ಹುಬ್ಬಳ್ಳಿ: ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸರು, ಕಳೆದ 20 ವರ್ಷದ ಅವಧಿಯಲ್ಲಿ ಮಹಾನಗರ ವ್ಯಾಪ್ತಿಯಲ್ಲಿ ದಾಖಲಾದ ಉಗ್ರ ಸಂಘಟನೆಗಳ ಕೃತ್ಯಗಳ ಮಾಹಿತಿ ಸಂಗ್ರಹಿಸಲು ಮುಂದಾಗಿದ್ದಾರೆ.
ಪೊಲೀಸ್ ಕಮಿಷನರ್ ಕಚೇರಿಯಿಂದ ಎಲ್ಲ ಠಾಣೆಯ ಅಧಿಕಾರಿಗಳಿಗೆ ಸಂದೇಶ ರವಾನೆಯಾಗಿದ್ದು, ಆದಷ್ಟು ಬೇಗ ಮಾಹಿತಿ ನೀಡಲು ಸೂಚಿಸಲಾಗಿದೆ. ತಮ್ಮ ವ್ಯಾಪ್ತಿಯಲ್ಲಿ ನಡೆದಿರುವ ಭಯೋತ್ಪಾದಕ ಸಂಘಟನೆಗಳ ಮತ್ತು ನಿಷೇಧಿತ ಸ್ಟೂಡೆಂಟ್ ಇಸ್ಲಾಮಿಕ್ ಮೂವ್‌ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯ ಚಟುವಟಿಕೆ, ದಾಖಲಾದ ದೇಶದ್ರೋಹ ಪ್ರಕರಣಗಳು ಹಾಗೂ ಕೃತ್ಯದಲ್ಲಿ ಭಾಗಿಯಾದವರ ಸಂಪೂರ್ಣ ವಿವರ ನೀಡುವಂತೆ ತಿಳಿಸಲಾಗಿದೆ.
ಕೆಲ ವರ್ಷಗಳ ಹಿಂದೆ ಬೆಂಗಳೂರು, ಹುಬ್ಬಳ್ಳಿ ಮತ್ತು ಇತರೆಡೆ ನಡೆದ ವಿದ್ವಂಸಕ ಕೃತ್ಯದಲ್ಲಿ ಪಾಲ್ಗೊಂಡಿದ್ದ ಆರೋಪದ ಮೇಲೆ ನಗರದ ಕೆಲವರನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅವರಲ್ಲಿ ಕೆಲವರು ನಿಷೇಧಿತ ಲಷ್ಕರ್ ಎ ತೊಯ್ಬಾ(ಎಲ್‌ಇಟಿ), ಹರ್ಕತ್ ಉಲ್ ಜೆಹಾದ್ ಎ ಇಸ್ಲಾಮಿ(ಹುಜಿ) ಸಂಘಟನೆಯ ಸದಸ್ಯರೆಂದು ಗುರುತಿಸಲಾಗಿತ್ತು. ಆರೋಪಿಗಳು ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದಾರೆ. ಮೇಲಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ, ಅವರ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸುವಲ್ಲಿ ಸಿಬ್ಬಂದಿ ನಿರತರಾಗಿದ್ದಾರೆ.
‘ವೈಟ್ ಕಾಲರ್’ ಭಯೋತ್ಪಾದನೆ ಅನುಮಾನದ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸರು ಶೋಧ ಕಾರ್ಯ ಚುರುಕುಗೊಳಿಸಿದ್ದಾರೆ. ಈ ಹಿಂದೆ ಭಯೋತ್ಪಾದನೆ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ಮೊಬೈಲ್ ನಂಬರ್‌ಗಳನ್ನು ಸಂಗ್ರಹಿಸಿ, ಕರೆಗಳ ಜಾಡು ಹಿಡಿದು ಪರಿಶೀಲನೆ ನಡೆಸಿದ್ದಾರೆ. ಹೊರ ರಾಜ್ಯ ಹಾಗೂ ವಿದೇಶಗಳಿಂದ ಬಂದ ಕೆಲವು ವೈದ್ಯ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಿ, ಅವರ ಹಿನ್ನೆಲೆ ಹಾಗೂ ಚಲನವಲನದ ಬಗ್ಗೆಯೂ ವಿಶೇಷ ಗಮನ ಇಟ್ಟಿದ್ದಾರೆ.
‘ಕೆಲವು ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ನೀಡಿರುವ ವಿಳಾಸ ಹಾಗೂ ಸಂಪರ್ಕ ಸಂಖ್ಯೆ ಸರಿಯಾಗಿರದ ಕಾರಣ, ಸಂಬಂಧಿಕರ, ಸ್ನೇಹಿತರ ಹಾಗೂ ಪರಿಚಯದವರ ಮುಖಾಂತರ ಪತ್ತೆ ಹಚ್ಚಲಾಗುತ್ತಿದೆ. ಅನುಮಾನಾಸ್ಪದ ಆರೋಪಿಗಳು ವಿದೇಶಕ್ಕೆ ಅಥವಾ ಹೊರ ರಾಜ್ಯಗಳಿಗೆ ತೆರಳಿರುವ ಕುರಿತು ವಿವರ ಪಡೆದು, ಅವರ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.