ADVERTISEMENT

ಒಟಿಟಿ ಜಮಾನದಲ್ಲೂ ರಂಗಭೂಮಿ ಕಲೆ ಜೀವಂತ: ವಸಂತ ಹೊರಟ್ಟಿ

ಚಿಣ್ಣರ ರಂಗಮೇಳ ಸಮಾರೋಪ

​ಪ್ರಜಾವಾಣಿ ವಾರ್ತೆ
Published 14 ಮೇ 2022, 8:37 IST
Last Updated 14 ಮೇ 2022, 8:37 IST
   

ಹುಬ್ಬಳ್ಳಿ: 'ಒಟಿಟಿ ಜಮಾನದಲ್ಲಿ ರಂಗಭೂಮಿ ಕಲೆ ತನ್ನ ಗಟ್ಟಿತನ ಕಾಯ್ದುಕೊಂಡು ವೇದಿಕೆ ಪಡೆಯುತ್ತಿರುವುದು ಸಂತಸದ ಸಂಗತಿ' ಎಂದು ಆಕ್ಸಫರ್ಡ್ ಕಾಲೇಜು ಮುಖ್ಯಸ್ಥ ವಸಂತ ಹೊರಟ್ಟಿ ಹೇಳಿದರು.

ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಶನಿವಾರ ಅಭಿನಯ ಲೋಕ ಹಾಗೂ ಇತರ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಚಿಣ್ಣರ ರಂಗ ಮೇಳ–2022 ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

'ಬಹಳ ಪಾಲಕರಿಗೆ ಮಕ್ಕಳನ್ನು ನಾಟಕ ಕಲಾವಿದರನ್ನಾಗಿ ಮಾಡುವ ಇಚ್ಛೆ ಇರುತ್ತದೆ. ಮಕ್ಕಳಿಗೂ ನಾಟಕ ಕಲಿಕೆ ಬಗ್ಗೆ ಆಸಕ್ತಿ ಇರುತ್ತದೆ. ಆದರೆ, ಅದನ್ನು ಕಲಿಸುವವರು ಬಹಳ ಕಡಿಮೆ. ಇದರಿಂದಾಗಿ ನಾಟಕ ಕಲೆ ಗೌಣ ಆಗುತ್ತಿದೆ. ಆದರೆ, ಹುಬ್ಬಳ್ಳಿಯಲ್ಲಿ ವಿಶ್ವನಾಥ ಕುಲಕರ್ಣಿ ಸಮಾನ ಮನಸ್ಕರ ಜೊತೆ ನಾಟಕ ಕಲಿಕೆಯ ಸಂಸ್ಥೆ ತೆರೆದು, ನಾಟಕ ಪರಂಪರೆ ಬೆಳೆಸಲು ಮುಂದಾಗುತ್ತಿದ್ದಾರೆ' ಎಂದರು.

ADVERTISEMENT

ವಿವೇಕಾನಂದ ಸ್ಪೋರ್ಟ್ಸ್ ಆ್ಯಂಡ್ ಕಲ್ಚರ್ ಸಂಸ್ಥೆ ಮುಖ್ಯಸ್ಥ ಗುರುರಾಜ ಕುಲಕರ್ಣಿ, 'ಬೇಸಿಗೆ ಬಂದಾಗ ಮಕ್ಕಳಿಗೆ ನಾನಾಥರದ ಶಿಬಿರಗಳು ನಡೆಯುತ್ತವೆ‌. ಆದರೆ, ಅವಳಿ ನಗರದಲ್ಲಿ ಮೊದಲ ಬಾರಿಗೆ ನಾಟಕ ತರಬೇತಿ ಶಿಬಿರ ಹಮ್ಮಿಕೊಂಡಿರುವ ಅಭಿನಯ ಲೋಕ ಸಂಸ್ಥೆ ಕಾರ್ಯ ಶ್ಲಾಘನೀಯ. ತರಬೇತಿ ಪಡೆದ ಮಕ್ಕಳಿಂದ ಮುಂಬರುವ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ನಾಟಕ ಸ್ಪರ್ಧೆ ಆಯೋಜಿಸಲಾಗುವುದು' ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಜಿಲ್ಲಾ ಘಟಕದ ಡಾ. ಲಿಂಗರಾಜ ಅಂಗಡಿ, 'ಪಾಲಕರು ಮಕ್ಕಳನ್ನು ಪಾಠಕ್ಕಷ್ಟೇ ಸೀಮಿತವಾಗಿಸುತ್ತಾರೆ. ಅವರಿಗೆ ಅಂಕಗಳಿಕೆಯಷ್ಟೇ ಮುಖ್ಯ‌. ಅದರ ಬದಲು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಬೇಕು. ಹಾಗಾದಾಗ ಮಾತ್ರ ಮಕ್ಕಳು ಬದುಕಿನ ಪಾಠ ಕಲಿಯಲು ಸಾಧ್ಯ' ಎಂದರು.

ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್‌ನ ಸಕ್ಕರಿ ಬಾಬೂರಾವ್, ಎಂ.ಡಿ. ಮಳಗಿ, ಎ.ಸಿ. ಗೋಪಾಲ, ಶಿಬಿರದ ನಿರ್ದೇಶಕರಾದ ವಿಶ್ವನಾಥ ಕುಲಕರ್ಣಿ ಮತ್ತು ಪದ್ಮಾ ಕೊಡಗು ಇದ್ದರು.

ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ಮಕ್ಕಳು ಅಲಿಬಾಬಾ ಮತ್ತು ನಲವತ್ತು ಕಳ್ಳರು ಹಾಗೂ ಕಿಟ್ಟಿ ಕಥೆ ನಾಟಕ ಪ್ರದರ್ಶಿಸಿದರು. ಮಕ್ಕಳ ಮನೋಜ್ಞ ಅಭಿನಯ ಪ್ರೇಕ್ಷಕರನ್ನು ಮನಸೂರೆಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.