ADVERTISEMENT

ಹುಡಾ| ಅಕ್ರಮ ಬಡಾವಣೆ ಪತ್ತೆಗೆ ಟಾಸ್ಕ್‌ಫೋರ್ಸ್: 15 ದಿನದಲ್ಲಿ ವರದಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 6:24 IST
Last Updated 23 ನವೆಂಬರ್ 2025, 6:24 IST
ಶಾಕಿರ್ ಸನದಿ, ಹುಡಾ ಅಧ್ಯಕ್ಷ
ಶಾಕಿರ್ ಸನದಿ, ಹುಡಾ ಅಧ್ಯಕ್ಷ   

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ)ದ ವ್ಯಾಪ್ತಿಯಲ್ಲಿನ ಅಕ್ರಮ ಬಡಾವಣೆ, ನಿವೇಶನಗಳನ್ನು ಪತ್ತೆ ಹಚ್ಚಲು ಹಾಗೂ ರಿಯಲ್‌ ಎಸ್ಟೇಟ್‌ ಕಂಪನಿಗಳು ಅಭಿವೃದ್ಧಿ ಪಡಿಸಿರುವ ಹಾಗೂ ಕಾನೂನು ಬಾಹಿರವಾಗಿ ಒತ್ತುವರಿ ಮಾಡಿಕೊಂಡಿರುವ ನಿವೇಶನವನ್ನು ಪರಿಶೀಲನೆ ನಡೆಸಲು ಪ್ರಾಧಿಕಾರವು ಟಾಸ್ಕ್‌ಫೋರ್ಸ್‌ ಸಮಿತಿ ರಚಿಸಲು ಮುಂದಾಗಿದೆ.

ಹುಡಾ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಲಿದೆ. ಜಿಲ್ಲಾಧಿಕಾರಿ, ಪೊಲೀಸ್‌ ಕಮಿಷನರ್‌, ನಗರ ಯೋಜನಾ ನಿರ್ದೇಶಕ, ಹು–ಧಾ ಮಹಾನಗರ ಪಾಲಿಕೆ ಆಯುಕ್ತ, ಪಾಲಿಕೆಯ ಕಂದಾಯ ಅಧಿಕಾರಿ, ತಹಶೀಲ್ದಾರ್‌, ಕಾನೂನು ಸಲಹೆಗಾರರು ಸದಸ್ಯರು ಹಾಗೂ ವಿಶೇಷ ಆಹ್ವಾನಿತ ಸದಸ್ಯರಾಗಿ ಸಮಿತಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಈ ಕುರಿತು ಈಗಾಗಲೇ ಸಮಗ್ರ ಯೋಜನೆಯನ್ನು ಸಿದ್ದಪಡಿಸಿರುವ ಹುಡಾ, ಸಮಿತಿ ರಚನೆಯ ಪ್ರಕ್ರಿಯೆ ಅಂತಿಮಗೊಳಿಸಿ ಕಾರ್ಯಾಚರಣೆಗೆ ಇಳಿಸಲಿದೆ. ತನ್ನ ವ್ಯಾಪ್ತಿಯಲ್ಲಿನ ಎಲ್ಲ ಬಡಾವಣೆಗಳ ಸಮಗ್ರ ಪಟ್ಟಿ ತಯಾರಿಸಿ, ರಿಯಲ್‌ ಎಸ್ಟೇಟ್‌ ಕಂಪನಿಗಳು ಎಷ್ಟು ಬಡಾವಣೆಗಳನ್ನು ಅಭಿವೃದ್ಧಿ ಪಡಿಸಿವೆ, ಎಷ್ಟು ಅಕ್ರಮ ಬಡಾವಣೆಗಳಿವೆ, ಎಷ್ಟು ಎಕರೆ ಪ್ರದೇಶವನ್ನು ಕಬಳಿಸಿವೆ ಎನ್ನುವುದನ್ನು ಡ್ರೋನ್‌ ಸಮೀಕ್ಷೆ, ಜಿಐಎಸ್‌ ಮ್ಯಾಪಿಂಗ್‌ ಮೂಲಕ ಮಾಹಿತಿ ಸಂಗ್ರಹಿಸಿ ಜಿಯೋ ಟ್ಯಾಗಿಂಗ್‌ ಮಾಡಲಿದೆ. ನಂತರ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಪರಿಶೀಲನೆ ನಡೆಸಿ, ದಾಖಲೆಗಳನ್ನು ಸಂಯೋಜಿಸಲಿದೆ.

