ADVERTISEMENT

ಟಿಕೆಟ್‌ ತಪಾಸಣೆ: ₹72.08 ಲಕ್ಷ ದಂಡ ವಸೂಲಿ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 9:16 IST
Last Updated 8 ಫೆಬ್ರುವರಿ 2020, 9:16 IST

ಹುಬ್ಬಳ್ಳಿ: ಟಿಕೆಟ್‌ ರಹಿತ ಪ್ರಯಾಣ ಮಾಡಿದವರನ್ನು ಪತ್ತೆ ಹೆಚ್ಚಿರುವ ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗದ ಅಧಿಕಾರಿಗಳು ಜನವರಿಯಲ್ಲಿ ₹72.08 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

ಟಿಕೆಟ್‌ ರಹಿತ ಪ್ರಯಾಣ ಮತ್ತು ಶುಲ್ಕ ಪಾವತಿಸದೆ ಲಗೇಜ್‍ಗಳನ್ನು ಕೊಂಡೊಯ್ಯುತ್ತಿದ್ದ 14,910 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಪ್ರಯಾಣಿಕರಿಂದ ದಂಡ ವಸೂಲಿ ಮಾಡುವ ಜೊತೆಗೆ ಅವರಿಗೆ ಟಿಕೆಟ್‌ ಖರೀದಿಸದೇ ಪ್ರಯಾಣಿಸದಂತೆ ಎಚ್ಚರಿಕೆ ನೀಡಲಾಗಿದೆ.

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜನವರಿ ಅಂತ್ಯದವರೆಗೆ ಒಟ್ಟು 1,35,065 ಪ್ರಕರಣಗಳನ್ನು ದಾಖಲಿಸಿ ₹6.6 ಕೋಟಿ ದಂಡ ವಿಧಿಸಲಾಗಿದೆ. ಕಳೆದ ಆರ್ಥಿಕ ವರ್ಷಕ್ಕೆ ಇದನ್ನು ಹೋಲಿಸಿದರೆ ಈ ವರ್ಷ ಪ್ರಕರಣ ಹಾಗೂ ದಂಡ ವಸೂಲಿಯ ಪ್ರಮಾಣ ಶೇ 2.86ರಷ್ಟು ಹೆಚ್ಚಾಗಿದೆ.

ADVERTISEMENT

₹ 988.30 ಕೋಟಿ ಮೊತ್ತದಲ್ಲಿ ಹೊಸ ಮಾರ್ಗ

ಬೆಳಗಾವಿ–ಕಿತ್ತೂರು–ಧಾರವಾಡ ನಡುವೆ ನೇರ ರೈಲು ಓಡಿಸಬೇಕು ಎನ್ನುವ ಈ ಭಾಗದ ಜನರ ಹಲವು ದಶಕಗಳ ಬೇಡಿಕೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ₹ 988.30 ಕೋಟಿ ಮೊತ್ತದಲ್ಲಿ ಹೊಸದಾಗಿ ಮಾರ್ಗ ನಿರ್ಮಿಸುವ ಯೋಜನೆಗೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಮಂಜೂರಾತಿ ಲಭಿಸಿದೆ.

73 ಕಿ.ಮೀ. ಉದ್ದದ ಮಾರ್ಗ ಇದಾಗಿದೆ. ತಿಂಗಳ ಹಿಂದಷ್ಟೇ ನೈರುತ್ಯ ರೈಲ್ವೆಯಿಂದ ಯೋಜನಾ ವರದಿ ತಯಾರಿಸಿ ಸಲ್ಲಿಸಿತ್ತು. ಅದಕ್ಕೆ ಮಂಜೂರಾತಿ ಕೊಡಿಸುವಲ್ಲಿ ಇಲ್ಲಿನ ಸಂಸದರೂ ಆಗಿರುವ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಯಶಸ್ವಿಯಾಗಿದ್ದಾರೆ. ತವರಿಗೆ ದೊಡ್ಡ ಕೊಡುಗೆಯನ್ನೇ ಕೊಡಿಸಿದ್ದಾರೆ. ಇದು, ಇಲ್ಲಿನ ಜನರ ಸಂತಸಕ್ಕೆ ಕಾರಣವಾಗಿದೆ.‌

