ADVERTISEMENT

PV Web Exclusive: ಆಟೊರಾಜರ ಪ್ರೇಮಲೋಕ...

ಪ್ರಮೋದ
Published 13 ಫೆಬ್ರುವರಿ 2021, 19:31 IST
Last Updated 13 ಫೆಬ್ರುವರಿ 2021, 19:31 IST
ಆಟೊ ಹಿಂದಿನ ಪ್ರೇಮಬರಹ
ಆಟೊ ಹಿಂದಿನ ಪ್ರೇಮಬರಹ   

ಪ್ರೇಮಿಗಳ ದಿನವೆಂದರೆ ಸಾಕು; ಯುವ ಮನಸ್ಸುಗಳಲ್ಲಿ ಅದೇನೋ ಸಂಭ್ರಮ. ವ್ಯಕ್ತಪಡಿಸಲಾಗದ ನೂರಾರು ಭಾವನೆಗಳಿಗೆ ಅಕ್ಷರದ ರೂಪಕೊಡುವ ಆಸೆ. ಪ್ರತಿ ವರ್ಷ ತನ್ನ ನೆಚ್ಚಿನ ಹುಡುಗ/ಹುಡುಗಿಗೆ ಮನದಲ್ಲಿನ ಅವ್ಯಕ್ತ ಭಾವನೆಗಳನ್ನು ಹಂಚಿಕೊಳ್ಳುವ ಕನಸು.

ಇದಕ್ಕಾಗಿ ತಿಂಗಳಾನುಗಟ್ಟಲೆ ಮನಸ್ಸಿನಲ್ಲಿಯೇ ಅಭ್ಯಾಸ. ಮನದ ಭಾವನೆಗಳನ್ನು ಹೇಳಿಕೊಳ್ಳುವುದಾದರೂ ಹೇಗೆ? ನಾನು ಹೇಳಿದ್ದನ್ನು ಹುಡುಗ/ಹುಡುಗಿ ಒಪ್ಪಿಕೊಳ್ಳುತ್ತಾರಾ? ನನ್ನ ಪ್ರೇಮ ನಿವೇದನೆ ಅಪ್ಪಿಕೊಳ್ಳುತ್ತಾರಾ? ಎನ್ನುವ ಕುತೂಹಲ. ಇದಕ್ಕೆ ಹುಡುಗ/ಹುಡುಗಿಯ ಸ್ನೇಹಿತರು ’ನಿನ್ನಂಥ ಚೆಲುವ/ಚೆಲುವಿಯನ್ನು ಒಪ್ಪಿಕೊಳ್ಳದಿದ್ದರೆ; ಇನ್ಯಾರನ್ನು ಒಪ್ಪಿಕೊಳ್ಳುತ್ತಾರೆ‘ ಎನ್ನುವ ಹುರಿದುಂಬಿಸುವ ಮಾತುಗಳು.

ಸ್ನೇಹಿತರ ಮಾತು, ಆತಂಕ ಕಳೆದು ಪ್ರೇಮ ನಿವೇದನೆ ಮಾಡುವ ನೆಪಕ್ಕೊಂದು ದಿನ ಬಂದಾಗಲೇ ಹುಡುಗ/ಹುಡುಗಿಯ ಮನಸ್ಸಿನಲ್ಲಿ ಹೇಳಿಕೊಳ್ಳಲಾಗದಷ್ಟು ಸಂಭ್ರಮ. ಮೊಬೈಲ್‌ ಫೋನ್‌, ವಾಟ್ಸ್‌ ಆ್ಯಪ್‌ ಸೇರಿದಂತೆ ಅನೇಕ ವೇದಿಕೆಗಳಿದ್ದರೂ ನೇರವಾಗಿಯೇ ಪ‍್ರೀತಿ ವ್ಯಕ್ತಪಡಿಸಬೇಕು ಎನ್ನುವ ಆಸೆ.

