ADVERTISEMENT

ಬಿಸಿಲು, ಮಳೆಯಲ್ಲಿಯೇ ಕಾಯಬೇಕಾದ ಅನಿವಾರ್ಯತೆ: ಪ್ರಯಾಣಿಕರ ಪರದಾಟ

ನಗರದಲ್ಲಿಯೇ ಇಲ್ಲ ಬಸ್‌ ನಿಲ್ದಾಣ; ಪ್ರಯಾಣಿಕರ ಪರದಾಟ

ಬಸವರಾಜ ಹವಾಲ್ದಾರ
Published 26 ಜನವರಿ 2021, 2:46 IST
Last Updated 26 ಜನವರಿ 2021, 2:46 IST
ಬಸ್‌ಗಾಗಿ ಫುಟ್‌ ಪಾತ್‌ ಮೇಲೆ ಬಿಸಿಲಲ್ಲಿ ಕಾಯ್ದು ನಿಂತಿರುವ ಪ್ರಯಾಣಿಕರು
ಬಸ್‌ಗಾಗಿ ಫುಟ್‌ ಪಾತ್‌ ಮೇಲೆ ಬಿಸಿಲಲ್ಲಿ ಕಾಯ್ದು ನಿಂತಿರುವ ಪ್ರಯಾಣಿಕರು   

ಹುಬ್ಬಳ್ಳಿ: ತ್ವರಿತ ಸಾರಿಗೆ ಸೇವೆ (ಬಿಆರ್‌ಟಿಎಸ್)ಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಬಸ್‌ ನಿಲ್ದಾಣದ ಸೌಲಭ್ಯವಿದೆ. ಆದರೆ, ಅದೇ ಮಾರ್ಗದಲ್ಲಿ ಕಾರಿಡಾರ್‌ ಹೊರಗೆ ಸಿಟಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ಬಿಸಿಲು, ದೂಳು, ಮಳೆಯಲ್ಲಿ ಬಸ್‌ ಕಾಯುವ ಸಂಕಷ್ಟ ಎದುರಿಸುತ್ತಿದ್ದಾರೆ.

ಹೂಸೂರಿನಿಂದ ಧಾರವಾಡವರೆಗೆ ಸಂಚರಿಸುವ ಸಿಟಿ ಬಸ್‌ಗಳಿಗೆ ಬಹುತೇಕ ಕಡೆಗಳಲ್ಲಿ ಬಸ್ ನಿಲ್ದಾಗಳಿಲ್ಲ. ಮೊದಲು ಹಲವಾರು ಕಡೆಗಳಲ್ಲಿ ಬಸ್‌ ನಿಲ್ದಾಣಗಳಿದ್ದವು. ಬಿಆರ್‌ಟಿಎಸ್‌ ಮಾರ್ಗ ನಿರ್ಮಾಣ ಸಂದರ್ಭದಲ್ಲಿ ಅವುಗಳನ್ನು ಕೆಡವಲಾಯಿತು. ನಂತರ ದಿನಗಳಲ್ಲಿ ಅವುಗಳ ನಿರ್ಮಾಣದ ಬಗೆಗೆ ಅಧಿಕಾರಿಗಳು ಯೋಚಿಸದ್ದರಿಂದ ಬಿಸಿಲಿನಲ್ಲಿ ಕಾಯುವಂತಾಗಿದೆ.

ಚಿಗರಿ ಬಸ್‌ಗಳಲ್ಲಿ ಸಂಚರಿಸುವಂತೆ ನಿತ್ಯ ಲಕ್ಷಾಂತರ ಮಂದಿ ಹೊರಗಡೆಯ ಮಾರ್ಗದಲ್ಲಿಯೂ ಸಂಚರಿಸುತ್ತಾರೆ. ಅವಳಿ ನಗರಗಳಲ್ಲದೆ ಉಳಿದ ಬಡಾವಣೆಗಳಿಗೆ ಸಂಚರಿಸುವವರು ಸಿಟಿ ಬಸ್‌ಗಳಲ್ಲಿಯೇ ಹೋಗಬೇಕು. ನಿಲ್ದಾಣಗಳಿಲ್ಲದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ADVERTISEMENT

