ADVERTISEMENT

ಶಿಕ್ಷಕ ಸಮಾಜ ಪರಿವರ್ತನೆಯ ಶಕ್ತಿ: ಸಂತೋಷ ಲಾಡ್‌

ಶಿಕ್ಷಕರ ದಿನಾಚರಣೆ: ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 7:25 IST
Last Updated 7 ಸೆಪ್ಟೆಂಬರ್ 2025, 7:25 IST
ಧಾರವಾಡದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಗಣ್ಯರು .ಎಸ್‌.ರಾಧಾಕೃಷ್ಣನ್‌ ಮತ್ತು ಸಾವಿತ್ರಿ ಬಾಯಿಫುಲೆ ಅವರ ಭಾವಚಿತ್ರಗಳಿಗೆ ನಮನ ಸಲ್ಲಿಸಿದರು
ಧಾರವಾಡದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಗಣ್ಯರು .ಎಸ್‌.ರಾಧಾಕೃಷ್ಣನ್‌ ಮತ್ತು ಸಾವಿತ್ರಿ ಬಾಯಿಫುಲೆ ಅವರ ಭಾವಚಿತ್ರಗಳಿಗೆ ನಮನ ಸಲ್ಲಿಸಿದರು   

ಧಾರವಾಡ: ‘ಶಿಕ್ಷಕರಿಗೆ ಸಮಾಜ ಪರಿವರ್ತನೆ ಶಕ್ತಿ ಇದೆ. ವ್ಯವಸ್ಥೆಯಲ್ಲಿ ಸುಧಾರಣೆ ತರುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು’ ಎಂದು ‌ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್‌.ಲಾಡ್‌ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ವಿದ್ಯಾಗಿರಿಯ ಜೆಎಸ್‌ಎಸ್‌ ವಿದ್ಯಾಲಯದ ಸನ್ನಿಧಿ ಕಲಾ ಭವನದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ವಾಸ್ತವಾಂಶಗಳು, ಹೊಸ ವಿಚಾರಗಳನ್ನು ತಿಳಿಸಬೇಕು. ನೈತಿಕ ಮೌಲ್ಯಗಳನ್ನು ಬೆಳೆಸಬೇಕು ಎಂದರು.

ಸಾವಿತ್ರಿಬಾಯಿ ಫುಲೆ ಅವರು ಮಹಿಳೆಯರ ಶಿಕ್ಷಣಕ್ಕಾಗಿ ಹೋರಾಡಿದರು. ಶಾಲೆಗಳನ್ನು ತೆರೆದರು. ಬುದ್ಧ, ಬಸವಣ್ಣ, ಗಾಂಧೀಜಿ, ಅಂಬೇಡ್ಕರ್‌, ಫುಲೆ ಮೊದಲಾದವರ ಆದರ್ಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು ಎಂದರು.

ADVERTISEMENT

‘ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆಯ ಆರು ಶಾಲೆಗಳು ಶೂನ್ಯ ಸಾಧನೆ ಮಾಡಿವೆ. ಫಲಿತಾಂಶ ವೃದ್ಧಿ ಶಿಕ್ಷಕರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು. ವಿದ್ಯಾರ್ಥಿಗಳನ್ನು ಚೆನ್ನಾಗಿ ತಯಾರಿ ಮಾಡಿ ಫಲಿತಾಂಶದಲ್ಲಿ ಸಾಧನೆ ಮಾಡಬೇಕು’ ಎಂದು ಹೇಳಿದರು.

