಾಗಲಿದ್ದು ಅ.8 ರಂದು ಶಾಲೆಗಳು ಪುನರಾರಂಭವಾಗಲಿವೆ. ಸಮೀಕ್ಷೆ ದಿನಾಂಕ ವಿಸ್ತರಿಸಿದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗುತ್ತದೆ ಎನ್ನುವ ಆತಂಕ ಪಾಲಕರಲ್ಲಿ ಶುರುವಾಗಿದೆ. ಹುಬ್ಬಳ್ಳಿ ನಗರ ಪ್ರದೇಶದಲ್ಲಿರುವ ಸುಮಾರು 650ಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರನ್ನು ಸಮೀಕ್ಷೆಗೆ ನಿಯೋಜಿಸಲಾಗಿದೆ. ಅನಾರೋಗ್ಯದ ಕಾರಣದಿಂದ ಕೆಲವು ಶಿಕ್ಷಕರನ್ನಷ್ಟೇ ಈ ಕಾರ್ಯದಿಂದ ಕೈ ಬಿಡಲಾಗಿದೆ. ಹೆಚ್ಚುವರಿಯಾಗಿ ಮುಖ್ಯಶಿಕ್ಷಕರನ್ನು ಸಹ ಸಮೀಕ್ಷೆಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಶಿಕ್ಷಕರಿಲ್ಲದೆ ಮಕ್ಕಳು ಶಾಲೆಗೆ ಹೋದರೆ ಏನು ಪ್ರಯೋಜನ? ಎಂದು ಪಾಲಕರೊಬ್ಬರು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.