ADVERTISEMENT

ಹೀಗೆ ಆಸೆ, ಪ್ರೀತಿ ಮತ್ತು ಕನಸುಗಳನ್ನು ಕಂಡ ಅದೆಷ್ಟೋ ಪ್ರೇಮಿಗಳು ಜೀವನಪೂರ್ತಿ ಖುಷಿಯನ್ನೇ ಹಾಸುಹೊದ್ದಿದ್ದಾರೆ. ತಮ್ಮ ಪ್ರೇಮದಲ್ಲಿ ವೈಫಲ್ಯ ಕಂಡಾಗ ನೋವುಂಡವರೂ ಇದ್ದಾರೆ. ಅದನ್ನು ಅನೇಕ ಜನ ವಿವಿಧ ವೇದಿಕೆಗಳ ಮೂಲಕ ವ್ಯಕ್ತಪಡಿಸುತ್ತಾರೆ. ಇದರಲ್ಲಿ ಆಟೊ ಚಾಲಕರದ್ದೂ ವಿಶೇಷ ದಾರಿ. ತಮ್ಮ ಬದುಕಿನ ಘಟನೆಗಳಿಗೆ ಆಟೊಗಳ ಹಿಂದೆ ಅಕ್ಷರ ರೂಪ ಕೊಟ್ಟಿದ್ದಾರೆ.

ಆಟೊಗಳ ಹಿಂದೆ ಪ್ರೇಮ, ನಿರಾಸೆ, ಒಂಟಿತನ, ಬೇಸರ, ಖುಷಿ, ಹತಾಶೆ, ಸ್ಫೂರ್ತಿ ಹೀಗೆ ಎಲ್ಲ ಭಾವನೆಗಳು ಅಕ್ಷರ ರೂಪ ಪಡೆಯುತ್ತವೆ. ಆ ಸಾಲುಗಳು ಹಲವು ಬಾರಿ ಗಂಭೀರ ಚಿಂತನೆಗೆ ಕಾರಣವಾದರೆ, ಇನ್ನೂ ಕೆಲವರನ್ನು ತಮ್ಮ ’ಪ್ರೇಮ ಲೋಕಕ್ಕೆ‘ ಕೊಂಡೊಯ್ಯುತ್ತವೆ. ಕೆಲವರಿಗೆ ಆ ಸಾಲುಗಳು ತಮಾಷೆಯಾಗಿ ಕಾಣಿಸುತ್ತವೆ. ಪ್ರೀತಿಸಿ ಮದುವೆಯಾದರೆ ಆಗುವ ಲಾಭ,‌ ಮನೆಯವರು ನೋಡಿದವರನ್ನು ಮದುವೆಯಾದರೆ ಆಗುವ ಅನುಕೂಲಗಳೇನು? ಪ್ರಿಯತಮೆ/ಪ್ರಿಯಕರ ಕೈಕೊಟ್ಟರೆ ಆಗುವ ಪರಿಣಾಮಗಳೇನು? ಎನ್ನುವುದನ್ನು ಅಕ್ಷರಗಳ ಮೂಲಕ ಚುಟುಕಾಗಿ ಆಟೊ ಚಾಲಕರು ಹಂಚಿಕೊಳ್ಳುತ್ತಾರೆ.

ಲವ್‌ ಆದರೆ ರೊಮಾನ್ಸ್‌ ಕೈಕೊಟ್ಟರೆ ನಿಮ್ಹಾನ್ಸ್‌, ಆಟೊ ಹಿಂದೆ ಹೋದರೆ ದೂಳು ಹುಡುಗಿ ಹಿಂದೆ ಹೋದರೆ ಗೋಳು, ಲವ್‌ ಮಾಡಿದ್ರೆ ಲವ್‌ ಸ್ಟೋರಿ ಕೈ ಕೊಟ್ರೆ ಕ್ರೈಂ ಸ್ಟೋರಿ, ಆಕಸ್ಮಿಕವಾಗಿ ಸಿಕ್ಕಳು ನನ್ನ ನೋಡಿ ನಕ್ಕಳು; ನಮಗೀಗಿ ಮೂರು ಮಕ್ಕಳು, ಹುಡುಗಿಯರ ಮೋಡಿ ಹುಡುಗರಿಗೆ ದಾಡಿ, ಪ್ರೀತಿಗಾಗಿ ಪ್ರಾಣ ಕೊಡುವುದು ಕಷ್ಟವಲ್ಲ; ಪ್ರಾಣ ಕೊಡುವಂತೆ ಪ್ರೀತಿ ಸಿಗೋದು ತುಂಬಾ ಕಷ್ಟ, ಹಣ ಇದ್ರೆ ಸತ್ತ ಪ್ರೇಯಸಿಗೆ ತಾಜ್‌ ಮಹಲ್‌ ಬೇಕಾದರೂ ಕಟ್ಟಬಹುದು; ಹಣ ಇಲ್ಲದಿದ್ದರೆ ಬದುಕಿರೊ ಪ್ರೇಯಸಿಗೆ ತಾಳಿನೂ ಕಟ್ಟೊಕೆ ಆಗಲ್ಲ... ಹೀಗೆ ಎಲ್ಲ ರೀತಿಯ ಭಾವನೆಗಳು ವ್ಯಕ್ತವಾಗುತ್ತವೆ.