ಮಾರ್ಗ ನಿರ್ಮಾಣವಾದಲ್ಲಿ, ಈ ರೈಲು ಧಾರವಾಡದಿಂದ ಕ್ಯಾರಕೊಪ್ಪ, ಕಿತ್ತೂರು, ಹಿರೆಬಾಗೇವಾಡಿ, ಎಂ.ಕೆ.ಹುಬ್ಬಳ್ಳಿ, ಕೆ.ಕೆ. ಕೊಪ್ಪ, ಯಳ್ಳೂರು ಮಾರ್ಗವಾಗಿ ಬೆಳಗಾವಿ ತಲುಪಲಿದೆ. 11 ನಿಲ್ದಾಣಗಳನ್ನು ನಿರ್ಮಿಸಲು ಸ್ಥಳ ಗುರುತಿಸಲಾಗಿದೆ. ಮಾರ್ಗದಲ್ಲಿ 15 ಮೇಲ್ಸೇತುವೆ ಸೇರಿ 140 ಸೇತುವೆಗಳನ್ನು ನಿರ್ಮಿಸಬೇಕಾಗುತ್ತದೆ ಎಂದು ಯೋಜಿಸಲಾಗಿದೆ.

ಚಿಂಚಲಿಯಲ್ಲಿ ರೈಲು ತಾತ್ಕಾಲಿಕ ನಿಲುಗಡೆ

ಹುಬ್ಬಳ್ಳಿ: ಮಾಯಕ್ಕ ದೇವಿ ಜಾತ್ರೆಯ ಅಂಗವಾಗಿ ಫೆ. 9ರಿಂದ 18ರ ತನಕ ರಾಯಬಾಗ ತಾಲ್ಲೂಕಿನ ಚಿಂಚಲಿಯಲ್ಲಿ ಕೆಲ ರೈಲುಗಲು ಒಂದು ನಿಮಿಷ ತಾತ್ಕಾಲಿಕವಾಗಿ ನಿಲುಗಡೆಯಾಗಲಿವೆ.

ಮಂಗಳೂರು–ಕೊಲ್ಹಾಪುರ ಎಕ್ಸ್‌ಪ್ರೆಸ್‌, ತಿರುಪತಿ–ಕೊಲ್ಹಾಪುರ ಎಕ್ಸ್‌ಪ್ರೆಸ್‌, ಕೊಲ್ಹಾಪುರ ಎಕ್ಸ್‌ಪ್ರೆಸ್‌–ಮಂಗಳೂರು ರೈಲು ನಿಲ್ಲಲಿವೆ.

ಮುಂದುವರಿಕೆ: ವಾಸ್ಕೋಡಗಾಮ–ಬೆಳಗಾವಿ ನಡುವೆ ವಾರದಲ್ಲಿ ಎರಡು ದಿನ ಸಂಚರಿಸುವ ಪ್ಯಾಸೆಂಜರ್‌ ವಿಶೇಷ ರೈಲಿನ ಸಂಚಾರವನ್ನು ಮುಂದುವರಿಸಲಾಗಿದೆ. ಮೊದಲಿನ ವೇಳಾಪಟ್ಟಿ ಪ್ರಕಾರ ಈ ರೈಲಿನ ಸಂಚಾರ ಫೆ. 15ಕ್ಕೆ ಕೊನೆಗೊಳ್ಳುತ್ತಿತ್ತು.

ರೈಲು ಸಂಚಾರ ರದ್ದು: ಗದುಗಿನಲ್ಲಿ ರೈಲ್ವೆ ಸಂಬಂಧಿತ ಕಾಮಗಾರಿ ನಡೆಯಲಿರುವ ಕಾರಣ ಫೆ. 8ರಂದು ಹುಬ್ಬಳ್ಳಿ–ಸೊಲ್ಲಾಪುರ ಪ್ಯಾಸೆಂಜರ್‌, ಧಾರವಾಡ–ಸೊಲ್ಲಾಪುರ ಪ್ಯಾಸೆಂಜರ್ ರೈಲು ಸಂಚಾರ ರದ್ದು ಮಾಡಲಾಗಿದೆ.

9ರಂದು ಸೊಲ್ಲಾಪುರ–ಹುಬ್ಬಳ್ಳಿ ಪ್ಯಾಸೆಂಜರ್ ಸಂಚಾರ ಕೂಡ ರದ್ದಾಗಿದೆ. 8ರಂದು ಹುಬ್ಬಳ್ಳಿ–ಗಂಗಾವತಿ ನಡುವಿನ ರೈಲು ಸಂಚಾರವನ್ನು ಎರಡೂ ಕಡೆಯಿಂದ ರದ್ದು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.