ಹುಬ್ಬಳ್ಳಿ: ‘ಭಾರತೀಯ ರೈಲ್ವೆ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಮೊದಲ, ದ್ವಿತೀಯ ಹಾಗೂ ತೃತೀಯ ದರ್ಜೆಯ ಎಸಿ ಬೋಗಿಗಳಲ್ಲಿ ಪ್ರಯಾಣಿಕರಿಗೆ ನೀಡುವ ಬ್ಲಾಂಕೆಟ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತಿದೆ’ ಎಂದು ನೈರುತ್ಯ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಧಾ ರಾಣಿ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬ್ಲಾಂಕೆಟ್‌ಗಳ ಸ್ವಚ್ಛತೆ ವಿಷಯದಲ್ಲಿ ಸಾಕಷ್ಟು ಸುಧಾರಣೆ ಕೈಗೊಳ್ಳಲಾಗಿದೆ. 2010ರಲ್ಲಿ ಮೂರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸಲಾಗುತ್ತಿತ್ತು. 2016ರಲ್ಲಿ ಎರಡು ತಿಂಗಳಿಗೊಮ್ಮೆ ತೊಳೆಯಲಾಗುತ್ತಿತು. ಈಗ ಪ್ರತಿ 15 ದಿನಗಳಿಗೊಮ್ಮೆ ತೊಳೆಯಬೇಕು ಎಂಬ ನಿಯಮ ಜಾರಿಗೆ ತರಲಾಗಿದೆ’ ಎಂದರು.
‘ಬ್ಲಾಂಕೆಟ್, ಬೆಡ್‌ಶೀಟ್, ತಲೆ ದಿಂಬು, ತಲೆ ದಿಂಬಿನ ಕವರ್, ಕೈ ವಸ್ತ್ರಗಳನ್ನು ಪ್ರಯಾಣಿಕರಿಗೆ ಕಡ್ಡಾಯವಾಗಿ ಕವರ್‌ನಲ್ಲಿ ಸೀಲ್ ಮಾಡಿ ನೀಡಲಾಗುತ್ತದೆ. ಬ್ಲಾಂಕೆಟ್ ಹೊರತುಪಡಿಸಿ ಇನ್ನುಳಿದ ಸಲಕರಣೆಗಳನ್ನು ನಿತ್ಯ ತೊಳೆಯಲಾಗುತ್ತದೆ’ ಎಂದು ಹೇಳಿದರು.
‘ಈ ಹಿಂದೆ ಪ್ರತಿ ಬ್ಲಾಂಕೆಟ್ ಅನ್ನು ನಾಲ್ಕು ವರ್ಷಕ್ಕೊಮ್ಮೆ ಬದಲಾಯಿಸಲಾಗುತಿತ್ತು. ಈಗ, ಪ್ರತಿ ಎರಡು ವರ್ಷಕ್ಕೊಮ್ಮೆ ಬದಲಾಯಿಸಲಾಗುತ್ತಿದೆ. ಒಬ್ಬ ಪ್ರಯಾಣಿಕನಿಗೆ ಹಾಸಲು ಮತ್ತು ಹೊದ್ದುಕೊಳ್ಳಲು ಸೇರಿ ಎರಡು ಬ್ಲಾಂಕೆಟ್ ನೀಡಲಾಗುತ್ತದೆ’ ಎಂದು ತಿಳಿಸಿದರು.
ನೈರುತ್ಯ ರೈಲ್ವೆಯ ಹುಬ್ಬಳ್ಳಿ ಹಾಗೂ ಮೈಸೂರು ವಿಭಾಗದಲ್ಲಿ ತಲಾ 3.5 ಟನ್ ಸಾಮರ್ಥ್ಯದ ಯಾಂತ್ರೀಕೃತ ಲಾಂಡ್ರಿಗಳಿದ್ದು, ಬೆಂಗಳೂರು ವಿಭಾಗದಲ್ಲಿ 10 ಟನ್ ಸಾಮರ್ಥ್ಯದ ಲಾಂಡ್ರಿ ಇದೆ. ಹುಬ್ಬಳ್ಳಿ ವಿಭಾಗದಲ್ಲಿ ಪ್ರತಿ ದಿನ ಏಳು ಸಾವಿರ ಬೆಡ್‌ಶೀಟ್, 3,500 ತಲೆದಿಂಬಿನ ಕವರ್‌ಗಳು, 3,500 ಕೈ ವಸ್ತ್ರ ಹಾಗೂ 100 ಉಣ್ಣೆಯ ಬ್ಲಾಂಕೆಟ್‌ಗಳನ್ನು ಶುಚಿಗೊಳಿಸಲಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.