ಮೇಲ್ಸೇತುವೆ ಕಾಮಗಾರಿಗೆ ಹುಬ್ಬಳ್ಳಿಯ ಈದ್ಗಾ ಮೈದಾನದ ಬಳಿ ಮರಗಳನ್ನು ಕಡಿದು ತುಂಡಗಳನ್ನು ವಾಹನದಲ್ಲಿ ಸಾಗಿಸಲಾಯಿತು
ಹುಬ್ಬಳ್ಳಿ: ನಗರದಲ್ಲಿ ಮೇಲ್ಸೇತುವೆ ಕಾಮಗಾರಿಗಾಗಿ 99 ಮರಗಳಿಗೆ ಕೊಡಲಿಪೆಟ್ಟು ಬೀಳಲಿದೆ. ಈಗಾಗಲೇ 10ಕ್ಕೂ ಹೆಚ್ಚು ಮರಗಳನ್ನು ಕಡಿಯಲಾಗಿದ್ದು, ಇನ್ನೆರಡು ತಿಂಗಳಲ್ಲಿ ಇನ್ನಷ್ಟು ಮರಗಳು ನೆಲಸಮಗೊಳ್ಳಲಿವೆ. ಆದರೆ, ಇದಕ್ಕೆ ಪರ್ಯಾಯವಾಗಿ ಗಿಡಗಳನ್ನು ನೆಡಲು ಮತ್ತು ಬೆಳೆಸಲು ಜಾಗವನ್ನು ಗುರುತಿಸಲಾಗಿಲ್ಲ.
ಯೋಜನೆಯ ಭಾಗವಾಗಿ ಈಗಾಗಲೇ ಬಸವ ವನ ಮತ್ತು ಈದ್ಗಾ ಮೈದಾನದ ಬಳಿ ಮರಗಳನ್ನು ಕಡಿಯಲಾಗಿದ್ದು, ಲ್ಯಾಮಿಂಗ್ಟನ್ ರಸ್ತೆ, ಸಿದ್ದಪ್ಪ ಕಂಬಳಿ ರಸ್ತೆಯ ಅಕ್ಕಪಕ್ಕದಲ್ಲಿನ 70ಕ್ಕೂ ಹೆಚ್ಚು ಮರಗಳು ಸೆಪ್ಟೆಂಬರ್ ವೇಳೆಗೆ ಅಸ್ತಿತ್ವ ಕಳೆದುಕೊಳ್ಳಲಿವೆ. ದಶಕಗಳಿಂದ ಇದ್ದ ಹಸಿರು ವಾತಾವರಣ ಕಣ್ಮರೆಯಾಗಲಿದೆ.
‘ಎಲ್ಲಿಯೇ ಗಿಡ, ಮರಗಳನ್ನು ಕಡಿಯಬೇಕಿದ್ದರೂ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು. ಒಂದು ಮರ ಕಡಿದರೆ, 10 ಗಿಡಗಳನ್ನು ಬೆಳೆಸಬೇಕು. ಅದಕ್ಕೆ ತಗುಲುವ ವೆಚ್ಚವನ್ನೂ ಇಲಾಖೆಗೆ ಪಾವತಿಸಬೇಕು. ಆದರೆ, ಮೇಲ್ಸೇತುವೆ ಕಾಮಗಾರಿಗಾಗಿ ಮರಗಳನ್ನು ಕಡಿಯಲು ಇಲಾಖೆಯು ಅನುಮತಿ ನೀಡಿದೆಯೇ ಹೊರತು ಹೊಸದಾಗಿ ಗಿಡಗಳನ್ನು ಎಲ್ಲಿ ಬೆಳೆಸಬೇಕು ಎಂಬುದನ್ನು ಸೂಚಿಸಿಲ್ಲ’ ಎಂದು ಪರಿಸರವಾದಿ ಶಂಕರ ಕುಂಬಿ ತಿಳಿಸಿದರು.
‘ಬಿಆರ್‌ಟಿಎಸ್ ಬಸ್ ಯೋಜನೆ, ರಸ್ತೆ ವಿಸ್ತರಣೆ ಹಾಗೂ ಇನ್ನಿತರ ಯೋಜನೆಗಳಿಗಾಗಿ ಅವಳಿ ನಗರದಲ್ಲಿನ ಸಾವಿರಾರು ಮರಗಳನ್ನು ನಾಶಪಡಿಸಲಾಗಿದೆ. ಇದೀಗ ಮೇಲ್ಸೇತುವೆಗೆ 100ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಉದ್ದೇಶಿಸಲಾಗಿದೆ. ಮೇಲ್ಸೇತುವೆ ಕಾಮಗಾರಿಗೆ ತೀರಾ ಅನಿವಾರ್ಯವಿದ್ದರಷ್ಟೇ ಮರಗಳನ್ನು ಕಡಿಯಬೇಕೆ ಹೊರತು ಅನಗತ್ಯವಾಗಿ ಪರಿಸರಕ್ಕೆ ಹಾನಿ ಉಂಟು ಮಾಡಬಾರದು’ ಎಂದು ಅವರು ಹೇಳಿದರು.