‘ಭ್ರಷ್ಟಾಚಾರದಲ್ಲಿ ತೊಡಗಿರುವವರಲ್ಲಿ ಆಳುವವರು, ವಿದ್ಯಾವಂತರೇ ಹೆಚ್ಚು. ಹಿಂದಿನ ಕಾಲದಲ್ಲಿ ಸಾಕ್ಷರತೆ ಪ್ರಮಾಣ ಶೇ 25 ಇತ್ತು, ಈಗ ಸಾಕ್ಷರತೆ ಪ್ರಮಾಣ ಶೇ 75 ಇದೆ. ಆದರೆ, ಅವತ್ತಿನ ನಾಯಕರಿಗೂ ಇವತ್ತಿನ ನಾಯಕರಿಗೂ ಅಜಗಜಾಂತ‌ರ ವ್ಯತ್ಯಾಸ ಇದೆ. ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

ಜಿಲ್ಲಾಮಟ್ಟದ ಶಿಕ್ಷಕ ಪ್ರಶಸ್ತಿ ಪಡೆದವರಿಗೆ ಪ್ರಮಾಣ ಪತ್ರ ನೀಡಲಾಯಿತು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಾಲಿಕೆ ಮೇಯರ್‌ ಜ್ಯೋತಿ ಪಾಟೀಲ, ಡಿಡಿಪಿಐ ಎಸ್.ಎಸ್.ಕೆಳದಿಮಠ, ಡೆಯಟ್ ಪ್ರಾಚಾರ್ಯೆ ಜಯಶ್ರೀ ಕಾರೇಕರ, ತಹಶೀಲ್ದಾರ್‌ ಡಾ. ಡಿ.ಎಚ್.ಹೂಗಾರ, ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಎಫ್.ಚುಳಕಿ, ಪ್ರದಾನ ಕಾರ್ಯದರ್ಶಿ ರಾಜಶೇಖರ ಹೊನ್ನಪ್ಪನವರ, ಸರ್ಕಾರಿ ನೌಕರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡರ, ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಭಜಂತ್ರಿ, ಬಣವಿ, ಪಾಂಡುರಂಗ ಅಂಕಲಿ, ಹುದ್ದಾರ ಇದ್ದರು.

ಕನ್ನಡ ಶಾಲೆಗಳನ್ನು ಉಳಿಸುವ ಕೆಲಸ ಮಾಡಬೇಕು. ಶಿಕ್ಷಕರಿಗೆ ಬದ್ಧತೆ ಇರಬೇಕು. ಚೆನ್ನಾಗಿ ಬೋಧನೆ ಮಾಡಬೇಕು. ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಬೇಕು.
– ಎನ್‌.ಎಚ್‌.ಕೋನರೆಡ್ಡಿ, ಶಾಸಕ
ಮಕ್ಕಳಿಗೆ ಜನನಿ ಮೊದಲ ಗುರು. ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಪ್ರೇರಣೆ ನೀಡಬೇಕು. ವಿದ್ಯಾರ್ಥಿಗಳನ್ನು ಉತ್ತಮ ವ್ಯಕ್ತಿಗಳಾಗಿ ರೂಪಿಸಬೇಕು.
– ಭುವನೇಶ ಪಾಟೀಲ, ಸಿಇಒ ಜಿಲ್ಲಾ ಪಂಚಾಯಿತಿ

‘ಕಲಿಕಾಸಕ್ತಿ ಬೆಳೆಸಲು ಸಲಹೆ’

ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಬೆಳೆಸಬೆಕು. ಪಾಠದ ಕಡೆಗೆ ವಿದ್ಯಾರ್ಥಿಗಳನ್ನು ಆಕರ್ಷಣೆ ಮಾಡುವ ಬೋಧನಾ ಕೌಶಲ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು. ಜಾಣ ವಿದ್ಯಾರ್ಥಿಗಳಿಗೆ ಕಲಿಸುವುದು ಸಾಧನೆಯಲ್ಲ. ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಕಲಿಸಿ ಅವರನ್ನು ಜಾಣರಾಗಿಸುವುದು ಸಾಧನೆ. ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ರೀತಿ ಕಲಿಸುವುದಕ್ಕಿಂತ ಪ್ರತಿ ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯ ಅರಿತು ಕಲಿಸ‌ಬೇಕು. ಶಿಕ್ಷಕರಿಗೆ ಸಮಾನರು ಇಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.