ADVERTISEMENT

ವಿವಾಹಿತ ಮಹಿಳೆಯೊಂದಿಗೆ ಸಂಬಂಧ ಬೆಳೆಸಿ ವಂಚನೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 16:24 IST
Last Updated 4 ಜನವರಿ 2021, 16:24 IST

ಹುಬ್ಬಳ್ಳಿ: ಮೂವರು ಮಕ್ಕಳಿರುವ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿ, ಮಗು ಜನಿಸಿದಾಗ ಮದುವೆಗೆ ನಿರಾಕರಿಸಿದ ವ್ಯಕ್ತಿಯ ವಿರುದ್ಧ ನವನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೈರಿದೇವರಕೊಪ್ಪದ ಕಳ್ಳಿ ಓಣಿ ನಿವಾಸಿ ಸಿದ್ರಾಮ ಚಿಕ್ಕಮಠ ವಿರುದ್ಧ ಮಹಿಳೆ ಪ್ರಕರಣ ದಾಖಲಿಸಿದ್ದಾರೆ. 2007ರಲ್ಲಿ ಆ ಮಹಿಳೆ ವರೂರಿನ ನಿವಾಸಿಯೊಬ್ಬರ ಜೊತೆ ಮದುವೆಯಾಗಿದ್ದರು. ಐದು ವರ್ಷದ ಬಳಿಕ ಗಂಡನ ಆರೋಗ್ಯ ಕೆಟ್ಟಿದ್ದರಿಂದ ತವರು ಮನೆಗೆ ವಾಪಸ್‌ ಬಂದಿದ್ದಳು. ಆ ವೇಳೆ ಸಿದ್ರಾಮ ಎಂಬಾತ ಮಕ್ಕಳಿಗೆ ಸಹಾಯ ಮಾಡುವ ನೆಪದಲ್ಲಿ ಸ್ನೇಹ ಬಯಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. 2018ರ ಅಕ್ಟೋಬರ್‌ನಲ್ಲಿ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮದುವೆ ವಿಷಯ ಪ್ರಸ್ತಾಪಿಸಿದಾಗ ನಿರಾಕರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸ್ಕ್ರೀನ್‌ಶಾಟ್‌ ವೈರಲ್‌: ಪ್ರೀತಿಸಿ ಮದುವೆಯಾಗುತ್ತೇನೆ ಎಂದು ನಗರದ ಯುವತಿಗೆ ನಂಬಿಸಿದ ಕಲಬುರ್ಗಿಯ ಯುವಕನೊಬ್ಬ, ವಾಟ್ಸ್‌ಆ್ಯಪ್‌ ವಿಡಿಯೊ ಕಾಲ್‌ ಮೂಲಕ ಅಶ್ಲೀಲ ವಿಡಿಯೊಗಳ ಸ್ಕ್ರೀನ್‌ ಶಾಟ್‌ ತೆಗೆದಿಟ್ಟುಕೊಂಡು, ಅವಳ ಹೆಸರಲ್ಲಿಯೇ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಅವುಗಳನ್ನು ಪೋಸ್ಟ್‌ ಮಾಡಿದ್ದಾನೆ.

ADVERTISEMENT

ಕಲಬುರ್ಗಿ ಮೂಲದ ಸಚಿನ್‌ ಶರಣಬಸಪ್ಪ ಕಾರ್ಣಿಕ ವಿರುದ್ಧ ಯುವತಿ ಹುಬ್ಬಳ್ಳಿ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಇಲ್ಲಿಯ ಮ್ಯಾದರ ಓಣಿಯ 24 ವರ್ಷದ ಯವತಿಗೆ ಸಚಿನ್‌ ಆನ್‌ಲೈನ್‌ನಲ್ಲಿ ಪರಿಚಯವಾಗಿ, ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ್ದ.

