ADVERTISEMENT

ಹುಬ್ಬಳ್ಳಿ | ಕಷ್ಟದಲ್ಲಿದ್ದವರಿಗೆ ನೆರವಾಗುವುದೇ ಹಬ್ಬ

ಮುಸ್ಲಿಂ ಸಮುದಾಯದವರಿಗೆ ಇಸ್ಲಾಮಿಕ್ ವಿದ್ವಾಂಸರ ಸಲಹೆ

ಬಸೀರ ಅಹ್ಮದ್ ನಗಾರಿ
Published 22 ಮೇ 2020, 19:30 IST
Last Updated 22 ಮೇ 2020, 19:30 IST
.
.   

ಹುಬ್ಬಳ್ಳಿ: ಲಾಕ್‌ಡೌನ್‌ ಜನರ ಜೀವನ ಶೈಲಿಯ ಜೊತೆಗೆ ಧಾರ್ಮಿಕ ಆಚರಣೆಗಳನ್ನೂ ಬದಲಿಸಿದೆ. ರಂಜಾನ್‌ ತಿಂಗಳ ಆಚರಣೆಗಳನ್ನು ಮನೆಗಳಲ್ಲಿಯೇ ನಿರ್ವಹಿಸುವಂತೆ ಮಾಡಿದೆ. ಸರ್ಕಾರದ ಲಾಕ್‌ಡೌನ್‌ ಆದೇಶ ಪಾಲನೆಗೆ ಕರೆ ನೀಡಿದ್ದ ಮುಸ್ಲಿಂ ಮುಖಂಡರು, ವಿದ್ವಾಂಸರು, ಇದೀಗ ರಂಜಾನ್‌ ಹಬ್ಬವನ್ನೂ ಸರಳವಾಗಿ ಆಚರಿಸುವಂತೆ ಸಲಹೆ ನೀಡಿದ್ದಾರೆ.

ಸದ್ಯದ ಸನ್ನಿವೇಶದಲ್ಲಿ ಬರೀ ಮುಸ್ಲಿಮರಷ್ಟೇ ಅಲ್ಲ, ಇಡೀ ಮನುಕುಲವೇ ಸಂಕಷ್ಟದಲ್ಲಿದೆ. ಬಡವರು, ಕೂಲಿಕಾರ್ಮಿಕರೊಂದಿಗೆ ಮಧ್ಯಮ ವರ್ಗದ ಜನರೂ ತೊಂದರೆಯಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಉಳ್ಳವರು ಅದ್ಧೂರಿಯಾಗಿ ರಂಜಾನ್‌ ಆಚರಿಸಿದರೆ, ಸಂಕಷ್ಟದಲ್ಲಿರುವವರಿಗೆ ತೊಂದರೆ ಕೊಟ್ಟಂತೆ. ಮತ್ತೊಬ್ಬರಿಗೆ ನೋವು ನೀಡುವ ಕೆಲಸ ಮಾಡಬಾರದು ಎಂಬುದು ಇಸ್ಲಾಂನ ತಿರುಳು. ಇದನ್ನು ಮುಸ್ಲಿಮರು ಅರಿಯಬೇಕು ಎನ್ನುತ್ತಾರೆ ಇಸ್ಲಾಮಿಕ್‌ ವಿದ್ವಾಂಸರು.

ಆದ್ದರಿಂದ ಬಹಳಷ್ಟು ಮುಸ್ಲಿಮರು ಈ ಬಾರಿ ಹೊಸ ಬಟ್ಟೆ ಖರೀದಿಯಿಂದಲೂ ದೂರ ಉಳಿಯಲು ನಿರ್ಧರಿಸಿದ್ದಾರೆ. ಅದೇ ಹಣವನ್ನು ನೆರೆಯ ಬಡವರು, ವಿಧವೆಯರು, ಕೂಲಿ ಕಾರ್ಮಿಕರಿಗೆ ದಾನ ಮಾಡಿ ಹಬ್ಬದ ಆಚರಣೆಗೆ ಅರ್ಥ ತಂದುಕೊಟ್ಟಿದ್ದಾರೆ.

