ADVERTISEMENT

ಹುಬ್ಬಳ್ಳಿ: ಬುಡಕಟ್ಟು ಜನರಿಗೂ ಜಾಬ್‌ಕಾರ್ಡ್‌

ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆಯಿಂದ ಅಭಿಯಾನ; ಜನರು ನಿರಾಳ

ಸ್ಮಿತಾ ಶಿರೂರ
Published 12 ಜುಲೈ 2025, 5:21 IST
Last Updated 12 ಜುಲೈ 2025, 5:21 IST
ಅಳ್ನಾವರ ತಾಲ್ಲೂಕಿನ ಸೂಳಿಕಟ್ಟಿ ಗ್ರಾಮ ಪಂಚಾಯಿತಿಯ ಬೈಚವಾಡ ಗ್ರಾಮದ ಸಿದ್ದಿ ಜನಾಂಗದ ಜನರು ಈಚೆಗೆ ನರೇಗಾ ಯೋಜನೆಯ ಅಡಿ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಭಾಗವಹಿಸಿದ್ದರು
ಅಳ್ನಾವರ ತಾಲ್ಲೂಕಿನ ಸೂಳಿಕಟ್ಟಿ ಗ್ರಾಮ ಪಂಚಾಯಿತಿಯ ಬೈಚವಾಡ ಗ್ರಾಮದ ಸಿದ್ದಿ ಜನಾಂಗದ ಜನರು ಈಚೆಗೆ ನರೇಗಾ ಯೋಜನೆಯ ಅಡಿ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಭಾಗವಹಿಸಿದ್ದರು   

ಹುಬ್ಬಳ್ಳಿ: ಸೂಕ್ತ ದಾಖಲೆಗಳಿಲ್ಲದ ಕಾರಣ ಉದ್ಯೋಗ ಖಾತ್ರಿ ಯೋಜನೆಯ ಜಾಬ್ ಕಾರ್ಡ್ ಮಾಡಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದ ಅರಣ್ಯ ಸಮೀಪದ ನಿವಾಸಿಗಳು ಹಾಗೂ ಬುಡಕಟ್ಟು ಸಮುದಾಯಗಳು ಈಗ ನಿಟ್ಟುಸಿರು ಬಿಡುವಂತಾಗಿದೆ.

ಜಿಲ್ಲೆಯ ಅಳ್ನಾವರ ಹಾಗೂ ಕಲಘಟಗಿ ತಾಲ್ಲೂಕುಗಳಲ್ಲಿ ಅರಣ್ಯ ಸಮೀಪ ವಾಸವಾಗಿರುವ ಕುಟುಂಬಗಳು ಹಾಗೂ ಬುಡಕಟ್ಟು ಸಮುದಾಯಗಳನ್ನು ಗುರುತಿಸಿರುವ ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆಯ ಸಹಯೋಗದಲ್ಲಿ ಅಂಥವರಿಗೆ ಜಾಬ್ ಕಾರ್ಡ್ ಹಾಗೂ ಉದ್ಯೋಗ ನೀಡುವ ಅಭಿಯಾನ ನಡೆಸಿದೆ.

ತಾಲ್ಲೂಕು ಪಂಚಾಯಿತಿ ಇಒ, ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಜಿಲ್ಲಾ ಐಇಸಿ (ಮಾಹಿತಿ ಶಿಕ್ಷಣ ಮತ್ತು ಸಂವಹನ) ಸಂಯೋಜಕರು ಅರಣ್ಯದ ಸರಹದ್ದುಗಳಲ್ಲಿರುವ ಬುಡಕಟ್ಟು ಸಮುದಾಯಗಳ ಸದಸ್ಯರ ಮನೆಗೆ ಭೇಟಿ ನೀಡಿ ಅವರಿಗೆ ಜಾಬ್ ಕಾರ್ಡ್ ನೀಡಿದ್ದಾರೆ.