‘ನೀನು ಬೇರೆಯರನ್ನು ಪ್ರೀತಿಸುತ್ತಿದ್ದೀಯ, ನಿಶ್ಚಿತಾರ್ಥ ಮಾಡಿಕೊಂಡಿದ್ದೀಯ’ ಎಂದು ಸ್ಕ್ರೀನ್‌ ಶಾಟ್‌ಗಳನ್ನು ಯುವತಿಯ ವಾಟ್ಸ್‌ಆ್ಯಪ್‌ಗೆ ಕಳುಹಿಸಿ ಹೆದರಿಸಿದ್ದ. ನಂತರ, ಮಾನ ಹರಾಜು ಹಾಕುತ್ತೇನೆ ಎಂದು ಅವಳ ಹೆಸರಲ್ಲಿಯೇ ನಕಲಿ ಫೇಸ್‌ಬುಕ್‌ ಖಾತೆ ತೆರೆದು ಪೋಸ್ಟ್‌ ಮಾಡಿ ವೈರಲ್‌ ಮಾಡಿದ್ದಾನೆ’ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಬೆಟ್ಟಿಂಗ್‌: ಒಡಿಶಾದಲ್ಲಿ ನಡೆಯುತ್ತಿರುವ ಒಡಿಶಾ ಕ್ರಿಕೆಟ್‌ ಲೀಗ್‌ ಟಿ–20 ಪಂದ್ಯದ ವೇಳೆ ಗೋಪನಕೊಪ್ಪದ ಶಿವ ಕಾಲೊನಿ ಹತ್ತಿರ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಸ್ಥಳೀಯ ನಿವಾಸಿ ಅಬ್ದುಲ್‌ ಶಿರೂರ್‌ನನ್ನು ಪೊಲೀಸರು ಬಂಧಿಸಿ, ಒಂದು ಮೊಬೈಲ್‌ ಹಾಗೂ ₹12ಸಾವಿರ ವಶಪಡಿಸಿಕೊಂಡಿದ್ದಾರೆ.

ಆತ್ಮಹತ್ಯೆ: ಇಲ್ಲಿಯ ಅಶೋಕನಗರ ಪೊಲೀಸ್‌ ಠಾಣೆಯ ಹಿಂಭಾಗ, ರೈಲ್ವೆ ಹಳಿ ಪಕ್ಕದ ಮರವೊಂದಕ್ಕೆ ವ್ಯಕ್ತಿಯೊಬ್ಬ ನೇಣು ಹಾಕೊಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿ ಸಾವು: ತೀವ್ರ ಅನಾರೋಗ್ಯದಿಂದ ಬಳುತ್ತಿದ್ದ ವ್ಯಕ್ತಿ ಸೋಮವಾರ ಇಲ್ಲಿಯ ಹಳೇ ಬಸ್ ನಿಲ್ದಾಣದಲ್ಲಿ ಮೃತಪಟ್ಟಿದ್ದಾನೆ. ಶಿವಳ್ಳಿ ಬಸ್ ನಿಲ್ಲುವ ಸ್ಥಳದ ಹಿಂಭಾಗ ಪ್ರಯಾಣಿಕರು ಕುಳಿತುಕೊಳ್ಳುವ ಆಸನದಲ್ಲಿ ಮೃತಪಟ್ಟಿದ್ದಾನೆ.

ಕಳವು: ಇಲ್ಲಿನ ಕುಸುಗಲ್‌ ಗ್ರಾಮದ ಸಿದ್ಧಾರೂಢ ಮಠ ಹಾಗೂ ಅಲ್ಲಿಂದ ಅರ್ಧ ಕಿ.ಮೀ. ದೂರದ ದುರ್ಗಾದೇವಿ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ಕಳ್ಳತನ ನಡೆದಿದೆ. ಮಠದ ಹುಂಡಿಯಲ್ಲಿದ್ದ ದೇಣಿಗೆಯನ್ನು ಈಚೆಗೆ ಮಂಡಳಿ ತೆಗೆದಿದ್ದ ಕಾರಣ ಅದರಲ್ಲಿ ಹೆಚ್ಚು ಹಣವಿರಲಿಲ್ಲ. ಹುಂಡಿಯಿಂದ ಸುಮಾರು ₹3 ಸಾವಿರ ಕಳವಾಗಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.