ADVERTISEMENT

‘ಪ್ರತಿ ವರ್ಷ ರಂಜಾನ್‌ ಹಬ್ಬಕ್ಕಾಗಿ ₹25 ಸಾವಿರ ಖರ್ಚು ಮಾಡುತ್ತಿದ್ದೆವು. ಆದರೆ, ಈ ಸಲ ಸರಳವಾಗಿ, ಮನೆಗೆ ಸೀಮಿತವಾಗಿ ಆಚರಣೆಗೆ ನಿರ್ಧರಿಸಿದ್ದೇವೆ. ಹಳೆಯ ಬಟ್ಟೆಯನ್ನೇ ಧರಿಸಲು ನಿರ್ಧರಿಸಿದ್ದೇವೆ. ಹೊಸಬಟ್ಟೆ, ವಿಶೇಷ ಅಡುಗೆಗೆ ಕೂಡಿಟ್ಟಿದ್ದ ಹಣವನ್ನು ಬಡವರಿಗೆ ಹಂಚಿದ್ದೇವೆ’ ಎಂದು ಹುಬ್ಬಳ್ಳಿಯ ಸಿಬಿಟಿ ನಿವಾಸಿ ಫೈಜ್‌ ಅಹ್ಮದ್ ಮಕಾನದಾರ ಹೇಳಿದರು.

‘ನಮ್ಮ ನಾಲ್ಕು ಮಕಾನದಾರ ಕುಟುಂಬಗಳು ಸೇರಿ ರಂಜಾನ್‌ ಹಬ್ಬಕ್ಕೆ ವಿನಿಯೋಗಿಸುತ್ತಿದ್ದ ಅಂದಾಜು ₹70 ಹಣವನ್ನು ಬಡವರಿಗೆ ಹಂಚಿದ್ದೇವೆ. ಅದರಲ್ಲಿ ದಿನಸಿ ಹಾಗೂ ಆರ್ಥಿಕ ನೆರವಿನ ರೂಪದಲ್ಲಿಯೂ ಕೊಟ್ಟಿದ್ದೇವೆ. ಕೊರೊನಾ ಸೋಂಕಿನಿಂದಾಗಿ ಎಲ್ಲರೂ ಕಷ್ಟದಲ್ಲಿದ್ದಾರೆ. ಹೀಗಾಗಿ ಹೊಸಬಟ್ಟೆಯುಟ್ಟು ಸಂಭ್ರಮಿಸುವ ಬದಲು ಬಡವರಿಗೆ ಹಂಚಿ ಖುಷಿಪಟ್ಟಿದ್ದೇವೆ’ ಎಂದರು.

**

ಸಂಭ್ರಮ, ಆಡಂಬರ ಕುರುಹು ಆಗದಿರಲಿ
ರಂಜಾನ್‌ ಅಲ್ಲಾಹು ನಮಗೆ ಆರಾಧನೆ ನೀಡಿದ ಸದಾವಕಾಶದ ತಿಂಗಳು. ವಿಶೇಷ ಪ್ರಾರ್ಥನೆ, ಉಪವಾಸ, ಜಪ, ಕುರಾನ್‌ ಪಠಣ ಹೀಗೆ ಹಲವು ಬಗೆಯ ಆರಾಧನೆಗೆ ಹಾಗೂ ಪಾಪಗಳಿಂದ ದೂರ ಉಳಿಯಲು ಸಿಕ್ಕ ಅವಕಾಶಕ್ಕಾಗಿ ನಾವೆಲ್ಲ ಹಬ್ಬ ಆಚರಿಸುತ್ತೇವೆ. ಇದುವೇ ರಂಜಾನ್‌ ಹಬ್ಬದ ನಿಜವಾದ ಉದ್ದೇಶ. ಹೊಸಬಟ್ಟೆ ಧರಿಸುವುದು, ಬಗೆಯ ಬಗೆಯ ಭಕ್ಷ್ಯಗಳ ತಯಾರಿ, ಅದರ ಸೇವನೆ, ಹಂಚಿಕೆಯೇ ಹಬ್ಬದ ಖುಷಿಯಲ್ಲ. ಆದರೆ, ಅದೆಲ್ಲವೂ ಅದರ ಒಂದು ಭಾಗವಷ್ಟೆ. ಹೀಗಾಗಿ ಸಾಧ್ಯವಾದಷ್ಟು ಸರಳವಾಗಿ ಹಬ್ಬ ಆಚರಿಸಿ. ಅದು ಆಡಂಬರದ ಕುರುಹು ಆಗದಿರಲಿ.