ADVERTISEMENT

‘ಮೇ ತಿಂಗಳಿನಲ್ಲಿ ಅಳ್ನಾವರ ತಾಲ್ಲೂಕಿನ ಹೊನ್ನಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿವನಗರ ಹಾಗೂ ಕುಂಬಾರಕೊಪ್ಪ, ಕಲಘಟಗಿ ತಾಲ್ಲೂಕಿನ ಸೂಳಿಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಂಬವಳ್ಳಿ ಹಾಗೂ ಬೈಚಾಪುರಗಳಲ್ಲಿ ಅರಣ್ಯ ಸಮೀಪದ ಒಟ್ಟು  60 ನಿವಾಸಿಗಳ ಮನೆಗೆ ತೆರಳಿ ನರೇಗಾ ಜಾಬ್ ಕಾರ್ಡ್ ವಿತರಿಸಲಾಗಿದೆ. ಅವರಲ್ಲಿ ವಾಸದ ದಾಖಲೆ ಪತ್ರಗಳು ಇಲ್ಲದಿದ್ದರೂ ಉದ್ಯೋಗ ಚೀಟಿ ನೀಡಿ ಅವರಿಗೆ ಸ್ಥಳದಲ್ಲೇ ಉದ್ಯೋಗ ಸಿಗುವಂತೆ ಮಾಡಲಾಗಿದೆ. ಅರಣ್ಯದ ಮೇಲಿನ ಅವಲಂಬನೆ ಕಡಿಮೆ ಮಾಡಲು ಯತ್ನಿಸಲಾಗಿದೆ’ ಎಂದು ಜಿಲ್ಲಾ ಐಇಸಿ ಸಂಯೋಜಕ ರೇವಣಸಿದ್ದಪ್ಪ ಎಸ್., ತಿಳಿಸಿದ್ದಾರೆ.

ಕಲಘಟಗಿ ಹಾಗೂ ಅಳ್ನಾವರ ತಾಲ್ಲೂಕುಗಳಲ್ಲಿ ಅರಣ್ಯಗಳ ಬಳಿ ವಾಸಿಸುವ ಸಿದ್ದಿ, ಹರಣಶಿಕಾರಿ ಹಾಗೂ ಗೌಳಿ ಸಮುದಾಯಗಳಲ್ಲಿ ಯಾರ ಬಳಿ ಜಾಬ್‌ ಕಾರ್ಡ್‌ ಇಲ್ಲ ಎಂಬುದನ್ನು ಗುರುತಿಸಿ ಅವರ ಬಳಿ ಆಧಾರ್‌ ಕಾರ್ಡ್‌ ಹಾಗೂ ಇತರ ಯಾವುದೇ ದಾಖಲೆಗಳು ಇಲ್ಲದೇ ಇದ್ದರೂ, ಗ್ರಾಮ ಪಂಚಾಯಿತಿಯಲ್ಲಿರುವ ಪಟ್ಟಿಯ ಆಧಾರದ ಮೇಲೆ ನರೇಗಾ ಜಾಬ್ ಕಾರ್ಡ್ ಮಾಡಿಸಿಕೊಡಲಾಗಿದೆ. ಇವರಿಗೆ ಗಿಡ ಬೆಳೆಸುವುದು, ಅರಣ್ಯ ಸಮೀಪ ಗಿಡಗಂಟಿ ತೆಗೆದು ಸ್ವಚ್ಛಗೊಳಿಸುವುದು, ಗುಡ್ಡಗಳಲ್ಲಿ ಟ್ರೆಂಚ್‌ಗಳನ್ನು ತೆಗೆಯುವುದು ಮೊದಲಾದ ಕೆಲಸ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

2024-25 ಹಾಗೂ 2025-26ನೇ ಸಾಲಿನಲ್ಲಿ ಒಟ್ಟು ಅರಣ್ಯ ಸಮೀಪದ 78 ಜನರು ಜಾಬ್‌ಕಾರ್ಡ್‌ ಪಡೆದಿದ್ದು, 3,120 ಮಾನವ ದಿನಗಳ ಕೆಲಸ ಮಾಡಿದ್ದಾರೆ. ಕೂಲಿ, ಗಡ್ಡೆ-ಗೆಣಸು ಬೆಳೆಯುವುದು, ಅರಣ್ಯ ಉತ್ಪನ್ನಗಳ ಸಂಗ್ರಹ ಹಾಗೂ ಮಾರಾಟ ಬುಡಕಟ್ಟು ಜನರ ಪ್ರಮುಖ ಉದ್ಯೋಗವಾಗಿದೆ. ಈಗ ನರೇಗಾ ಕೂಲಿಯೂ ಸಿಗುವುದರಿಂದ ಅವರ ಜೀವನಮಟ್ಟದಲ್ಲಿ ಸುಧಾರಣೆ ಕಾಣಲಿದೆ ಎಂಬ ನಿರೀಕ್ಷೆ ಮೂಡಿದೆ.

