ADVERTISEMENT

ಹುಬ್ಬಳ್ಳಿ | ತೇಜಸ್ವಿ ಅವರಿಗೇ ಪ್ರಕಾಶಕರು ಸಿಕ್ಕಿರಲಿಲ್ಲ: ರಾಘವೇಂದ್ರ

ಸಾಹಿತ್ಯ ಪ್ರಕಾಶನ: ಪುಸ್ತಕ ಪ್ರಕಾಶಕರಿಗೆ ಗೌರವಾರ್ಪಣೆ, 11 ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 6:54 IST
Last Updated 29 ಸೆಪ್ಟೆಂಬರ್ 2025, 6:54 IST
ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಲೇಖಕರ ಪುಸ್ತಕಗಳನ್ನು ನಾ. ಸೋಮೇಶ್ವರ ಮತ್ತು ಗಣ್ಯರು ಭಾನುವಾರ ಬಿಡುಗಡೆ ಮಾಡಿದರು
ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಲೇಖಕರ ಪುಸ್ತಕಗಳನ್ನು ನಾ. ಸೋಮೇಶ್ವರ ಮತ್ತು ಗಣ್ಯರು ಭಾನುವಾರ ಬಿಡುಗಡೆ ಮಾಡಿದರು ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಆದರ್ಶ ಹಾಗೂ ಕನಸಿನ ಕೂಸು ನಮ್ಮ ‘ಪುಸ್ತಕ ಪ್ರಕಾಶನ’. ಅವರೇ ಹೇಳಿದಂತೆ ಕನ್ನಡ ಪ್ರಕಾಶನ ಕ್ಷೇತ್ರದಲ್ಲಿ ಬೆಳೆದು ಬಂದ ಹಾದಿ ಅಸದೃಶ ಸಾಹಸ’ ಎಂದು ಮೈಸೂರಿನ ಪುಸ್ತಕ ಪ್ರಕಾಶನದ ಮುಖ್ಯಸ್ಥ ರಾಘವೇಂದ್ರ ಹೇಳಿದರು.

ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ ಮತ್ತು ಸಾಹಿತ್ಯ ಪ್ರಕಾಶನ ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೀರ್ತಿಶೇಷ ಮ. ಅನಂತಮೂರ್ತಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

‘1990ಕ್ಕೂ ಪೂರ್ವ ಪೂರ್ಣಚಂದ್ರ ತೇಜಸ್ವಿಯವರಂತಹ ಮಹಾನ್‌ ಲೇಖಕರಿಗೇ ಪ್ರಕಾಶಕರು ಸಿಗುತ್ತಿರಲಿಲ್ಲ. ಅವರ ಜತೆ ಇಬ್ಬರು ಸೇರಿ ಪುಸ್ತಕ ಪ್ರಕಾಶನ ಆರಂಭಿಸಲಾಯಿತು. ಅಚ್ಚು ಮೊಳೆಯಲ್ಲಿ ಪುಸ್ತಕ ಮುದ್ರಿಸಿದೆವು. ಆದರೆ, ಮಾರುಕಟ್ಟೆ ಸಿಗುತ್ತಿರಲಿಲ್ಲ. ಗುಣಮಟ್ಟದ ಪುಸ್ತಕವೂ ಮಾರಾಟ ಆಗದಿರುವುದನ್ನು  ಗಮನಿಸಿ, ಸಾಹಿತ್ಯ ಸಮ್ಮೇಳನ, ಪುಸ್ತಕ ಪ್ರದರ್ಶನ ನಡೆಯುವಲ್ಲಿ ಪುಸ್ತಕ ಮಾರಾಟ ಮಾಡಿ ಓದುಗರಿಗೆ ಹತ್ತಿರವಾಗಲು ಪ್ರಯತ್ನಿಸಿದೆವು’ ಎಂದರು.

ADVERTISEMENT

‘ಸದಭಿರುಚಿಯ, ವೈವಿಧ್ಯಮಯ ಪುಸ್ತಕ ನೀಡಬೇಕೆಂದು ಬಯಸಿದ್ದ ಪೂರ್ಣಚಂದ್ರ ತೇಜಸ್ವಿ ಅವರು, ಆ ನಿಟ್ಟಿನಲ್ಲಿ ಸಾಕಷ್ಟು ಕೃತಿಗಳನ್ನು ರಚಿಸಿದರು. ಮೊದಲ ಬಾರಿಗೆ ತೇಜಸ್ವಿ ಅವರ ಸ್ನೇಹಿತ ಪ್ರದೀಪ ಅವರು ಅಮೆರಿಕದಿಂದ 20 ಎಂಬಿ ಹಾರ್ಡ್‌ಡಿಸ್ಕ್‌ ಇರುವ ಕಂಪ್ಯೂಟರ್‌ ತಂದುಕೊಟ್ಟರು. ನಿಧಾನವಾಗಿ ತಂತ್ರಜ್ಞಾನದ ಮೂಲಕ ಪ್ರಕಾಶನದಲ್ಲಿ ಹೊಸತನ್ನು ಅಳವಡಿಸಿಕೊಂಡು ಓದುಗರ ಜನಮಾನಸದಲ್ಲಿ ನಿಂತೆವು’ ಎಂದು ಹೇಳಿದರು.