ADVERTISEMENT

‘ಪ್ರಾಧಿಕಾರದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅನಧಿಕೃತ ಬಡಾವಣೆ, ರಿಯಲ್‌ ಎಸ್ಟೇಟ್‌ ಅಕ್ರಮ ಚಟುವಟಿಕೆಗಳು ಮತ್ತು ಭೂ ದಂಧೆಯನ್ನು ನಿಯಂತ್ರಿಸಲು ಟಾಸ್ಕ್‌ಫೊರ್ಸ್‌ ಸಮಿತಿ ರಚಿಸಿ, ವಾಸ್ತವ ಸ್ಥಿತಿಗಳ ಬಗ್ಗೆ ಅಧ್ಯಯನ ನಡೆಸಲಾಗುವುದು. ಜಿಐಎಸ್‌ ಮ್ಯಾಪಿಂಗ್‌ ಮತ್ತು ಜಿಯೋ ಟ್ಯಾಗಿಂಗ್‌ ಮಾಡುವುದರಿಂದ ಎಲ್ಲೇ ಅಕ್ರಮ ನಡೆದರೂ ಸುಲಭವಾಗಿ ಪತ್ತೆಯಾಗುತ್ತದೆ. ಸಮೀಕ್ಷೆ, ಅಂಕಿ–ಸಂಖ್ಯೆ ಪರಿಶೀಲನೆ, ಕಾನೂನುಬದ್ಧ ಬಡಾವಣೆ, ನಿವೇಶನ ಕುರಿತು ಲೆಕ್ಕಪರಿಶೋಧನೆಯನ್ನು ಏಜೆನ್ಸಿ ಮೂಲಕ ನಡೆಸಲಾಗುವುದು’ ಎಂದು ‘ಪ್ರಜಾವಾಣಿ’ಗೆ ಹುಡಾ ಅಧ್ಯಕ್ಷ ಶಾಕಿರ್‌ ಸನದಿ ತಿಳಿಸಿದರು.

‘ಸಮೀಕ್ಷೆಯಲ್ಲಿ ಅಕ್ರಮ ಕಂಡು ಬಂದರೆ ಸಮಿತಿಯೇ ರಿಯಲ್‌ ಎಸ್ಟೇಟ್‌ ಉದ್ಯಮಿಗಳ ವಿರುದ್ಧ ಪ್ರಕರಣ ದಾಖಲಿಸುವ ಅಧಿಕಾರ ಹೊಂದಲಿದೆ. ನಾಗರಿಕರಿಗೆ ಯೋಗ್ಯವಲ್ಲದ ನಿವೇಶನಗಳಿದ್ದರೆ, ತುರ್ತಾಗಿ ಮೂಲಸೌಲಭ್ಯ ಒದಗಿಸಲು ಸೂಚಿಸಲಿದೆ. ಅಲ್ಲದೆ, ಕೆಲವು ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ನಿಯಮಾವಳಿ ಪ್ರಕಾರ ರಸ್ತೆ, ಉದ್ಯಾನ, ವಿದ್ಯುತ್‌ ದೀಪ, ಚರಂಡಿ, ಗಟಾರ ವ್ಯವಸ್ಥೆಗಳಿಲ್ಲ. ಅವುಗಳನ್ನು ಸರಿಪಡಿಸಲು ಈ ಕಾರ್ಯಪಡೆಯ ವರದಿ ಅನುಕೂಲವಾಗಲಿದೆ’ ಎಂದರು.

ಟಾಸ್ಕ್‌ಫೋರ್ಸ್‌ ಸಮಿತಿ ನೀಡುವ ವರದಿಯನ್ನು ದಾಖಲೆಯಾಗಿ ಇಡಲಾಗುವುದು. ಅಕ್ರಮ ತಡೆಗೆ ತುರ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು
ಶಾಕಿರ್‌ ಸನದಿ ಅಧ್ಯಕ್ಷ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ

‘15 ದಿನದಲ್ಲಿ ವರದಿ ನೀಡಲಿದೆ’

ಹುಡಾ ವ್ಯಾಪ್ತಿಯಲ್ಲಿ ಅಂದಾಜು ಐದು ಕಿ.ಮೀ. ಉದ್ದಗಲದ ವ್ಯಾಪ್ತಿಯಲ್ಲಿ ಅಕ್ರಮ ಭೂವ್ಯವಹಾರ ಅಕ್ರಮ ಬಡಾವಣೆಗಳು ನಿರ್ಮಾಣವಾಗಿದೆ. ಅವುಗಳ ಪರಿಶೀಲನೆಗೆ ಟಾಸ್ಕ್‌ಫೋರ್ಸ್‌ ರಚಿಸಲಾಗುತ್ತಿದ್ದು ಸಮಿತಿ ಕಾರ್ಯಾಚರಣೆ ನಡೆಸಿದ 15 ದಿನಗಳಲ್ಲಿ ವರದಿ ನೀಡಲಿದೆ. ಅದು ಕೈಗೊಂಡ ನಿರ್ಣಯಗಳನ್ನು ವಿವಿಧ ಇಲಾಖೆಗಳ ಜೊತೆ ಚರ್ಚಿಸಿ ದಾಖಲೆಗಳನ್ನು ಸಂಯೋಜಿಸಿ ಜಾರಿಗೆ ತರಲಾಗುವುದು’ ಎಂದು ಹುಡಾ ಅಧ್ಯಕ್ಷ ಶಾಕಿರ್‌ ಸನದಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.