ಹುಬ್ಬಳ್ಳಿ: ಗುಡ್ಡಗಾಡು, ಕುಗ್ರಾಮಗಳ ಜನರು ಚಿಕ್ಕಪುಟ್ಟ ಅನಾರೋಗ್ಯಕ್ಕೂ ನಗರಗಳಿಗೆ ತೆರಳಿ ವೈದ್ಯರ ಬಳಿ ಚಿಕಿತ್ಸೆ ಪಡೆಯುವುದು ಕಷ್ಟಸಾಧ್ಯ. ಈ ಸಮಸ್ಯೆಗೆ ‘ವನವಾಸಿ ಕಲ್ಯಾಣ’ ಸಂಸ್ಥೆಯು ‘ಟೆಲಿ–ಮೆಡಿಸಿನ್’ ಎಂಬ ಯೋಜನೆಯ ಮೂಲಕ ಪರಿಹಾರ ಕಂಡುಕೊಂಡಿದೆ.
ಜ್ವರ, ನೆಗಡಿ, ಕೆಮ್ಮು ಮತ್ತಿತರ ಸಣ್ಣ ಪ್ರಮಾಣದ ಆರೋಗ್ಯ ಸಮಸ್ಯೆಗಳಿಗೆ ಪಟ್ಟಣಕ್ಕೆ ತೆರಳುವುದು ಹೆಚ್ಚಿನ ಸಮಯ ಬೇಡುವುದಷ್ಟೇ ಅಲ್ಲ, ಆರ್ಥಿಕವಾಗಿಯೂ ಹೊರೆ ಎಂಬುದನ್ನು ಅರಿತ ವನವಾಸಿ ಕಲ್ಯಾಣ, ರೋಗಿಗಳಿಗೆ ತಮ್ಮ ಗ್ರಾಮಗಳಲ್ಲಿಯೇ ಉಚಿತವಾಗಿ ತುರ್ತು ಚಿಕಿತ್ಸೆ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಆನ್‌ಲೈನ್ ಮೂಲಕ ಸಾಧ್ಯವಿರುವ ಎಲ್ಲ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಈವರೆಗೆ 5,900 ಜನರು ಯೋಜನೆಯಡಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ರಾಜ್ಯದಲ್ಲಿ ಆರಂಭವಾಗಿದ್ದ ಈ ಯೋಜನೆಯು ವಿವಿಧ ಕಾರಣಗಳಿಂದ ಅಷ್ಟಾಗಿ ಪ್ರಗತಿ ಕಂಡಿರಲಿಲ್ಲ. ಮಧ್ಯೆ ಆರು ತಿಂಗಳು ಸ್ಥಗಿತವಾಗಿದ್ದರೂ, ಪುನರಾರಂಭ ಮಾಡಿದಾಗ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿ ಇದೀಗ ಯಶಸ್ವಿಯಾಗಿ ಸಾಗಿದೆ. ರಾಜ್ಯದ ಏಳು ಜಿಲ್ಲೆಗಳಲ್ಲಿ ಕಾರ್ಯಾಚರಣೆಯಲ್ಲಿದ್ದು, ಧಾರವಾಡ ಜಿಲ್ಲೆಯಲ್ಲಿ ಒಂದೂವರೆ ವರ್ಷದ ಹಿಂದೆ ಆರಂಭಿಸಲಾಗಿದೆ. ಹತ್ತು ಜಿಲ್ಲೆಗಳನ್ನು ಯೋಜನೆಯ ಅಡಿ ತರಲು ವನವಾಸಿ ಕಲ್ಯಾಣ ಬಯಸಿದೆ.
ಆ್ಯಪ್ ಮೂಲಕ ಕಾರ್ಯಾಚರಣೆ: ಹಳ್ಳಿಗಳಲ್ಲಿನ ವಿದ್ಯಾವಂತರನ್ನು ವನವಾಸಿ ಕಲ್ಯಾಣದ ಕಾರ್ಯಕರ್ತರನ್ನಾಗಿ ನಿಯೋಜಿಸಿಕೊಂಡು, ಅವರ ಮೂಲಕ ರೋಗಿಗಳಿಗೆ ಚಿಕಿತ್ಸೆ ಪಡೆಯಲು ನೆರವು ನೀಡಲಾಗುತ್ತಿದೆ. ಈ ಕಾರ್ಯಕರ್ತರಿಗೆ ರಕ್ತದೊತ್ತಡ, ಜ್ವರ, ಮಧುಮೇಹ ತಪಾಸಣೆಯಂತಹ ಪ್ರಾಥಮಿಕ ತರಬೇತಿ ನೀಡಲಾಗಿದೆ. ಅವರು ‘ಡಾಕ್ಟರ್ ಫಾರ್ ಸೇವಾ’ ಆ್ಯಪ್ ಮೂಲಕ ವೈದ್ಯರೊಂದಿಗೆ ರೋಗಿಯ ಸಂಪರ್ಕ ಸಾಧ್ಯವಾಗಿಸುತ್ತಾರೆ. ವೈದ್ಯರ ಸೂಚನೆಯ ಮೇರೆಗೆ ರೋಗಿಗಳಿಗೆ ಔಷಧಗಳನ್ನೂ ವಿತರಿಸುತ್ತಾರೆ.