‘ಪುಸ್ತಕದ ವಿಷಯ, ರಕ್ಷಾಪುಟ, ಮುದ್ರಣ, ಕಾಗದ ಎಲ್ಲವೂ ಗುಣಮಟ್ಟದಿಂದ ಕೂಡಿರಬೇಕು. ಓದುಗರನ್ನು ಆಕರ್ಷಿಸುವಂತಿರಬೇಕು ಎನ್ನುವುದು ನಮ್ಮ ಧ್ಯೇಯವಾಗಿತ್ತು’ ಎಂದರು.

ಪತ್ರಕರ್ತ ರವೀಂದ್ರ ಜೋಶಿ ಮಾತನಾಡಿ, ‘ಮೊಬೈಲ್‌ ಹಾವಳಿಯಲ್ಲಿ ಓದುವವರ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಾರೆ. ಒಂದರ್ಥದಲ್ಲಿ ನಿಜವಾದರೂ, ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮವಾದದ್ದು ಮಾತ್ರ ಉಳಿಯುತ್ತದೆ ಎನ್ನುವುದನ್ನು ಲೇಖಕರು ಅರ್ಥ ಮಾಡಿಕೊಳ್ಳಬೇಕು. ಓದಿನಿಂದ ಸಮಾಧಾನ ಮತ್ತು ನೆಮ್ಮದಿ ಸಿಗುತ್ತದೆ. ಅಂತಃಕರಣ ಕಲಕುವ ಗುಣ ಸಾಹಿತ್ಯಕ್ಕಿದೆ’ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಎಸ್.ಎಲ್. ಭೈರಪ್ಪ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಥಟ್‌ ಅಂತ ಹೇಳಿ ಖ್ಯಾತಿಯ ನಾ. ಸೋಮೇಶ್ವರ ಅವರು ವಿವಿಧ ಲೇಖಕರ 11 ಕೃತಿಗಳನ್ನು ಬಿಡುಗಡೆ ಮಾಡಿದರು. ಲೇಖಕರಾದ ಮಧುಕರ ಯಕ್ಕುಂಡಿ, ಚಿತ್ರಾ ಸಂತೋಷ್‌, ಸುಚೇತಾ ಗೌತಮ್‌, ಶಿವ ಶಾಸ್ತ್ರಿ, ಶ್ರೀನಿಧಿ ಕರಣಂ ಮತ್ತು ರಾಜನ್‌ ದೇಶಪಾಂಡೆ ಮಾತನಾಡಿದರು. ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಹ್ಮಣ್ಯ, ಬಿ.ಎಸ್‌. ಮಾಳವಾಡ, ಗೋಪಾಲಕೃಷ್ಣ ಹೆಗಡೆ ಇದ್ದರು.

ಬಹುತೇಕ ಲೇಖಕರಿಗೆ ಪ್ರಕಾಶಕರು ಸಿಗದ ಕಾರಣ ಅವರೇ ಪ್ರಕಾಶಕರಾಗುತ್ತಿದ್ದಾರೆ. ಉತ್ತಮ ಪುಸ್ತಕಕ್ಕೆ ಯಾವಾಗಲೂ ಮಾರುಕಟ್ಟೆ ಓದುಗರು ಇದ್ದಾರೆ
ರಾಘವೇಂದ್ರ ಮುಖ್ಯಸ್ಥ ಪುಸ್ತಕ ಪ್ರಕಾಶನ
‘ಪುಸ್ತಕ ಬರೆಯುವ ಉತ್ಸಾಹ ಹೆಚ್ಚಲಿ’
‘ಪುಸ್ತಕ ಪ್ರಕಟವಾಗಿದೆ ಎನ್ನುವ ತೃಪ್ತಿಯ ಜತೆಗೆ ಅದಕ್ಕಿಂತಲೂ ಉತ್ತಮ ಕೃತಿ ರಚಿಸುವ ಉತ್ಸಾಹವೂ ಹೆಚ್ಚಬೇಕು’ ಎಂದು ಪುಸ್ತಕ ಬಿಡುಗಡೆ ಮಾಡಿದ ನಾ. ಸೋಮೇಶ್ವರ ಹೇಳಿದರು. ‘ಅನಂತಮೂರ್ತಿ ಅವರ ಪುಣ್ಯತಿಥಿ ಅಂಗವಾಗಿ 13 ಪುಸ್ತಕಗಳು ಬಿಡುಗಡೆಯಾಗಿದ್ದು ಶ್ಲಾಘನೀಯ. ಒಂದೊಂದು ಪುಸ್ತಕವು ಭಿನ್ನವಾಗಿದ್ದು ಅದರದ್ದೇ ಆದ ಓದುಗರನ್ನು ಆಕರ್ಷಿಸುವಲ್ಲಿ ಸಫಲವಾಗಬಲ್ಲದು. 92 ವರ್ಷಗಳಿಂದ ಪುಸ್ತಕ ಪ್ರಕಾಶನ ನಡೆಸಿಕೊಂಡು ಬಂದಿರುವ ಸಾಹಿತ್ಯ ಪ್ರಕಾಶನ ಮುಂದೆಯೂ ಇದೇ ರೀತಿ ಕೆಲಸ ಮಾಡಲಿ’ ಎಂದು ಆಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.