ADVERTISEMENT

ಅಂತಿಮ ಹಂತದಲ್ಲಿ 250 ಬೆಡ್‌ಗಳ ತಯಾರಿ

ಕಿಮ್ಸ್‌ನ ಹಳೆಯ ಕಟ್ಟಡದ ಮೂರನೇ ಮಹಡಿಯಲ್ಲಿ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2020, 15:44 IST
Last Updated 2 ಆಗಸ್ಟ್ 2020, 15:44 IST

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಇಲ್ಲಿನ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್ಸ್‌) ಬೆಡ್‌ಗಳ ಸಂಖ್ಯೆಯನ್ನೂ ಹೆಚ್ಚಿಸುವ ಕೆಲಸ ನಡೆಯುತ್ತಿದೆ.

ಆಸ್ಪತ್ರೆಯ ಹಳೇ ಕಟ್ಟಡದ ಮೂರನೇ ಮಹಡಿಯನ್ನು ಕೋವಿಡ್‌ ವಾರ್ಡ್‌ ಆಗಿ ಬದಲಿಸಲಾಗಿದ್ದು, ಅಲ್ಲಿ 250 ಬೆಡ್‌ಗಳು ಮತ್ತು ಆಕ್ಸಿಜನ್‌ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಆಸ್ಪತ್ರೆಗೆ ಹೊಸದಾಗಿ 30 ವೆಂಟಿಲೇಟರ್‌ಗಳು ಬಂದಿವೆ. ಮೊದಲು 40 ವೆಂಟಿಲೇಟರ್‌ಗಳು ಇದ್ದವು.

ಕಿಮ್ಸ್‌, ಉತ್ತರ ಕರ್ನಾಟಕದ ಪ್ರಮುಖ ವೈದ್ಯಕೀಯ ಚಿಕಿತ್ಸಾ ಕೇಂದ್ರವಾಗಿದ್ದು, ಇಲ್ಲಿಗೆ ಧಾರವಾಡ ಮಾತ್ರವಲ್ಲದೆ ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಿಂದಲೂ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ADVERTISEMENT

ಸಾಮಾನ್ಯಕ್ಕಿಂತಲೂ ಹೆಚ್ಚು ಸೋಂಕಿನ ಲಕ್ಷಣಗಳನ್ನು ಹೊಂದಿರುವ ರೋಗಿಗಳ ಚಿಕಿತ್ಸೆಗೆ ಆಕ್ಸಿಜನ್‌ ಮತ್ತು ವೆಂಟಿಲೇಟರ್‌ ಸೌಲಭ್ಯ ಅಗತ್ಯವಿತ್ತು. ಇದಕ್ಕೆ ನಿತ್ಯವೂ ಬೇಡಿಕೆ ಹೆಚ್ಚಾಗುತ್ತಿದೆ. ಆರೋಗ್ಯ ವಿಷಯ ಸ್ಥಿತಿ ತಲುಪಿರುವ ಎಲ್ಲಾ ಸೋಂಕಿತ ರೋಗಿಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲು ಆಗುತ್ತಿಲ್ಲ. ಆದ್ದರಿಂದ ಬೆಡ್‌ಗಳ ಸಂಖ್ಯೆ ಹೆಚ್ಚಿಸಿ, ಪ್ರತಿ ಬೆಡ್‌ಗೂ ಆಕ್ಸಿಜನ್‌ ಸೌಲಭ್ಯ ಕಲ್ಪಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಕಿಮ್ಸ್‌ ಮೂಲಗಳು ತಿಳಿಸಿವೆ.

ಕಿಮ್ಸ್‌ನ ವೈದ್ಯಕೀಯ ಅಧೀಕ್ಷಕ ಉಸ್ತುವಾರಿ ಡಾ. ರಾಜಶೇಖರ ದ್ಯಾಬೇರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ ‘ಹಳೇ ಕಟ್ಟಡದ ಮೂರನೇ ಮಹಡಿಯನ್ನು ಕೋವಿಡ್‌ ವಾರ್ಡ್‌ ಮಾಡುವ ಕೆಲಸ ಅಂತಿಮ ಹಂತದಲ್ಲಿದ್ದು, ಎರಡ್ಮೂರು ದಿನಗಳಲ್ಲಿ ಕಾರ್ಯ ಪೂರ್ಣಗೊಳ್ಳಲಿದೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕಿಮ್ಸ್‌ನಲ್ಲಿ ಒಟ್ಟು 600 ಹಾಸಿಗೆಗಳ ಸೌಲಭ್ಯ ಮಾಡುವಂತೆ ಸೂಚಿಸಿದ್ದಾರೆ. ಸದ್ಯಕ್ಕೆ 500 ಬೆಡ್‌ಗಳ ವ್ಯವಸ್ಥೆಯಾಗಿದೆ’ ಎಂದರು.

ಕಿಮ್ಸ್‌ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಪ್ರತಿಕ್ರಿಯಿಸಿ ‘ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಸೋಂಕಿತರು ಕಿಮ್ಸ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆದ್ದರಿಂದ ಅವರಿಗೆ ಬೆಡ್‌ಗಳ ಅಗತ್ಯವಿದೆ. ನಾವು ಯಾವ ರೋಗಿಯನ್ನು ವಾಪಸ್‌ ಕಳಿಸುವುದಿಲ್ಲ. ಆದ್ದರಿಂದ 250 ಬೆಡ್‌ಗಳ ಸೌಲಭ್ಯ ಕಲ್ಪಿಸುವ ತಯಾರಿ ಅಂತಿಮ ಹಂತದಲ್ಲಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.