ಶಾಲಾ ವಿದ್ಯಾರ್ಥಿಗಳು, ವಯಸ್ಸಾದವರು ಬಿಸಿಲು, ಮಳೆಯಲ್ಲಿ ಕಾಯಬೇಕಾದ ಅನಿವಾರ್ಯತೆ ಇದೆ. ಫುಟ್‌ಪಾತ್‌ ಮೇಲೆಯೇ ನಿಂತುಕೊಂಡಿರಬೇಕು. ಪಾದಚಾರಿಗಳು ಬಂದಾಗ ಅತ್ತಿತ್ತ ಸರಿದಾಡಿ ಜಾಗಬಿಡಬೇಕಾಗುತ್ತದೆ. ಕೆಲವು ಕಡೆಗಳಲ್ಲಿ ಅಲ್ಲಿಯೇ ಅಂಗಡಿಗಳೂ ಇವೆ.

ಹೊಸೂರು, ವಿದ್ಯಾನಗರದ ಜೆ.ಜಿ. ಕಾಮರ್ಸ್‌ ಕಾಲೇಜು, ಕಾಡಸಿದ್ಧೇಶ್ವರ ಕಾಲೇಜು, ಉಣಕಲ್‌, ಬೈರಿದೇವರಕೊಪ್ಪ ಸೇರಿದಂತೆ ಬಹುತೇಕ ಕಡೆಗಳಲ್ಲಿ ನಿಲ್ದಾಣಗಳಿಲ್ಲ. ಜನರು ಗುಂಪು, ಗುಂಪಾಗಿ ಜನರು ಕಾಯ್ದುಕೊಂಡು ನಿಂತಿರುತ್ತಾರೆ.

‘ಬಿಆರ್‌ಟಿಎಸ್‌ನಲ್ಲಿ ಸಂಚರಿಸುವವರಿಗಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸುಸಜ್ಜಿತ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಆದರೆ, ಸಿಟಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಏಕೆ ನಿರ್ಮಿಸಿಲ್ಲ. ನಾವುಗಳು ಹಣ ಪಾವತಿಸುವುದಿಲ್ಲವೇ? ಮೂಲ ಸೌಲಭ್ಯ ಒದಗಿಸದಿದ್ದರೆ ಹೇಗೆ’ ಎಂದು ಪ್ರಶ್ನಿಸುತ್ತಾರೆ ನವನಗರದ ನಿವಾಸಿ, ಪ್ರಯಾಣಿಕ ನವನೀತ್‌ ಕೆ.

‘ವಿದ್ಯಾನಗರದ ಕೆನರಾ ಬ್ಯಾಂಕ್‌ ಬಳಿ ಹಲವಾರು ವರ್ಷಗಳಿಂದ ನಿಲ್ದಾಣವಿತ್ತು. ಬಿಆರ್‌ಟಿಎಸ್‌ ಕಾರಿಡಾರ್ ನಿರ್ಮಾಣದ ವೇಳೆ ಕೆಡವಲಾಗಿತ್ತು. ನಂತರ ದಿನಗಳಲ್ಲಿ ನಿರ್ಮಿಸಿ ಕೊಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಕಾಮಗಾರಿ ಮುಗಿದು ವರ್ಷಗಳೇ ಕಳೆದಿವೆ. ಆದರೆ, ನಿಲ್ದಾಣ ಮಾತ್ರ ನಿರ್ಮಾಣವಾಗಿಲ್ಲ’ ಎನ್ನುತ್ತಾರೆ ವಿದ್ಯಾನಗರ ನಿವಾಸಿ ಸಂತೋಷ ಗುಡಿ.

ಬೇರೆ ಮಾರ್ಗಗಳಲ್ಲಿ ನಿಲ್ದಾಣ ನಿರ್ಮಿಸುತ್ತಿದ್ದೇವೆ. ಈ ಮಾರ್ಗದಲ್ಲಿಯೂ ಅವಶ್ಯಕತೆ ನೋಡಿಕೊಂಡು ನಿರ್ಮಿಸುವ ಬಗೆಗೆ ಚಿಂತಿಸಲಾಗುವುದು.
ಸುರೇಶ ಇಟ್ನಾಳ, ಆಯುಕ್ತ, ಮಹಾನಗರ ಪಾಲಿಕೆ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.