ಧಾರವಾಡ: ‘ಸರ್ಕಾರಿ ನೌಕರರು ಇಂದು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ನೌಕರರ ಮೇಲಿನ ಒತ್ತಡ ಕಡಿಮೆ ಮಾಡಬೇಕು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದ ಗೌರಮ್ಮ ಹಿರೇಮಠ (ರಪಾಟಿ) ಕಲ್ಯಾಣ ಮಂಟಪದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ವತಿಯಿಂದ ಭಾನುವಾರ ಆಯೋಜಿಸಿದ್ದ 2023-24ನೇ ಸಾಲಿನ ಪ್ರತಿಭಾ ಪುರಸ್ಕಾರ, ಸದಸ್ಯರ ಸಾಮಾನ್ಯ ಸಭೆ ಮತ್ತು 7ನೇ ವೇತನ ಆಯೋಗ ಜಾರಿಗೆ ಸಹಕರಿಸಿದ ಶಾಸಕರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಸರ್ಕಾರ ಮತ್ತು ಸಾರ್ವಜನಿಕರ ಮಧ್ಯದ ಕೊಂಡಿಯಾಗಿ ಸರ್ಕಾರಿ ನೌಕರರು ಕೆಲಸ ಮಾಡುತ್ತಾರೆ. ಸರ್ಕಾರದ ವರ್ಚಸ್ಸು ನೌಕರನ ಕಾರ್ಯಕ್ಷಮತೆ ಮೇಲೆ ನಿಂತಿರುತ್ತದೆ. ಪ್ರತಿಯೊಬ್ಬ ನೌಕರ ಸರ್ಕಾರದ ರಾಯಭಾರಿಯಂತೆ ಕರ್ತವ್ಯ ನಿರ್ವಹಿಸಿ, ಸರ್ಕಾರದ ಬಗ್ಗೆ ಸದಭಿಪ್ರಾಯ ಮೂಡಿಸಬೇಕು’ ಎಂದು ಸಲಹೆ ನೀಡಿದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ‘ಸರ್ಕಾರಿ ನೌಕರರು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು. ಸರ್ಕಾರಿ ಯೋಜನೆಗಳನ್ನು ಪ್ರತಿಯೊಬ್ಬರಿಗೂ ತಲುಪಿಸಬೇಕು. ಕರ್ತವ್ಯ ಮತ್ತು ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು’ ಎಂದು ಹೇಳಿದರು.
ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ,‘ ರಾಜ್ಯ ಸರ್ಕಾರ 7ನೇ ವೇತನ ಆಯೋಗದ ಬೇಡಿಕೆಯನ್ನು ಈಡೇರಿಸಿದೆ. ಎನ್.ಪಿ.ಎಸ್ ಯೋಜನೆ ರದ್ದುಗೊಳಿಸಿ ಒಪಿಎಸ್ ಜಾರಿ ಮಾಡುವ ಕೆಲಸ ಸರ್ಕಾರದ ಹಂತದಲ್ಲಿ ನಡೆದಿದೆ. ನೌಕರರಿಗೆ ನಗದು ರಹಿತ ಆರೋಗ್ಯ ಚಿಕಿತ್ಸೆ ನೀಡುವ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನವೂ ಪ್ರಗತಿಯಲ್ಲಿದೆ’ ಎಂದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ, ವೈಶುದೀಪ ಫೌಂಡೇಷನ್ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ, ದೇವಿದಾಸ ಶಾಂತಿಕರ, ಗಿರೀಶ ಚೌಡಕಿ, ರಾಜೇಶ ಕೋನರಡ್ಡಿ ವಿ.ಎಫ್.ಚುಳುಕಿ, ಪ್ರಲ್ಹಾದ ಗೆಜ್ಜಿ, ಎ.ಬಿ.ಕೊಪ್ಪದ ಆರ್.ಎಂ. ಹೊಲ್ತಿಕೋಟಿ, ಮುತ್ತಪ್ಪ ಅಣ್ಣಿಗೇರಿ, ಸುರೇಶ ಹಿರೇಮಠ, ಪಿ.ಬಿ.ಕುರಬೆಟ್ಟ, ವಿನಯ ಮೂಷನ್ನವರ, ಗಜಾನನ ಕಟಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.