ADVERTISEMENT

‘ಸ್ಮಾರ್ಟ್‌’ ಕೆಲಸಕ್ಕೆ ಅಗ್ರಸ್ಥಾನ

27ನೇ ಸ್ಥಾನದಿಂದ 13ಕ್ಕೆ ಜಿಗಿದ ಹುಬ್ಬಳ್ಳಿ–ಧಾರವಾಡ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 6:00 IST
Last Updated 23 ನವೆಂಬರ್ 2020, 6:00 IST

ಹುಬ್ಬಳ್ಳಿ: ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಅವಳಿ ನಗರಗಳಿಗೆ ಮಂಜೂರಾದ ಒಟ್ಟು 57 ಯೋಜನೆಗಳ ಪೈಕಿ 43 ಯೋಜನೆಗಳ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಅಂಶದಿಂದಾಗಿ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಪ್ರಕಟಿಸಿರುವ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಹುಬ್ಬಳ್ಳಿ–ಧಾರವಾಡ ರಾಜ್ಯದಲ್ಲಿ ಅಗ್ರಸ್ಥಾನ ಸಂಪಾದಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ 13ನೇ ಸ್ಥಾನ ಲಭಿಸಿದೆ. ಕಳೆದ ವಾರ ಪ್ರಕಟಿಸಿದ್ದ ಪಟ್ಟಿಯಲ್ಲಿ 27ನೇ ಸ್ಥಾನದಲ್ಲಿತ್ತು.

57 ಯೋಜನೆಗಳಲ್ಲಿ ಹತ್ತು ಕಾಮಗಾರಿಗಳು ಪೂರ್ಣಗೊಂಡಿದ್ದು, ನಾಲ್ಕು ಯೋಜನೆಗಳು ಟೆಂಡರ್‌ ಹಂತದಲ್ಲಿವೆ. ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ₹65 ಕೋಟಿ ವೆಚ್ಚದಲ್ಲಿ ಎಲ್‌ಇಡಿ ಬೀದಿದೀಪಗಳ ಅವಳಡಿಕೆಗೆ ಕಾರ್ಯಾದೇಶ ನೀಡಲಾಗಿದೆ. ಈ ಕಾರ್ಯದಿಂದ ಹೆಚ್ಚು ಅಂಕಗಳು ಲಭ್ಯವಾಗಿವೆ. ಈ ವಾರದಲ್ಲಿ ಮೂರು ಯೋಜನೆಗಳ ಯೋಜನಾ ವೆಚ್ಚವಾದ ₹54.24 ಕೋಟಿಗೆ ಟೆಂಡರ್‌ ಅಹ್ವಾನಿಸಲಾಗಿದೆ ಎಂದು ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್‌ ಸಿಟಿ ಯೋಜನೆಯ ವಿಶೇಷಾಧಿಕಾರಿ ಎಸ್.ಎಚ್. ನರೇಗಲ್ ತಿಳಿಸಿದ್ದಾರೆ.

ಹುಬ್ಬಳ್ಳಿ ಹೊರವಲಯದ ತಾರಿಹಾಳ ಸಮೀಪ ₹150 ಕೋಟಿ ವೆಚ್ಚದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಟೆಂಡರ್ ಕರೆಯುವುದು ಮಾತ್ರ ಬಾಕಿಯಿದೆ.

ADVERTISEMENT

‘ಚಾಲ್ತಿಯಲ್ಲಿರುವ ಹತ್ತು ಯೋಜನೆಗಳ ಅಂದಾಜು ಮೊತ್ತ ₹96 ಕೋಟಿಯಾಗಿದ್ದು, 2021ರ ಜನವರಿ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿವೆ. ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ರವಿ ಕುಮಾರ್ ಸುರಪುರ ಅವರು ನಡೆಸಿದ ಸಭೆಯಲ್ಲಿ ಯೋಜಿತ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಗುಣಮಟ್ಟದಲ್ಲಿ ರಾಜೀ ಇಲ್ಲದಂತೆ ಮುಗಿಸಬೇಕು ಎಂದು ಸೂಚಿಸಿದ್ದರು. ಆದ್ದರಿಂದ ಕಾಮಗಾರಿ ಚುರುಕುಗೊಳಿಸಲಾಗಿದೆ. ಜನವರಿಯಲ್ಲಿ ಮುಗಿಯಬೇಕಿದ್ದ ಕಾಮಗಾರಿಗಳನ್ನು ಡಿಸೆಂಬರ್ ವೇಳೆಗೆ ಮುಗಿಸಲು ಯೋಜನೆ ರೂಪಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.