ADVERTISEMENT

ಪ್ರಾಧ್ಯಾಪಕರ ಬಾಕಿ ವೇತನ ಪಾವತಿಸಿ

ಮಹಾವಿದ್ಯಾಲಯ ಶಿಕ್ಷಕ ಸಂಘದ ಅಧ್ಯಕ್ಷ ಡಾ. ರಘು ಅಕಮಂಚಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 10:52 IST
Last Updated 29 ಡಿಸೆಂಬರ್ 2019, 10:52 IST

ಹುಬ್ಬಳ್ಳಿ: ‘ರಾಜ್ಯದ ಪದವಿ ಕಾಲೇಜುಗಳ ಪ್ರಾಧ್ಯಾಪಕರು ಮತ್ತು ಸಿಬ್ಬಂದಿಗೆ, ಮೂರು ತಿಂಗಳಿಂದ ಬಾಕಿ ಉಳಿದಿರುವ ವೇತನ ಪಾವತಿಗೆ, ಉನ್ನತ ಶಿಕ್ಷಣ ಸಚಿವರಾದ ಡಾ. ಅಶ್ವತ್ಥ ನಾರಾಯಣ ಅವರು ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಅಧ್ಯಕ್ಷ ಡಾ. ರಘು ಅಕಮಂಚಿ ಒತ್ತಾಯಿಸಿದರು.

‘ಹಿಂದೆ ಖಜಾನೆ–1(ಕೆ1)ರಿಂದ ಪ್ರಾಧ್ಯಾಪಕರಿಗೆ ನಿಗದಿತ ಸಮಯದಲ್ಲಿ ವೇತನವಾಗುತ್ತಿತ್ತು. ಆದರೆ, ಖಜಾನೆ– 2ರ (ಕೆ2) ಮೂಲಕ ವೇತನ ನೀಡಲು ಆರಂಭವಾಗಿದ್ದರಿಂದ ವಿಳಂಬವಾಗುತ್ತಲೇ ಇದೆ. ಬೊಕ್ಕಸದಲ್ಲಿ ಹಣವಿದ್ದರೂ, ಈ ರೀತಿ ಸಮಸ್ಯೆ ಉಂಟು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅದಾಲತ್ ಮಾಡಿ:

ADVERTISEMENT

‘ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಪದೋನ್ನತಿ, ಭತ್ಯೆ, ಕಾರ್ಯಭಾರ, ಡೆಪ್ಯೂಟೇಷನ್, ಪಿಂಚಣಿ, ರಜೆ ಭತ್ಯೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಪಾರದರ್ಶಕತೆ ತರಲು ಶಿಕ್ಷಣ–ಶಿಕ್ಷಕ–ವಿದ್ಯಾರ್ಥಿ ಅದಾಲತ್‌ಗಳನ್ನು ಮಾಡಬೇಕು. ಕಾಲೇಜು ಹಾಗೂ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಅದಾಲತ್‌ಗಳನ್ನು ನಡೆಸಿ, ಸ್ಥಳದಲ್ಲೇ ಸಮಸ್ಯೆ ಬಗೆಹರಿಸಬೇಕು’ ಎಂದು ಹೇಳಿದರು.

‘ರಾಜ್ಯದ ಉನ್ನತ ಶಿಕ್ಷಣ ಮಾಹಿತಿ ಎಲ್ಲರಿಗೂ ಸುಲಭವಾಗಿ ಸಿಗುವಂತಾಗಲು, ‘ಒಂದು ಉನ್ನತ ಶಿಕ್ಷಣ–ಒಂದು ಮಾಹಿತಿ’ ತಂತ್ರಾಂಶವನ್ನು ಅಭಿವೃದ್ಧಿಪಡಿಸಬೇಕು. ಆ ಮೂಲಕ, ವಿದ್ಯಾರ್ಥಿ ಮತ್ತು ಪ್ರಾಧ್ಯಾಪಕರಿಗೆ ಯುನಿಕ್ ಐ.ಡಿ ನೀಡಿ, ಎಲ್ಲಾ ಮಾಹಿತಿಯೂ ಒಂದು ಕ್ಲಿಕ್‌ನಲ್ಲಿ ಸಿಗುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.

ಅನುದಾನಕ್ಕೆ ಒಳಪಡಿಸಿ:

‘1995ಕ್ಕೂ ಮುಂಚೆ ಆರಂಭಗೊಂಡ ಕಾಲೇಜುಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅನುದಾನ ಬಿಡುಗಡೆ ಮಾಡಿದ್ದರೂ, ಇನ್ನೂ 90 ಕಾಲೇಜುಗಳಿಗೆ ಬಿಡುಗಡೆಯಾಗಿಲ್ಲ. ಇದರ ಜತೆಗೆ, 2005ರೊಳಗೆ ಆರಂಭವಾದ ಎಲ್ಲಾ ಪದವಿ ಕಾಲೇಜುಗಳನ್ನು ಸಹ ಅನುದಾನಕ್ಕೆ ಒಳಪಡಿಸಬೇಕು. ಪದವಿ ಜತೆಗೆ, ಬಿ.ಎಸ್‌.ಡಬ್ಲ್ಯೂ ಮತ್ತು ಬಿ.ಸಿ.ಎ ಕಾಲೇಜುಗಳನ್ನು ಸಹ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

‘ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 12 ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರಿದ್ದಾರೆ. ಈ ಪೈಕಿ, 10 ವರ್ಷಕ್ಕೂ ಹೆಚ್ಚು ಸೇವೆ ಸಲ್ಲಿಸಿರುವ ಹಾಗೂ ನೇಮಕಾತಿ ಮಾನದಂಡಗಳಿಗೆ ಅರ್ಹರಾಗಿರುವ ಶೇ 50ರಷ್ಟು ಮಂದಿಯನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು. ಪ್ರಾಂಶುಪಾಲರಿಲ್ಲದ 400 ಕಾಲೇಜುಗಳಿಗೆ ಪ್ರಾಂಶುಪಾಲರನ್ನು ನೇಮಿಸಬೇಕು. ಜತೆಗೆ, ಖಾಸಗಿ ಕಾಲೇಜುಗಳ ಪ್ರಾಧ್ಯಾಪಕರಿಗೆ ಕನಿಷ್ಠ ವೇತನ ಪಾವತಿ ಮಾಡುವಂತೆ ನಿಯಮ ರೂಪಿಸಬೇಕು’ ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಅಧ್ಯಕ್ಷ ಪ್ರೊ. ಸಂದೀಪ ಬೂದಿಹಾಳ ಮತ್ತು ಬಿ.ಇಡಿ ಕಾಲೇಜು ಸಂಘದ ಸಹ ಸಂಚಾಲಕ ಡಾ। ರಾಜಕುಮಾರ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.