‘ದಿಂಬುವಳ್ಳಿಯಲ್ಲಿ ನಮ್ಮ ಸಮುದಾಯದ ಎಲ್ಲರಿಗೂ ಜಾಬ್ ಕಾರ್ಡ್ ಸಿಕ್ಕಿದ್ದು, ಎಲ್ಲ ಮಹಿಳೆಯರೂ ನರೇಗಾ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಕೆರೆ, ಬದು ನಿರ್ಮಾಣ ಹಾಗೂ ಅರಣ್ಯದ ಕೆಲಸಗಳನ್ನು ಪ್ರಮುಖವಾಗಿ ಮಾಡಿಸಲಾಗುತ್ತಿದೆ. ಸ್ಥಳದಲ್ಲೇ ಉದ್ಯೋಗ ಹಾಗೂ ಕೂಲಿ ಸಿಗುತ್ತಿರುವುದರಿಂದ ನೆಮ್ಮದಿ ಕಾಣುವಂತಾಗಿದೆ’ ಎಂದು ಸಿದ್ದಿ ಸಮುದಾಯದವರಾದ ಸೂಳಿಕಟ್ಟಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಖಾಜಾಬಿ ಗೌಸುಸಾಬ್ ತಿಳಿಸಿದರು.

ಸೂಳಿಕಟ್ಟಿ ಗ್ರಾಮ ಪಂಚಾಯಿತಿಯ ಬೈಚವಾಡ ಗ್ರಾಮದ ಸಿದ್ದಿ ಸಮುದಾಯದವರಿಗೆ ಈಚೆಗೆ ಉದ್ಯೋಗ ಖಾತ್ರಿ ಯೋಜನೆಯ ಜಾಬ್‌ ಕಾರ್ಡ್‌ ನೀಡಲಾಯಿತು

‘265 ಮಂದಿಗೆ ಜಾಬ್‌ ಕಾರ್ಡ್‌’:

‘ಮಾನವ-ಪ್ರಾಣಿ ಸಂಘರ್ಷ ತಡೆಯಲು ಅರಣ್ಯ ಇಲಾಖೆಯ ಸಹಯೋಗದಲ್ಲಿ ವನ್ಯಜೀವಿ ವಲಯದ ಆಸುಪಾಸಿನಲ್ಲಿರುವ ಜನರಿಗೆ ಜಾಬ್‌ಕಾರ್ಡ್ ವಿತರಿಸುವ ವಿಶೇಷ ಅಭಿಯಾನವನ್ನು ಈಚೆಗೆ ಹೊನ್ನಾಪುರ ಹಾಗೂ ಸೂಳಿಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಸಲಾಯಿತು. ಜಿಲ್ಲೆಯಲ್ಲಿ ವನ್ಯಪ್ರಾಣಿಗಳ ಹಾವಳಿ ಮಲೆನಾಡಿನಷ್ಟು ತೀವ್ರವಾಗಿ ಇಲ್ಲದಿದ್ದರೂ ಅರಣ್ಯ ಸಮೀಪದ ಜನರಿಗೆ ಉದ್ಯೋಗ ಸಮಸ್ಯೆ ಇದ್ದೇ ಇದೆ. ಇಲ್ಲಿಯವರೆಗೆ ಜಿಲ್ಲೆಯ ಅರಣ್ಯ ಸಮೀಪದ 265 ಮಂದಿಯನ್ನು ಗುರುತಿಸಿ ಉದ್ಯೋಗ ಖಾತ್ರಿ ಯೋಜನೆಯ ಜಾಬ್‌ ಕಾರ್ಡ್‌ ನೀಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.