ADVERTISEMENT

ಆರಕ್ಕೇರದ ಮೂರಕ್ಕಿಳಿಯದ ದಾಖಲಾತಿ

ಪದವಿ ದಾಖಲಾತಿ: ಆಫ್‌ಲೈನ್‌ ಪ್ರಕ್ರಿಯೆಗೆ ಅವಕಾಶ ಕೊಟ್ಟರೂ ಕಾಣದ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 6:26 IST
Last Updated 8 ಅಕ್ಟೋಬರ್ 2022, 6:26 IST
   

ಹುಬ್ಬಳ್ಳಿ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪದವಿ ಕಾಲೇಜುಗಳ ದಾಖಲಾತಿ ಗಣನೀಯ ಕುಸಿತ ಕಂಡಿದೆ. ಆಫ್‌ಲೈನ್‌ ದಾಖಲಾತಿಗೆ ಅವಕಾಶ ನೀಡಿದರೂ ದಾಖಲಾತಿ ಪ್ರಮಾಣದಲ್ಲಿ ಗಮನಾರ್ಹ ಬದಲಾವಣೆ ಆಗದೆ ಇರುವುದು ವಿಶ್ವವಿದ್ಯಾಲಯಗಳ ಆಡಳಿತ ಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ.

ಸೆಪ್ಟೆಂಬರ್‌ ಮೊದಲ ವಾರದಲ್ಲಿ ಇಲಾಖೆಯಿಂದ ಬಿಡುಗಡೆ ಮಾಡಲಾಗಿದ್ದ ಮೊದಲ ಪಟ್ಟಿಯಲ್ಲಿ 100ಕ್ಕಿಂತ ಕಡಿಮೆ ದಾಖಲಾತಿ ಹೊಂದಿದ್ದ ಕಾಲೇಜುಗಳ ಮಾಹಿತಿಯಷ್ಟೇ ದಾಖಲಿಸಲಾಗಿತ್ತು. ಎರಡನೇ ಪಟ್ಟಿ ಸೆ.28ರಂದು ಬಿಡುಗಡೆಯಾಗಿದ್ದು, ರಾಜ್ಯದ 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 133 ಕಾಲೇಜುಗಳಲ್ಲಿ 100ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ನಾಲ್ಕು ಕಾಲೇಜುಗಳು ಒಂದಂಕಿಯ ದಾಖಲಾತಿ ಪಡೆದಿವೆ. 45 ಕಾಲೇಜುಗಳು 50ರೊಳಗೆ, ಉಳಿದ 84 ಕಾಲೇಜುಗಳು ನೂರರ ಒಳಗಿವೆ.

‘ಮೊದಲ ಪಟ್ಟಿಯಲ್ಲಿ ನಮ್ಮ ಕಾಲೇಜಿನ ದಾಖಲಾತಿ ಸಂಖ್ಯೆ 6 ಎಂದು ನಮೂದಾಗಿದೆ. ಆಫ್‌ಲೈನ್‌ನಲ್ಲಿ ಆಗಿರುವ ದಾಖಲಾತಿಯ ವಿವರಗಳನ್ನು ಯುಯುಸಿಎಂಎಸ್‌ಗೆ ಸೇರಿಸಲು ವಿಳಂಬವಾಗಿದ್ದರಿಂದ ಹೀಗಾಗಿದೆ. ಈ ಬಾರಿ ಬಿ.ಎ.ಗೆ 9, ಬಿ.ಕಾಂ.ಗೆ 76 ದಾಖಲಾತಿ ಆಗಿದೆ’ ಎಂದು
ಉಡುಪಿಯ ಲಕ್ಷ್ಮಿ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ನಿತ್ಯಾನಂದ ಗಾಂವ್ಕರ್ ಮಾಹಿತಿ ನೀಡಿದರು.

