ADVERTISEMENT

ಮತದಾನ ಜಾಗೃತಿಗೆ ಶಿಕ್ಷಕರ ಬೈಕ್ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 16:05 IST
Last Updated 9 ಏಪ್ರಿಲ್ 2019, 16:05 IST
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆದ ಮತದಾನ ಜಾಗೃತಿ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಶಿಕ್ಷಕರು– ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆದ ಮತದಾನ ಜಾಗೃತಿ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಶಿಕ್ಷಕರು– ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ನಗರ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಜನರು ಮತ ಚಲಾಯಿಸುವ ಮೂಲಕ ಶೇ100ರಷ್ಟು ಮತದಾನಕ್ಕೆ ಸಹಕರಿಸಬೇಕು ಎಂದು ಮತದಾರರ ಜಾಗೃತಿ ಹಾಗೂ ಪಾಲ್ಗೊಳ್ಳುವಿಕೆ ಸಮಿತಿ (ಸ್ವೀಪ್) ಅಧ್ಯಕ್ಷ ಡಾ. ಬಿ.ಸಿ. ಸತೀಶ ಹೇಳಿದರು.

ಮತದಾರರಲ್ಲಿ ಜಾಗೃತಿ ಮೂಡಿಸಲು ಸ್ವೀಪ್ ಸಮಿತಿ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಶಿಕ್ಷಕವೃಂದ ಟೊಂಕ ಕಟ್ಟಿ ನಿಂತಿದೆ ಎಂದು ಅವರು ಹೇಳಿದರು.

ಸತೀಶ್ ಸ್ವತಃ ಹೆಲ್ಮೆಟ್ ಧರಿಸಿ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡರು. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಜಾನನ ಮನ್ನಿಕೇರಿ ರ‍್ಯಾಲಿಗೆ ಹಸಿರು ನಿಶಾನೆ ತೋರಿಸಿದರು. 500ಕ್ಕೂ ಹೆಚ್ಚು ಬೈಕ್‌ಗಳಲ್ಲಿ ಆಗಮಿಸಿದ ಶಿಕ್ಷಕರು ಮತದಾನ ಜಾಗೃತಿಯ ಭಿತ್ತಿಪತ್ರಗಳನ್ನು ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.

ADVERTISEMENT

ನೆಹರು ಮೈದಾನದಿಂದ ಆರಂಭವಾದ ರ‍್ಯಾಲಿ ಚನ್ನಮ್ಮ ವೃತ್ತ, ಹಳೆಯ ಬಸ್ ನಿಲ್ದಾಣ, ಹೊಸರು ವೃತ್ತ, ರೋಟರಿ ಸ್ಕೂಲ್, ಕಿಮ್ಸ್ ಹಿಂಭಾಗ, ರೈಲ್ವೇ ಬ್ರಿಡ್ಜ್, ಅಶೋಕನಗರ, ಮಯೂರ ಗಾರ್ಡನ್, ಸ್ಯಾಂಡಲ್ ಆಶ್ರಮ, ರಮೇಶ ಭವನ, ಮಧುರ ಕಾಲೊನಿ ರೋಡ್, ಕಾಪೋರೇಶನ್ ವಲಯ ಕಚೇರಿ 9 ಮೂಲಕ ಸಾಗಿತು. ಸಿ.ಬಿ.ಟಿ. ದುರ್ಗದ ಬೈಲ್, ಹಳೇ ಬಿ.ಇ.ಒ ಕಚೇರಿ, ತುಳುಜಾ ಭಾವಾನಿ ಸರ್ಕಲ್, ಕೊಪ್ಪಿಕರ್ ರೋಡ್ ಮುಖಾಂತರ ನೆಹರು ಮೈದಾನ ತಲುಪಿತು.

ಡಾ.ರಾಮು ಮೂಲಿಮನೆ ತಂಡ ಮತದಾನ ಜಾಗೃತಿ ಗೀತೆ ಹಾಡಿತು. ಶಿಕ್ಷಕರಿಗೆ ಕಡ್ಡಾಯ ಮತದಾನ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ಹುಬ್ಬಳ್ಳಿ ಶಹರ ಬಿಇಒ ಶೀಶೈಲಕರಿಕಟ್ಟಿ, ಗ್ರಾಮೀಣ ಬಿಒಒ ಹುಡೇದಮನಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶ್ರೀಧರ ಪತ್ತಾರ್, ಸ್ವೀಪ್ ಅಧಿಕಾರಿ ಶೇಕ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.