ಹುಡುಗನ ಪ್ರೀತಿ ತಿರಸ್ಕರಿಸಿ ಹೋದ ಹುಡುಗಿಗೆ ಅನೇಕ ಆಟೊ ಚಾಲಕರು ಅಕ್ಷರಗಳ ಮೂಲಕ ನವಿರಾಗಿ ಚಾಟಿ ಬೀಸುತ್ತಾರೆ. ಮನಸ್ಸಿಗೆ ಬಂದ ಹುಡುಗಿಗೆ ಹೃದಯದಲ್ಲಿ ಜಾಗಕೊಟ್ಟು; ಹಾಳಾದ ಪ್ರೀತಿಗೆ ಹೃದಯವನ್ನು ಉಸಿರಾಗಿಟ್ಟು ಕಾಯುವೆ ಗೆಳತಿ ನಿನ್ನ ಪ್ರೀತಿಗೆ ನನ್ನ ಪ್ರಾಣವನ್ನು ಮುಡಿಪಾಗಿಟ್ಟು ಎನ್ನುವ ಭಾವನೆ ಅಭಿವ್ಯಕ್ತಪಡಿಸುತ್ತಾರೆ.

ಆಟೊ ಚಾಲಕರು ಹಾಗೂ ಮಾಲೀಕರು ತಮ್ಮ ವಾಹನಗಳ ಹಿಂದೆ ಬರೆಸುವ ಸಾಲುಗಳಲ್ಲಿ ಕೇವಲ ಹುಡುಗ–ಹುಡುಗಿ, ಗಂಡ–ಹೆಂಡತಿ ನಡುವಿನ ಸಂಬಂಧಗಳ ಪ್ರೀತಿಯ ಸಾಲುಗಳಷ್ಟೇ ಇರುವುದಿಲ್ಲ. ಎಷ್ಟಿದ್ದರೇನು ಹಣ, ತೀರಿಸಲಾಗದು ತಂದೆ–ತಾಯಿ ಋಣ ಎನ್ನುವ ಪೋಷಕರ ಕುರಿತ ಪ್ರೀತಿಯ ಸಾಲುಗಳು ಇದಕ್ಕೆ ಸಾಕ್ಷಿ.

ಇನ್ನೂ ಕೆಲ ಸಾಲುಗಳ ತಮಾಷೆಯಾಗಿ, ಮತ್ತೆ ಮತ್ತೆ ನಗುವಂತೆ ಮಾಡುತ್ತವೆ. ಪ್ರೀತಿ ಪವಿತ್ರ, ಪ್ರೀತ್ಸೋಳ್ ವಿಚಿತ್ರ, ಬೇಜಾರ್‌ ಆದ್ರೆ ಎಣ್ಣೆ, ಲವ್ವಲ್ಲಿ ಬಿದ್ರೆ ಮಣ್ಣೆ; ಬದುಕಿದ್ರೆ ಬಿರಿಯಾನಿ ಸತ್ತೋದ್ರೆ ಸಾಂಬ್ರಾಣಿ, ನನ್ನ ಯಾರಾದ್ರೂ ಇಷ್ಟ ಪಡ್ತಾರೊ ಬಿಡ್ತಾರೊ ಗೊತ್ತಿಲ್ಲ. ಆದರೆ ನಾನ್‌ ಇಷ್ಟ ಪಡೋರು ಯಾವಾಗ್ಲೂ ಚೆನ್ನಾಗಿರಲಿ; ಇಂತಿ ನಿನ್ನ ಪಾಗಲ್‌ ಪ್ರೇಮಿ ಎನ್ನುವ ‘ಪಂಚಿಂಗ್‌‘ ಸಾಲುಗಳು ಕಣ್ಮನ ಸೆಳೆಯುತ್ತವೆ.