ನಾವು ಸನ್ನಿವೇಶ ಅರಿತು ನಡೆಯುಬೇಕು ಎಂಬುದು ಕುರಾನ್‌, ಹದೀಸ್‌ ಹೇಳುತ್ತದೆ. ಜೋರು ಮಳೆ ಸುರಿಯುತ್ತಿದ್ದರೆ, ನಾವು ಮಸೀದಿಗಳ ಬದಲಿಗೆ ಮನೆಯಲ್ಲಿಯೇ ಪ್ರಾರ್ಥಿಸುತ್ತೆವಲ್ಲ, ಹಾಗೆಯೇ ಲಾಕ್‌ಡೌನ್‌ ಉದ್ದೇಶ ಅರಿತು ಮನೆಗಳಲ್ಲಿಯೇ ಪ್ರಾರ್ಥಿಸುವುದು ಉಚಿತ. ಈದ್ಗಾ, ಮಸೀದಿಗಳಿಗೇ ತೆರಳಿ ಪ್ರಾರ್ಥಿಸುವ ಹಟಬೇಡ.
-ಮೌಲಾನಾ ಮುಫ್ತಿ ಮೊಹಮ್ಮದ್‌ ಅಲಿ ಖಾಜಿ, ಪ್ರಧಾನ ಕಾರ್ಯದರ್ಶಿ, ಜಮಾತ್‌–ಎ– ಅಹಲೆ ಸುನ್ನತ್‌, ಹುಬ್ಬಳ್ಳಿ

*
​ನಾವೆಲ್ಲ ನಮ್ಮ ಸಂಭ್ರಮ, ಖರೀದಿಗಾಗಿಯೇ ಇಷ್ಟು ವರ್ಷ ಹಣ ಖರ್ಚು ಮಾಡಿದ್ದೇವೆ. ಇಂಥ ಸನ್ನಿವೇಶದಲ್ಲಿ ಕಷ್ಟದಲ್ಲಿರುವ ಸಮುದಾಯದ ಇತರಿಗೂ ಹಂಚುವ ಉದಾರತೆ ತೋರಿ. ಹಬ್ಬದ ಕನಿಷ್ಠ ಅಡುಗೆಗೂ ‌ಪರದಾಡುವವರು ಖುಷಿಯಿಂದ ಹಬ್ಬ ಆಚರಿಸಲು ನೆರವಾಗಿ. ಮತ್ತೊಬ್ಬರ ಖುಷಿ ಕಾರಣವಾಗುವುದೇ ನಿಜವಾದ ಹಬ್ಬ.
-ಮೌಲಾನಾ ಅಹ್ಮದ್‌ಸಿರಾಜ್‌, ಅಧ್ಯಕ್ಷ, ಜಮಾತ್‌ ಉಲ್ಮಾ–ಎ–ಹಿಂದ್‌, ಧಾರವಾಡ ಜಿಲ್ಲೆ

***

ಲಾಕ್‌ಡೌನ್‌ ಪಾಲನೆಯೂ ಆರಾಧನೆಯೇ...

* ಹಬ್ಬವನ್ನು ಚೆನ್ನಾಗಿಯೇ ಆಚರಿಸಿ. ಆದರೆ, ಅಬ್ಬರ, ಆಡಂಬರದ ಮಾರ್ಕೆಟಿಂಗ್‌, ಶಾಪಿಂಗ್‌ ಬೇಡ. ಇದರಿಂದ ಬಡವರಿಗೆ ತೊಂದರೆ ಆಗದಂತೆ ಕಾಳಜಿಪೂರ್ವಕ ಎಚ್ಚರಿಕೆ ವಹಿಸಿ.

* ಹಬ್ಬದ ವಿಷಯಕ್ಕೆ ಬಂದಾಗ ಜನರು ಭಾವುಕರಾಗುತ್ತದೆ. ಆದರೆ, ಎರಡು ವಿಷಯಗಳ ಬಗ್ಗೆ ಗಮನವಿರಲಿ. ಮೊದಲನೆಯದ್ದು ಲಾಕ್‌ಡೌನ್‌ ನಿಯಮಗಳ ಬಗ್ಗೆ ಎಚ್ಚರವಿರಲಿ. ಕಾನೂನುಗಳ ಪಾಲನೆಯೂ ಒಂದು ಬಗೆಯ ಆರಾಧನೆಯೇ ಎಂಬುದು ತಿಳಿದಿರಲಿ. ಹಬ್ಬದ ಸಂಭ್ರಮದಲ್ಲಿ ಸುರಕ್ಷಿತ ಅಂತರ ಮರೆತರೆ ಎಲ್ಲರಿಗೂ ಹಾನಿ ಎಂಬುದು ಗಮನದಲ್ಲಿರಲಿ.

* ಹಬ್ಬದ ದಿನ ಹೊಸಬಟ್ಟೆ ಉಡಬೇಕು ಎಂಬುದು ಕಡ್ಡಾಯವೇನಲ್ಲ. ನಿಮ್ಮಲ್ಲಿರುವ ಬಟ್ಟೆಗಳಲ್ಲಿ ಉತ್ತಮವಾದದ್ದನ್ನು ಧರಿಸಿದರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.