ADVERTISEMENT

ಕಳೆದ ವರ್ಷ ಬಿ.ಎ.ಯಲ್ಲಿ 36, ಬಿ.ಕಾಂ.ನಲ್ಲಿ 120 ವಿದ್ಯಾರ್ಥಿಗಳಿದ್ದರು. ಈ ಬಾರಿ ಬಹುತೇಕ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡಿದ್ದರಿಂದ ನಮ್ಮಲ್ಲಿ ದಾಖಲಾತಿ ಕಡಿಮೆ ಆಗಿದೆ ಎನ್ನುತ್ತಾರೆ ಪ್ರೊ.ಗಾಂವ್ಕರ್‌.

‘ಈ ಬಾರಿ ದಾಖಲಾತಿ ಕುಸಿತಕ್ಕೆ ಎನ್ಇಪಿ ನಿಯಮಾವಳಿಗಳು, ಪದವಿ ಶಿಕ್ಷಣ ಅವಧಿ ವಿಸ್ತರಣೆ, ಯುಯುಸಿಎಂಎಸ್ ಗೊಂದಲ, ನೆಟ್‌ವರ್ಕ್ ಸಮಸ್ಯೆಗಳೇ ಕಾರಣವಾಗಿವೆ. ಆಫ್‌ಲೈನ್‌ ದಾಖಲಾತಿಗೆ ತಡವಾಗಿ ಅವಕಾಶ ನೀಡಿದ್ದರಿಂದಲೂ ಸಮಸ್ಯೆ ಆಗಿದೆ’ ಎಂದು ಹಾವೇರಿಯ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರೊಬ್ಬರು ತಿಳಿಸಿದರು.

ಮತ್ತೆ ದಿನಾಂಕ ಮುಂದೂಡಿದ ಕವಿವಿ!: ಕರ್ನಾಟಕ ವಿಶ್ವವಿದ್ಯಾಲಯ ಮತ್ತೆ ದಾಖಲಾತಿ ದಿನಾಂಕ ಮುಂದೂಡಿದೆ. ನಿರಂತರ ದಿನಾಂಕ ಮುಂದೂಡುತ್ತಲೇ ಪ್ರವೇಶಾತಿಗೆ ದಂಡದ ಮೊತ್ತವನ್ನು ಹೆಚ್ಚಿಸುತ್ತಿರುವುದು ವಿದ್ಯಾರ್ಥಿಗಳ ಪೋಷಕರಲ್ಲಿ ಆತಂಕ ಹೆಚ್ಚಿಸಿದೆ. ಸೆಪ್ಟೆಂಬರ್‌ 27ರ ವರೆಗೆ ದಿನಾಂಕ ಮುಂದೂಡಿ ₹4,670 ದಂಡ ಸಹಿತ ದಾಖಲಾತಿಗೆ ಅವಕಾಶ ನೀಡಿತ್ತು. ಈಗ ಅಕ್ಟೋಬರ್‌ 13ರ ವರೆಗೆ ದಿನಾಂಕ ಮುಂದೂಡಿ ₹6670 ವಿಶೇಷ ದಂಡ ಸಹಿತ ದಾಖಲಾತಿಗೆ ಅನುಮತಿ ನೀಡಿದೆ.

‘ಇಲಾಖೆ ನೀಡಿದ ದಿನಾಂಕ ಮುಗಿದಿದೆ. ಬೇಡಿಕೆ ಮೇರೆಗೆ ದಿನಾಂಕ ಮುಂದೂಡಲಾಗಿದ್ದು, ನಾವು ಇಲಾಖೆಗೆ ದಂಡ ಕಟ್ಟಬೇಕಾಗುವುದರಿಂದ ಸಹಜವಾಗಿ ದಂಡ ಸಹಿತ ದಾಖಲಾತಿಗೆ ಅನುಮತಿ ನೀಡಲಾಗಿದೆ’ ಎಂದು ಕವಿವಿ ಕುಲಸಚಿವ ಯಶಪಾಲ್‌ ಕ್ಷೀರಸಾಗರ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.