ಸೌಂದರ್ಯ ನೋಡಿ ಕರಗಬೇಡ; ಮೊದಲ ಪ್ರೀತಿ ಮರೆಯಬೇಡ. ಚೆನ್ನಾಗಿರೊ ಹುಡ್ಗಿಯರಿಗೆಲ್ಲ ಐ ಲವ್‌ ಯು ಹೇಳೊ ಹುಡ್ಗ ನಾನಲ್ಲ, ನನ್ನ ಹುಡ್ಗಿ ಐ ಹೇಟ್‌ ಯು ಅಂದ್ರೂ ಬಿಡೊ ಮಗ ನಾನಲ್ಲ. ಈ ಪ್ರಪಂಚದಲ್ಲಿ ಮನೆ ಹಾಳು ಮಾಡೊರ್ಗಿಂತ ಮನಸ್ಸು ಹಾಳು ಮಾಡೊರು ಜಾಸ್ತಿ. ಓ ಗೆಳೆಯ ಪ್ರೀತಿ ಮಾಡೋದಲ್ಲ ಕಣೋ; ಪ್ರೀತಿ ಮೂಡೋದು. ಜೀವನ ಒಂದು ಗುಲಾಬಿ ಹೂವಿನಂತೆ, ಅರಿತು ಮುಟ್ಟಿದರೆ ಹೂವು, ಮರೆತು ಮುಟ್ಟಿದರೆ ಮುಳ್ಳು. ಹೊತ್ತು ಮುಳುಗಿದೆ ತುತ್ತು ಕರಗಿದೆ ಮತ್ತು ಏರಿದೆ; ಮುತ್ತು ಬೇಡನಲ್ಲೆ ನಿನ್ನ ಸುತ್ತ ಸುತ್ತಿ ಸಾಕಾಗಿದೆ ಇಲ್ಲೇ. ಒಲವೇ ನಿನ್ನ ಪ್ರೀತಿಸಿದ ದಿನಗಳ ನೆನೆಯುತ್ತಲೇ ಬದುಕುವೆನು. ಹೂವಿಗಾಗಿ ಕೈ ಚಾಚಿದೆ ಸಿಕ್ಕಿದ್ದು ಬರಿ ಮುಳ್ಳಿನಿಂದ ಆದ ಗಾಯ. ಹೀಗೆ ಪುಂಖಾನುಪುಂಖವಾಗಿ ’ಆಟೊ ರಾಜ‘ರ ಭಾವನೆಗಳು ವ್ಯಕ್ತವಾಗುತ್ತಲೇ ಹೋಗುತ್ತವೆ.

ಬದುಕಿನ ದೀವಿಗೆಯಲ್ಲಿ ಪ್ರೀತಿಯ ದೀಪ ಹಚ್ಚಿ ಸಾಗಬೇಕಾದ ಎಲ್ಲರಿಗೂ ಆಟೊ ಚಾಲಕರ ವಿವಿಧ ಭಾವಗಳ ಅಕ್ಷರದ ಮಾತುಗಳು ಮೆಚ್ಚುಗೆಯಾಗುತ್ತವೆ. ಬದುಕಿಗೆ ಸನಿಹವೂ ಎನಿಸುತ್ತವೆ. ಬಹಳಷ್ಟು ಆಟೊ ಚಾಲಕರು ಪ್ರೀತಿಪೂರ್ವಕವಾಗಿಯೇ ಇವುಗಳನ್ನು ಬರೆಯಿಸುತ್ತಾರೆ. ಹಗಲಿರುಳಿನಂತೆ ಎಲ್ಲವೂ ಬದುಕಿನಲ್ಲಿ ಬಂದು ಹೋಗುತ್ತವೆ. ನೋವು–ನಲಿವುಗಳ ನಡುವಿನ ಬದುಕಿನ ಪಯಣದಲ್ಲಿ ಎಲ್ಲರ ಬಾಳಲ್ಲಿ ಪ್ರೀತಿಯೇ ಹಾಸು ಹೊಕ್ಕಾಗಿರಲಿ. ಪ್ರೀತಿಸುವ ಮನಸ್ಸುಗಳಿಗೆ, ಅಷ್ಟೇ ಪ್ರೀತಿಯಿಂದ ಒಪ್ಪಿಕೊಳ್ಳುವ ಪೋಷಕರಿಗೆ, ಧಿಕ್ಕರಿಸಿ ಹೋಗು ಹೋಗುವ ಹುಡುಗ/ಹುಡುಗಿಯರಿಗೂ ಮತ್ತು ಪ್ರೀತಿ ಎಂದರೇನು ಎಂಬುದು ಗೊತ್ತೇ ಇಲ್ಲದ ಜೀವಗಳಿಗೂ ಹ್ಯಾಪಿ ವ್ಯಾಲೆಂಟನ್ಸ್‌ ಡೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.