ಗೋಕುಲ ರಸ್ತೆಯ ಬನ್ನಿಗಿಡ ಸಮೀಪದಿಂದ ಮೇಲ್ಸೇತುವೆ ಆರಂಭವಾಗಿ, ಹೊಸೂರು ವೃತ್ತ, ಬಸವವನ ಮತ್ತು ಲಕ್ಷ್ಮಿವೇ ಬ್ರಿಡ್ಜ್‌ನಿಂದ ಚನ್ನಮ್ಮ ವೃತ್ತದ ಮೂಲಕ ವಿಜಯಪುರ ರಸ್ತೆಯ ಹಳೇಕೋರ್ಟ್ ವೃತ್ತ, ಸರ್ವೋದಯ ವೃತ್ತ ಮತ್ತು ಗದಗ ರಸ್ತೆಯ ಸಿದ್ದಪ್ಪಕಂಬಳಿ ಮಾರ್ಗ ಮತ್ತು ಲ್ಯಾಮಿಂಗ್ಟನ್ ರಸ್ತೆವರೆಗೂ ವಿಸ್ತರಿಸಲಿದೆ.
ಒಟ್ಟು 3.9 ಕಿ.ಮೀ. ಉದ್ದದ ಮೇಲ್ಸೇತುವೆ ಮಾರ್ಗಕ್ಕೆ ರಸ್ತೆಯ ಅಕ್ಕಪಕ್ಕದಲ್ಲಿನ 9,222 ಚದರ ಮೀಟರ್ ಜಾಗದ ಸ್ವಾಧೀನ ಪ್ರಕ್ರಿಯೆ ನಡೆದಿದೆ. ಕಾಮಗಾರಿ ಗುತ್ತಿಗೆ ಪಡೆದ ಝೆಂಡು ಕಂಪನಿಯು ಅರಣ್ಯ ಇಲಾಖೆ ಜೊತೆ ಸಮೀಕ್ಷೆ ನಡೆಸಿ, ತೆರವು ಆಗಲಿರುವ ಮರ–ಗಿಡಗಳಿಗೆ ಗುರುತು ಹಾಕಿದೆ. ಅವುಗಳ ತೆರವಿಗೆ ಉಪಗುತ್ತಿಗೆ ನೀಡಿದೆ.
----
ಒಂದು ಮರಕ್ಕೆ ಹತ್ತು ಗಿಡ ಬೆಳೆಸಲು ಜಾಗ ಗುರುತಿಸಿ ಪರಿಸರ ರಕ್ಷಿಸಬೇಕು. ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ಪರಿಸರಕ್ಕೆ ಹಾನಿ ಮಾಡಬಾರದು.
ಶಂಕರ ಕುಂಬಿ ಪರಿಸರವಾದಿ
‘ಇಲಾಖೆಗೆ ಒಪ್ಪಿಗೆ ಪತ್ರ ನೀಡಿದ್ದೇವೆ’
‘ಯೋಜನೆಗೆ ಸಂಬಂಧಿಸಿ ಮರಗಳನ್ನು ಕಟಾವಿಗೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಒಂದು ಮರ ಕಡಿದರೆ ಹತ್ತು ಗಿಡ ಬೆಳೆಸಬೇಕು ಎಂಬ ವಿಷಯದ ಕುರಿತು ಕೆಲವರು ಹಸಿರು ನ್ಯಾಯಪೀಠದಿಂದ ತಡೆ ತಂದಿದ್ದಾರೆ. ಅದು ತೆರವು ಆಗುವವರೆಗೆ ನಾವು ಗಿಡ ಬೆಳೆಸಲು ಆಗದು. ಕೋರ್ಟ್ ತೀರ್ಪು ಏನು ಬರುವುದೋ ಅದನ್ನು ಪಾಲಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ. ಅದಕ್ಕೆ ಒಪ್ಪಿಗೆ ಪತ್ರವನ್ನೂ ನೀಡಿದ್ದೇವೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್ ವಿಶಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.