ವನವಾಸಿ ಕಲ್ಯಾಣದ್ದೇ ಇನ್ನೊಂದು ಯೋಜನೆ ಆರೋಗ್ಯ ಮಿತ್ರ. ಈ ಯೋಜನೆಯಡಿ ಪ್ರತಿ ತಿಂಗಳು ಪ್ರತಿ ಜಿಲ್ಲೆಗೆ 40 ಸಾವಿರದಷ್ಟು ಔಷಧಗಳನ್ನು ಪೂರೈಕೆ ಮಾಡಲಾಗುತ್ತಿದೆ. ಈ ಔಷಧಗಳನ್ನು ಕಾರ್ಯಕರ್ತರಿಗೆ ವಿತರಿಸಿ, ಅವುಗಳ ಪಟ್ಟಿಯನ್ನು ವೈದ್ಯರಿಗೆ ನೀಡಲಾಗಿರುತ್ತದೆ. ವೈದ್ಯರು ಈ ಪಟ್ಟಿಯಲ್ಲಿರುವ ಔಷಧಗಳನ್ನೇ ನೀಡಲು ಸೂಚಿಸುತ್ತಾರೆ. ನಿತ್ಯ ಸಂಜೆ 4ರಿಂದ 6 ಗಂಟೆಯ ವರೆಗೆ ಸಮಾಲೋಚನೆಯ ಅವಧಿ ನಿಗದಿಪಡಿಸಲಾಗಿದೆ. ಇದಲ್ಲದೆ, ಸಂಚಾರಿ ವೈದ್ಯಕೀಯ ವಾಹನವೂ ಕಾರ್ಯಾಚರಣೆಯಲ್ಲಿದೆ.
ಸದ್ಯ ಯೋಜನೆಯ ಅಡಿ ಜನರಲ್ ಫಿಜಿಶಿಯನ್, ಸ್ತ್ರೀರೋಗ ತಜ್ಞರು, ಮಕ್ಕಳ ತಜ್ಞರು ಹೀಗೆ ಮೂವರು ವೈದ್ಯರು ಒಪ್ಪಂದದಲ್ಲಿದ್ದಾರೆ. ಇವರ ಸಂಭಾವನೆಯನ್ನು ಡಾಕ್ಟರ್ ಫಾರ್ ಸೇವಾ ತಂಡ ನೋಡಿಕೊಳ್ಳುತ್ತದೆ. ಕಾರ್ಯಕರ್ತರಿಗೂ ಮಾಸಿಕ ಸಂಭಾವನೆ ನಿಗದಿಪಡಿಸಲಾಗಿದೆ.
ಟೆಲಿ–ಮೆಡಿಸಿನ್ ಯೋಜನೆಯಡಿ ಚಿಕಿತ್ಸೆ ಸಾಧ್ಯವಾಗದಿದ್ದಾಗ ಅಂಥ ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡುವ ಕೆಲಸವನ್ನೂ ವನವಾಸಿ ಕಲ್ಯಾಣದ ಕಾರ್ಯಕರ್ತರು ಮಾಡುತ್ತಿದ್ದಾರೆ. ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಕಾರಣ ವೈದ್ಯರ ಸಂಖ್ಯೆಯನ್ನು ಹೆಚ್ಚಿಸುವ ಚಿಂತನೆಯೂ ವನವಾಸಿ ಕಲ್ಯಾಣಕ್ಕಿದೆ.
ಎರಡು ರಾಜ್ಯಗಳಲ್ಲಿ ಸ್ಥಗಿತವಾಗಿದ್ದ ಯೋಜನೆಯು ಕರ್ನಾಟಕದಲ್ಲಿ ಯಶಸ್ವಿಯಾಗಿದೆ. ಪ್ರಾಯೋಗಿಕವಾಗಿದ್ದ ಈ ಯೋಜನೆಯು ಇದೀಗ ರಾಷ್ಟ್ರಮಟ್ಟಕ್ಕೆ ಮಾದರಿ ಯೋಜನೆಯಾಗಿ ಆಯ್ಕೆ ಆಗಿದೆವಿಶ್ವನಾಥ ಪೂಜಾರ ಟೆಲಿ ಮೆಡಿಸಿನ್ ಯೋಜನೆಯ ರಾಜ್ಯ ಉಸ್ತುವಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.